Bihar: ನಿತೀಶ್ ಕುಮಾರ್ 9ನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ; ಬಿಹಾರದಲ್ಲಿ ಮತ್ತೆ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ
Nitish Kumar CM Again: ಬಿಹಾರದಲ್ಲಿ ಮತ್ತೊಮ್ಮೆ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನಿತೀಶ್ ಕುಮಾರ್ ಮತ್ತೆ ಸಿಎಂ ಆಗಿದ್ದಾರೆ. ಅವರು 9ನೇ ಬಾರಿ ಮುಖ್ಯಮಂತ್ರಿ ಆಗುತ್ತಿರುವುದು ವಿಶೇಷ. ಸಾಮ್ರಾಟ್ ಚೌಧರಿ ಡಿಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಕೆಲವರು ಸಚಿವರಾಗಿ ಸಂಪುಟ ಸೇರಿದ್ದಾರೆ.
ಪಾಟ್ನಾ, ಜನವರಿ 28: ಅನಿರೀಕ್ಷಿತ ಹಾಗೂ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಮಧ್ಯೆ ಬಿಹಾರ ರಾಜ್ಯದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಯ ಸರ್ಕಾರ (JDU BJP alliance government) ಮತ್ತೆ ಅಸ್ತಿತ್ವಕ್ಕೆ ಬಂದಿದೆ. ನಿತೀಶ್ ಕುಮಾರ್ (Nitish Kumar) ಬಿಹಾರದಲ್ಲಿ 9 ನೇ ಬಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಬಿಹಾರ ರಾಜಧಾನಿ ಪಾಟ್ನಾದ ರಾಜಭವನದಲ್ಲಿ ಇಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಭಾನುವಾರ (ಜ. 28) ನಿತೀಶ್ ಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಇದೇ ವೇಳೆ ಬಿಜೆಪಿ ಶಾಸಕ ಸಾಮ್ರಾಟ್ ಚೌಧರಿ ಅವರು ನೂತನ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಜಯ್ ಕುಮಾರ್ ಸಿನ್ಹಾ, ಡಾ. ಪ್ರೇಮ್ ಕುಮಾರ್, ವಿಜಯ್ ಕುಮಾರ್ ಚೌಧರಿ, ವಿಜೇಂದ್ರ ಪ್ರಸಾದ್ ಯಾದವ್, ಶ್ರವಣ್ ಕುಮಾರ್, ಸಂತೋಷ್ ಸುಮನ್ ಮತ್ತು ಸುಮಿತ್ ಕುಮಾರ್ ಸಿಂಗ್ ಅವರು ನೂತನ ಮೈತ್ರಿಸರ್ಕಾರದಲ್ಲಿ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ರಾಜ್ಯಪಾಲರು ಇಂದು ಇವರೆಲ್ಲರಿಗೂ ಪ್ರಮಾಣವಚನ ಬೋಧಿಸಿದ್ದಾರೆ.
#WATCH | Nitish Kumar takes oath as Bihar CM for the 9th time after he along with his party joined the BJP-led NDA bloc.#BiharPolitics pic.twitter.com/v9HPUQwhl3
— ANI (@ANI) January 28, 2024
ದಾಖಲೆ ಬರೆದಿರುವ ನಿತೀಶ್ ಕುಮಾರ್
ಜೆಡಿಯು ಪಕ್ಷದ ಅಧ್ಯಕ್ಷ ನಿತೀಶ್ ಕುಮಾರ್ ದಾಖಲೆಯ 9ನೇ ಬಾರಿಗೆ ಸಿಎಂ ಆಗಿದ್ದಾರೆ. ಬಿಹಾರದಲ್ಲಿ ದೀರ್ಘ ಕಾಲ ಮುಖ್ಯಮಂತ್ರಿಯಾಗಿರುವ ದಾಖಲೆ ಅವರದ್ದಾಗಿದೆ. ಇನ್ನೂ ಗಮನಾರ್ಹ ಅಂಶವೆಂದರೆ ನಿತೀಶ್ ಕುಮಾರ್ ಅವರು ತಮ್ಮ ಪಕ್ಷ ಬಹುಮತ ಪಡೆಯದೆಯೇ ಸುದೀರ್ಘ ಕಾಲ ರಾಜ್ಯದ ಚುಕ್ಕಾಣಿ ಹಿಡಿದಿರುವುದು.
ಇದನ್ನೂ ಓದಿ: ಬಿಹಾರ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಿತೀಶ್ ಕುಮಾರ್ ಹೇಳಿದ್ದೇನು?
ಬಿಜೆಪಿ ಜೊತೆ ಜೆಡಿಯು ಮರುಮೈತ್ರಿ ಮಾಡಿಕೊಳ್ಳುವ ಮುನ್ನ ಆರ್ಜೆಡಿ, ಕಾಂಗ್ರೆಸ್ ಜೊತೆ ಸೇರಿ ಮಹಾಘಟಬಂದನ್ ಮೈತ್ರಿಕೂಟದ ಭಾಗವಾಗಿತ್ತು. ಕೇಂದ್ರದ ಎನ್ಡಿಎ ಮೈತ್ರಿಕೂಟಕ್ಕೆ ತಿಲಾಂಜಲಿ ಹಾಡಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಭಾಗವಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದಿಂದ ಇಂಡಿಯಾ ಒಕ್ಕೂಟಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ನಿತೀಶ್ ಕುಮಾರ್ ಅವರು ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದ್ದಾರೆ.
ಇದೀಗ ಮತ್ತೆ ಎನ್ಡಿಎ ತೆಕ್ಕೆಗೆ ಅವರು ಬಂದಿದ್ದು, ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ಹೊಸ ಸರ್ಕಾರ ಮುನ್ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮೇಲೆ ಕಣ್ಣು ಇಟ್ಟಿರುವ ಬಿಜೆಪಿಗೂ ಈಗ ಒಂದಷ್ಟು ಬಲ ಹೆಚ್ಚಿದಂತಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Sun, 28 January 24