Timeline: 24 ವರ್ಷದಲ್ಲಿ 9 ಬಾರಿ ಸಿಎಂ; ನಿತೀಶ್ ಕುಮಾರ್ ರಾಜಕೀಯ ಅಂಕುಡೊಂಕು ಪ್ರಯಾಣದ ಟೈಮ್​ಲೈನ್

|

Updated on: Jan 28, 2024 | 6:24 PM

Nitish Kumar Politics: ನಿತೀಶ್ ಕುಮಾರ್ ಕಳೆದ 24 ವರ್ಷದಲ್ಲಿ 9 ಬಾರಿ ಸಿಎಂ ಆಗಿದ್ದಾರೆ. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದರು. ಕಳೆದ 19 ವರ್ಷದಲ್ಲಿ 18 ವರ್ಷ ಅವರು ಸಿಎಂ ಸ್ಥಾನದಲ್ಲಿದ್ದಾರೆ. ಎನ್​ಡಿಎ ಮತ್ತು ಮಹಾಘಟಬಂಧನ್ ಜೊತೆ ನಿತೀಶ್ ಹಾವು ಏಣಿ ಆಟ ಇತ್ತೀಚೆಗೆ ಹೆಚ್ಚಾಗಿದೆ.

Timeline: 24 ವರ್ಷದಲ್ಲಿ 9 ಬಾರಿ ಸಿಎಂ; ನಿತೀಶ್ ಕುಮಾರ್ ರಾಜಕೀಯ ಅಂಕುಡೊಂಕು ಪ್ರಯಾಣದ ಟೈಮ್​ಲೈನ್
ನಿತೀಶ್ ಕುಮಾರ್
Follow us on

ಪಾಟ್ನಾ, ಜನವರಿ 28: ಲಾಲೂ ಪ್ರಸಾದ್ ಯಾದವ್ ಬಿಟ್ಟರೆ ಬಿಹಾರ ರಾಜ್ಯವನ್ನು ಅತಿಹೆಚ್ಚು ಆವರಿಸಿರುವುದು ನಿತೀಶ್ ಕುಮಾರ್ ಅವರೆಯೇ. 2005ರಿಂದ ಬಹುತೇಕ ಸತತವಾಗಿ ಅವರು ಸಿಎಂ ಆಗಿದ್ದಾರೆ. 2014-15ರಲ್ಲಿ ಬಿಟ್ಟರೆ ಉಳಿದ ಘಳಿಗೆ ನಿತೀಶ್ ಕುಮಾರ್ ಅವರೇ ಆಡಳಿತ ಚುಕ್ಕಾಣಿ ಹಿಡಿದಿರುವುದು. ಜೆಡಿಯು ಅಧ್ಯಕ್ಷರಾಗಿ ಅವರ ರಾಜಕೀಯ (Nitish Kumar political journey) ಬಹಳಷ್ಟು ತಿರುವುಗಳಿಂದ ಕೂಡಿದೆ. ಬಿಜೆಪಿ ಜೊತೆಗಿನ ಸ್ನೇಹ ಮತ್ತು ಮುನಿಸಿನ ಹಾವು ಏಣಿ ಆಟದ ನಡುವೆಯೂ ನಿತೀಶ್ ಕುಮಾರ್ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉಮೇದಿನಲ್ಲಿ ಇರುವ ಎನ್​ಡಿಎ ಸರ್ಕಾರಕ್ಕೆ ಈಗ ಬಿಹಾರವೂ ಮುಖ್ಯ. ಕಳೆದ ಬಾರಿಯ ಚುನಾವಣೆಯಲ್ಲಿ 40 ಸ್ಥಾನಗಳಲ್ಲಿ 39ರಲ್ಲಿ ಬಿಜೆಪಿ, ಜೆಡಿಯು ಹಾಗೂ ಎಲ್​ಜೆಪಿ ಇದ್ದ ಎನ್​ಡಿಎ ಮೈತ್ರಿಕೂಟ ಗೆದ್ದಿತ್ತು. ಈಗ ಅದೇ ಸಂಖ್ಯೆ ಉಳಿಸಿಕೊಳ್ಳುವುದು ಎನ್​ಡಿಎಗೆ ಸವಾಲಿನ ಕೆಲಸವಾಗಿದೆ. ಅದೇನೇ ಇರಲಿ, ನಿತೀಶ್ ಕುಮಾರ್ ಇತ್ತೀಚೆಗೆ ಎನ್​ಡಿಎಗೆ ಕೈಕೊಟ್ಟು ಆರ್​ಜೆಡಿ, ಕಾಂಗ್ರೆಸ್ ಸಖ್ಯ ಮಾಡಿದ್ದರು. ಆಗ ಬಿಜೆಪಿ ಇವರನ್ನು ಪಲ್ಟು ಕುಮಾರ್ ಎಂದು ಲೇವಡಿ ಮಾಡಿತ್ತು. ಈಗ ಕುಮಾರ್ ಮತ್ತೆ ಬಿಜೆಪಿ ಕಡೆ ವಾಲಿದ್ದಾರೆ.

ಇದನ್ನೂ ಓದಿ: Bihar: ನಿತೀಶ್ ಕುಮಾರ್ 9ನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ; ಬಿಹಾರದಲ್ಲಿ ಮತ್ತೆ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ

ಅಂತೆಯೇ ನಿತೀಶ್ ಕುಮಾರ್ ರಾಜಕೀಯ ಜೀವನ ಬಹಳ ಕುತೂಹಲ ಮೂಡಿಸುವಂತಿದೆ. ಅವರು ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದಾಗಿನಿಂದ ಅವರ ರಾಜಕೀಯ ಜೀವನದ ಹಾದಿಯ ಒಂದು ಟೈಮ್​ಲೈನ್ ಇಲ್ಲಿದೆ:

1985: ಬಿಹಾರ ವಿಧಾನಸಭೆಗೆ ನಿತೀಶ್ ಕುಮಾರ್ ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾದರು.

1998: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸರ್ಕಾರದಲ್ಲಿ ಅವರು ರೈಲ್ವೆ ಮತ್ತು ಕೃಷಿ ಸಚಿವರಾದರು.

2000: ಈ ವರ್ಷದ ಮಾರ್ಚ್ 3ರಂದು ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಜೆಡಿಯುಗೆ ಬಿಜೆಪಿ ಬೆಂಬಲ ನೀಡಿತ್ತು. ಆದರೆ, ಬಹುಮತ ಇರದ ಹಿನ್ನೆಲೆಯಲ್ಲಿ ಏಳು ದಿನದಲ್ಲಿ ಅವರು ರಾಜೀನಾಮೆ ನೀಡಬೇಕಾಯಿತು.

2003: ಜೆಡಿಯು ಜೊತೆ ಸಮತಾ ಪಕ್ಷ ವಿಲೀನಗೊಂಡಿತು.

2005: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಬಹುಮತ ಗಳಿಸಿತು. ನಿತೀಶ್ ಕುಮಾರ್ ಎರಡನೇ ಬಾರಿ ಮುಖ್ಯಮಂತ್ರಿ ಆದರು.

2013: ನರೇಂದ್ರ ಮೋದಿ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಎನ್​ಡಿಎ ಒಕ್ಕೂಟದಿಂದ ನಿತೀಶ್ ಕುಮಾರ್ ಹೊರಬಂದರು.

2014: ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ 40 ಕ್ಷೇತ್ರಗಳ ಪೈಕಿ ಗೆದ್ದಿದ್ದು ಕೇವಲ 2 ಮಾತ್ರ. ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2015: ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಕಾಂಗ್ರೆಸ್ ಹಾಗೂ ಆರ್​ಜೆಡಿ ಜೊತೆ ಸೇರಿ ಮೈತ್ರಿಕೂಟ ರಚಿಸಿತು. ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಕೂಡ ಬಂದಿತು. ಕುಮಾರ್ ಮತ್ತೆ ಸಿಎಂ ಆದರು.

2017: ಮಹಾಘಟಬಂಧನ್ ಸರ್ಕಾರ ಎರಡು ವರ್ಷ ಮಾತ್ರ ಉಳಿಯುತ್ತದೆ. ಬಿಜೆಪಿ ಜೊತೆ ಸೇರಿ ನಿತೀಶ್ ಸರ್ಕಾರ ರಚಿಸಿ ಮತ್ತೆ ಸಿಎಂ ಆಗುತ್ತಾರೆ.

2022: ನಿತೀಶ್ ಕುಮಾರ್ ಮತ್ತೊಮ್ಮೆ ಯುಟರ್ನ್ ತೆಗೆದುಕೊಂಡು ಬಿಜೆಪಿ ಸಖ್ಯ ತೊರೆದು ಮಹಾಘಟಬಂಧನ್ ಜೊತೆ ಮತ್ತೆ ಸರ್ಕಾರ ರಚಿಸುತ್ತಾರೆ.

2024: ಈಗ ಮಹಾಘಟಬಂಧನ್ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಮತ್ತೊಮ್ಮೆ ಕೈಕೊಟ್ಟು ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ಸರ್ಕಾರ ಮಾಡಿದ್ದಾರೆ. 9ನೇ ಬಾರಿ ಸಿಎಂ ಆಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ