ದೆಹಲಿ ಜನವರಿ 03: ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ (SRRKS) ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ (Sukhdev Singh Gogamedi) ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಎನ್‌ಐಎ ರಾಜಸ್ಥಾನ ಮತ್ತು ಹರ್ಯಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಬಂಧಿತ ಆರೋಪಿ ಅಶೋಕ್ ಕುಮಾರ್ ಗ್ಯಾಂಗ್‌ಸ್ಟರ್ ರೋಹಿತ್ ಗೋಡಾರಾ ಜತೆ ನಿಕಟ ಸಂಪರ್ಕ ಹೊಂದಿದ್ದು, ಗೊಗಮೆಡಿ ಹತ್ಯೆಯ ಹೊಣೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ವಹಿಸಿಕೊಂಡಿದ್ದ. ಗೋಡಾರಾ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ಗೆ ಸಂಬಂಧ ಹೊಂದಿದ್ದಾನೆ.
ಕುಮಾರ್ ಬಂಧನದೊಂದಿಗೆ, ಕೊಲೆಯಲ್ಲಿ ಬಂಧಿತರ ಒಟ್ಟು ಸಂಖ್ಯೆ 9 ಆಗಿದೆ. ಈ ಹಿಂದೆ ಎಂಟು ಮಂದಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. 2023 ರ ಡಿಸೆಂಬರ್ 5 ರಂದು ಜೈಪುರದ ಕರ್ಣಿ ಸೇನಾ ಮುಖ್ಯಸ್ಥರ ಶ್ಯಾಮ್ ನಗರ ನಿವಾಸದಲ್ಲಿ ನಡೆದ ಶೂಟೌಟ್‌ನಲ್ಲಿ ಗೊಗಮೆಡಿ ಮತ್ತು ಮತ್ತೊಬ್ಬ ವ್ಯಕ್ತಿ ನವೀನ್ ಶೇಖಾವತ್ ಹತ್ಯೆಯಾಗಿತ್ತು.
ಶೂಟರ್‌ಗಳನ್ನು ಜೈಪುರದ ಜೊತ್ವಾರಾ ನಿವಾಸಿ ರೋಹಿತ್ ರಾಥೋಡ್ ಮತ್ತು ಹರ್ಯಾಣದ ಮಹೇಂದ್ರಗಢದಿಂದ ನಿತಿನ್ ಫೌಜಿ ಎಂದು ಎಂದು ಗುರುತಿಸಲಾಗಿದೆ. ಈ ಹತ್ಯೆ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಗಾಯಗೊಂಡ ವ್ಯಕ್ತಿಗಳಲ್ಲಿ ಒಬ್ಬರಾದ ಅಜೀತ್ ಸಿಂಗ್ ನಂತರ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.
ತನಿಖಾ ಸಂಸ್ಥೆಯು ಡಿಸೆಂಬರ್ 11 ರಂದು ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡಿತು. 31 ಸ್ಥಳಗಳಲ್ಲಿ ಬುಧವಾರದ ದಾಳಿ ನಡೆಸಿದ ಎನ್ಐಎ ಹಲವಾರು ಶಂಕಿತರನ್ನು ಪ್ರಶ್ನಿಸಿದೆ.
ಇದನ್ನೂ ಓದಿ: ಕರ್ಣಿ ಸೇನಾ ಅಧ್ಯಕ್ಷನ ಹತ್ಯೆ ಪ್ರಕರಣ: ರಾಜಸ್ಥಾನದ 31 ಕಡೆ ಎನ್ಐಎ ದಾಳಿ
ನಡೆಯುತ್ತಿರುವ ತನಿಖೆಗಳ ಭಾಗವಾಗಿ, ಎನ್ಐಎ ಇಂದು ರಾಜಸ್ಥಾನ ಮತ್ತು ನೆರೆಯ ರಾಜ್ಯ ಹರ್ಯಾಣದಲ್ಲಿ ಆರೋಪಿಗಳು ಮತ್ತು ಹಲವಾರು ಶಂಕಿತರ ಮನೆಗಳು ಸೇರಿದಂತೆ ಒಟ್ಟು 31 ಸ್ಥಳಗಳ ಮೇಲೆ ದಾಳಿ ನಡೆಸಿತು. ಎನ್‌ಐಎ ತಂಡಗಳು ಆವರಣದಲ್ಲಿ ಸಮಗ್ರ ಶೋಧ ನಡೆಸಿದ್ದು, ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಡಿವಿಆರ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಪಿಸ್ತೂಲ್‌ಗಳು, ಮದ್ದುಗುಂಡುಗಳು, ಡಿಜಿಟಲ್ ಸಾಧನಗಳು ಮತ್ತು ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
“ರಾಜಸ್ಥಾನದ ಜುಂಜುನುವಿನಲ್ಲಿ ಹಲವಾರು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ನಂತರ ಪ್ರಮುಖ ಶಂಕಿತ ಅಶೋಕ್ ಕುಮಾರ್ ನ್ನು ಬಂಧಿಸಲಾಗಿದೆ” ಎಂದು ಎನ್ಐಎ ಹೇಳಿದೆ.
ಕುಮಾರ್ ಅವರ ವಿಚಾರಣೆಯು ಪ್ರಕರಣದಲ್ಲಿ ಅವರ ಅನುಮಾನಾಸ್ಪದ ಪಾತ್ರವನ್ನು ಬಹಿರಂಗಪಡಿಸಿದ್ದಲ್ಲದೆ ಕುಖ್ಯಾತ ಗ್ಯಾಂಗ್ ಸ್ಟರ್ ರೋಹಿತ್ ಗೋಡಾರಾ ಅವರೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿತು. ಈತ ಇಬ್ಬರು ಶೂಟರ್‌ಗಳನ್ನು ಎಸ್‌ಆರ್‌ಆರ್‌ಕೆಎಸ್ ಅಧ್ಯಕ್ಷ ಗೊಗಮೆಡಿಯನ್ನು ಹತ್ಯೆ ಮಾಡಲು ಪ್ರೇರೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಗಳು ಮತ್ತು ಶಂಕಿತರ ನಿರಂತರ ವಿಚಾರಣೆಯು ಹತ್ಯೆಯಲ್ಲಿ ಹರ್ಯಾಣ ಮತ್ತು ರಾಜಸ್ಥಾನ ಮೂಲದ ಹಾರ್ಡ್‌ಕೋರ್ ಕ್ರಿಮಿನಲ್‌ಗಳು ಮತ್ತು ಸಂಘಟಿತ ಕ್ರಿಮಿನಲ್ ಗ್ಯಾಂಗ್‌ಗಳ ಸದಸ್ಯರ ಕೈವಾಡವನ್ನು ಬಹಿರಂಗಪಡಿಸಿದೆ ಎಂದು ಫೆಡರಲ್ ಏಜೆನ್ಸಿ ಹೇಳಿದೆ.
“ಎಲ್ಲಾ ಆರೋಪಿಗಳು ಮತ್ತು ಶಂಕಿತರು ಗೊಗಮೆಡಿ ಹತ್ಯೆಯ ಮೊದಲು ಮತ್ತು ನಂತರ ಆರೋಪಿಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ಎನ್ಐಎ ತನಿಖೆಗಳ ಪ್ರಕಾರ ಕಂಡುಬಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ