ದೆಹಲಿ ಸೆಪ್ಟೆಂಬರ್ 02: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ (INDIA coalition) ಶುಕ್ರವಾರ ಮುಂಬೈನಲ್ಲಿ (Mumbai) ನಡೆಸಿದ ತನ್ನ ಮೂರನೇ ಸಭೆಯಲ್ಲಿ ಸೀಟು ಹಂಚಿಕೆ, ಪ್ರಮುಖ ಸಮಿತಿ ಮತ್ತು ಮುಂದಿನ ತಿಂಗಳು ಸಾರ್ವಜನಿಕ ಪ್ರಚಾರ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿದೆ. ಅವಧಿಗೂ ಮುನ್ನ ಲೋಕಸಭಾ ಚುನಾವಣೆ (Loksabha Election) ನಡೆಯಲಿದೆ ಎಂಬ ಊಹಾಪೋಹ ಮತ್ತು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯತೆಯನ್ನು ಅನ್ವೇಷಿಸಲು ಸಮಿತಿ ರಚನೆಯಾದ ಹೊತ್ತಲ್ಲೇ 28 ವಿರೋಧ ಪಕ್ಷಗಳ ಎರಡನೇ ಸಭೆ ನಡೆದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸುವ ನಿರ್ಣಯವನ್ನೂ ಮೈತ್ರಿಕೂಟ ಪ್ರಕಟಿಸಿದೆ.
ಆದಾಗ್ಯೂ, ಸಂಚಾಲಕರನ್ನು ನೇಮಿಸುವ ಅಥವಾ ಒಕ್ಕೂಟಕ್ಕೆ ಲಾಂಛನವನ್ನು ಅಂತಿಮಗೊಳಿಸುವ ಬಗ್ಗೆ ಘಟಕಗಳಿಗೆ ನಿರ್ಧರಿಸಲು ಸಾಧ್ಯವಾಗಲಿಲ್ಲ. ಆದರೆ ಮೂರನೇ ಸಭೆ ವಿಪಕ್ಷಗಳೆಲ್ಲವೂ ಒಗ್ಗಟ್ಟಾಗಿವೆ ಎಂಬ ಸಂದೇಶವನ್ನು ದಾಟಿಸಿದೆ. ಮುಂದಿನ ಕ್ರಮವನ್ನು ಚರ್ಚಿಸಲು ಮತ್ತು ನಿರ್ಧರಿಸಲು 14 ಸದಸ್ಯರ ಸಮನ್ವಯ ಸಮಿತಿಯನ್ನು ಈ ಸಭೆಯಲ್ಲಿ ರಚಿಸಲಾಗಿದೆ.
ಏತನ್ಮಧ್ಯೆ, ಬೆಳವಣಿಗೆಯ ಬಗ್ಗೆ ತಿಳಿದಿರುವ ಜನರ ಪ್ರಕಾರ ಇಂಡಿಯಾ ಮೈತ್ರಿಕೂಟದ ಮುಂದಿನ ಸಭೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ನವೆಂಬರ್‌ಗೆ ಮೊದಲು ನಿಗದಿಯಾಗಿರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಸ್ಥಳವು ನಿರ್ಣಾಯಕವಾಗಿದೆ.
ನಾವು ವಿಷಯಗಳನ್ನು ಸಮೀಪಿಸುತ್ತಿರುವ ರೀತಿಯಲ್ಲಿ ನಾಯಕರಲ್ಲಿ ಫ್ಲೆಕ್ಸಿಬಿಲಿಟಿಯನ್ನು ನಾವು ನೋಡಬಹುದು. ಸಹಜವಾಗಿಯೇ ಭಿನ್ನಾಭಿಪ್ರಾಯಗಳಿವೆ. ಆದರೆ ಆ ವ್ಯತ್ಯಾಸಗಳನ್ನು ಕಡಿಮೆಗೊಳಿಸಿದ ಮತ್ತು ಅದನ್ನು ನಿಭಾಯಿಸಿದ ವಿಧಾನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಶುಕ್ರವಾರ ಮುಂಬೈನಲ್ಲಿ ನಡೆಸದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಭ್ರಷ್ಟಾಚಾರದಲ್ಲಿ ಹೇಗೆ ಮುಳುಗಿದೆ ಎಂಬುದನ್ನು ಇಂಡಿಯಾ ಮೈತ್ರಿ ಸಾಬೀತುಪಡಿಸಿ ತೋರಿಸಲಿದೆ. ಈ ಚುನಾವಣೆಯಲ್ಲ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ ರಾಹುಲ್.
ಒಬ್ಬ ವ್ಯಕ್ತಿ ಒಕ್ಕೂಟದ ಮುಖವಾಗಬೇಕೆಂದು ನಾವು ಬಯಸುವುದಿಲ್ಲ ಮತ್ತು ಆದ್ದರಿಂದ ಸಮನ್ವಯ ಸಮಿತಿಯನ್ನು ಮಾಡಲು ನಿರ್ಧರಿಸಲಾಯಿತು ಎಂದು ಮುಂಬೈನಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ ಹಿರಿಯ ನಾಯಕರೊಬ್ಬರು ಹೇಳಿದರು.
ಸಭೆ ಆರಂಭವಾದ ತಕ್ಷಣ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಾವು ಮೈತ್ರಿಕೂಟದ ಸಂಚಾಲಕರಾಗಲು ಬಯಸುವುದಿಲ್ಲ ಎಂದು ಘೋಷಿಸಿದರು. ನಾವು ಸಾಮೂಹಿಕ ನಾಯಕತ್ವವನ್ನು ಬಯಸಿದ್ದೇವೆ.ಆದ್ದರಿಂದ ಸಂಚಾಲಕ ಸ್ಥಾನದ ಬಗ್ಗೆ ಚರ್ಚಿಸಲಿಲ್ಲ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ಹೇಳಿದರು.
ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಸಂಚಾಲಕರ ವಿಷಯವು ಅಜೆಂಡಾದಲ್ಲಿಲ್ಲ ಎಂದು ಸಮರ್ಥಿಸಿಕೊಂಡರು. ಹಲವು ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಸಮನ್ವಯ ಸಮಿತಿ ಮತ್ತು ಇತರ ಕೆಲವು ಸಮಿತಿಗಳನ್ನು ನೇಮಿಸಿರುವುದರಿಂದ ಸಂಚಾಲಕರ ಅಗತ್ಯವಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.
14 ಸದಸ್ಯರ ಸಮನ್ವಯ ಸಮಿತಿ ಸಭೆ ನಡೆಸಿ ಚರ್ಚಿಸಿ ಮುಂದಿನ ಸಭೆಯ ದಿನಾಂಕ ಮತ್ತು ಇತರ ವಿವರಗಳನ್ನು ಅಂತಿಮಗೊಳಿಸಲಿದ್ದು, ಅದು ಭೋಪಾಲ್‌ನಲ್ಲಿ ನಡೆಯುವ ಸಾಧ್ಯತೆಯಿದೆ.
ಈ ಹಿಂದೆ ಸಭೆಯಲ್ಲಿ ಚರ್ಚೆಯಾಗದ ಕಾರಣ ಮೈತ್ರಿಕೂಟದ ಲಾಂಛನ ಅನಾವರಣ ಕಾರ್ಯಕ್ರಮ ರದ್ದುಗೊಳಿಸಬೇಕಾಯಿತು. ಮಹಾ ವಿಕಾಸ್ ಅಘಾಡಿ ಒಕ್ಕೂಟದ ಮೂರು ಪಕ್ಷಗಳು ಜಂಟಿಯಾಗಿ ಸಿದ್ಧಪಡಿಸಿದ ಎಲ್ಲಾ ಮೂರು ಮಾದರಿಯ ಲೋಗೋಗಳನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಲೋಗೋ ಅಂತಿಮಗೊಳಿಸುವ ಮುನ್ನ ಜನರಿಂದ ಸಲಹೆಗಳನ್ನು ಪಡೆಯಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಇಂದು ರಚಿಸಲಾದ ಪ್ರಚಾರ ಸಮಿತಿಯು ಜನರ ಅಭಿಪ್ರಾಯವನ್ನು ಸೂಚಿಸಲು ಕೇಳುತ್ತದೆ. ಅದರ ಆಧಾರದ ಮೇಲೆ ಲಾಂಛನವನ್ನು ಅಭಿವೃದ್ಧಿಪಡಿಸಲಾಗುವುದು ಈ ಬಗ್ಗೆ ತಿಳಿದಿರುವ ನಾಯಕರೊಬ್ಬರು ಹೇಳಿದ್ದಾರೆ.
ಸೀಟು ಹಂಚಿಕೆ ವಿವಾದವನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪರಿಹರಿಸಬೇಕು ಎಂದು ಅರವಿಂದ ಕೇಜ್ರಿವಾಲ್ ಒತ್ತಿ ಹೇಳಿದರು.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೈತ್ರಿಯ ಪ್ರಗತಿಯ ವೇಗದಿಂದ ತೃಪ್ತರಾಗಿಲ್ಲ, ಚರ್ಚೆಗಳು ಮತ್ತು ನಿರ್ಧಾರಗಳನ್ನು ಶೀಘ್ರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ ನಾಯಕರೊಬ್ಬರು ಹೇಳಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ನಿರ್ಣಯ
ನಾವು ಎಲ್ಲಾ ಸೀಟು ಹಂಚಿಕೆ ಚರ್ಚೆಗಳು ಮತ್ತು ನಿರ್ಧಾರಗಳನ್ನು ತ್ವರಿತಗೊಳಿಸುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ಅವುಗಳನ್ನು ಮಾಡುವುದಾಗಿ ನಾವು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಗುರುವಾರದ ಸಭೆಯಲ್ಲಿ, ಮಮತಾ ಬ್ಯಾನರ್ಜಿ ಅವರು ಅಕ್ಟೋಬರ್ 2 ರಂದು ದೆಹಲಿಯ ರಾಜ್ ಘಾಟ್‌ನಲ್ಲಿ ಮಹಾತ್ಮಾ ಗಾಂಧಿಯವರ ಸ್ಮಾರಕಕ್ಕೆ ಸಮರ್ಪಿಸಲಾದ ಮೈತ್ರಿಯ ವಿಷನ್ ಡಾಕ್ಯುಮೆಂಟ್ ಅನ್ನು ಘೋಷಿಸಲು ಪ್ರಸ್ತಾಪಿಸಿದರು, ಇದನ್ನು ಎಲ್ಲಾ ನಾಯಕರು ಒಪ್ಪಿದ್ದಾರೆ ಮತ್ತು ಅದಕ್ಕೆ ಅನುಗುಣವಾಗಿ ಸಿದ್ಧತೆಗಳನ್ನು ಮಾಡಲಾಗುತ್ತದೆ.
ಒಂದು ರಾಷ್ಟ್ರ, ಒಂದು ಚುನಾವಣೆಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸುವ ಸರ್ಕಾರದ ಕ್ರಮವನ್ನು ವಿಪಕ್ಷ ನಾಯಕರು ಟೀಕಿಸಿದ್ದು, ಇದು ದೇಶದ ಫೆಡರಲ್ ರಚನೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಪಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ