ಅತ್ಯಾಚಾರ ಪ್ರಕರಣದಲ್ಲಿ ತರುಣ್ ತೇಜ್‌ಪಾಲ್‌ಗೆ ಹಿನ್ನಡೆ; 10 ವರ್ಷದ ಜೈಲು ಶಿಕ್ಷೆಗೆ ತಡೆ ನೀಡಲು ಒಪ್ಪದ ಸುಪ್ರೀಂ ಕೋರ್ಟ್

‘ತೆಹಲ್ಕಾ’ ನಿಯತಕಾಲಿಕೆಯ ಮಾಜಿ ಸಂಸ್ಥಾಪಕ ಹಾಗೂ ಸಂಪಾದಕ ತರುಣ್ ತೇಜ್‌ಪಾಲ್ ಅವರಿಗೆ 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ವಿಧಿಸಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಲೆ ಅವರನ್ನೊಳಗೊಂಡ ಪೀಠವು, ಈ ಶಿಕ್ಷೆಗೆ ತಡೆ ನೀಡಲು ತಾವು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಗೋವಾ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತೇಜ್‌ಪಾಲ್ ಅವರ ಅರ್ಜಿಯನ್ನು ವಿರೋಧಿಸಿದರು. ಇದಕ್ಕೂ ಮುನ್ನ, ಆಗಸ್ಟ್ 6ರಂದು ಬಾಂಬೆ ಹೈಕೋರ್ಟ್, ತರುಣ್ ತೇಜ್‌ಪಾಲ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.

ಅತ್ಯಾಚಾರ ಪ್ರಕರಣದಲ್ಲಿ ತರುಣ್ ತೇಜ್‌ಪಾಲ್‌ಗೆ ಹಿನ್ನಡೆ; 10 ವರ್ಷದ ಜೈಲು ಶಿಕ್ಷೆಗೆ ತಡೆ ನೀಡಲು ಒಪ್ಪದ ಸುಪ್ರೀಂ ಕೋರ್ಟ್
ತರುಣ್ ತೇಜ್‌ಪಾಲ್
Image Credit source: PTI

Updated on: Nov 06, 2026 | 7:41 PM

ನವದೆಹಲಿ, ನವೆಂಬರ್ 6: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಮ್ಯಾಗಜಿನ್ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಲು ಮತ್ತು ತಮ್ಮ 10 ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಲು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ತಮ್ಮ ದೋಷಾರೋಪಣೆ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮುಖ್ಯ ಮೇಲ್ಮನವಿ ಅರ್ಜಿ ವಿಚಾರಣೆಗೆ ಬಾಕಿ ಇರುವಾಗ, ತರುಣ್ ತೇಜ್‌ಪಾಲ್‌ಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಎಮ್.ಎಮ್. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ಹೊರಡಿಸಿದೆ.

2013ರಲ್ಲಿ ಗೋವಾದಲ್ಲಿ ತಮ್ಮ ನಿಯತಕಾಲಿಕ ಆಯೋಜಿಸಿದ್ದ ಕಾರ್ಯಕ್ರಮವೊಂದರ ವೇಳೆ, ಹೋಟೆಲ್ ಲಿಫ್ಟ್‌ನಲ್ಲಿ ಕಿರಿಯ ಸಹೋದ್ಯೋಗಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ತರುಣ್ ತೇಜ್‌ಪಾಲ್ ದೋಷಿ ಎಂದು ಸಾಬೀತಾಯಿತು. ರಾಜಕೀಯ ದ್ವೇಷದ ಕಾರಣದಿಂದ ತಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು 62 ವರ್ಷದ ಈ ಪತ್ರಕರ್ತ ಹೇಳಿಕೊಂಡಿದ್ದಾರೆ.

Loading...

ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೂ ಮುನ್ನ ಆಕೆ ಬಳಿ ನಾನು ನಿನ್ನ ಬಾಸ್, ನಾನು ಏನು ಬೇಕಿದ್ರೂ ಮಾಡಬಹುದು ಎಂದಿದ್ದ ತರುಣ್ ತೇಜ್​ಪಾಲ್

ಕಪಿಲ್ ಸಿಬಲ್ ಮನವಿ:

ತರುಣ್ ತೇಜ್‌ಪಾಲ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, “ಮೇಲ್ಮನವಿ ವಿಚಾರಣೆಗೆ ನ್ಯಾಯಾಲಯ ಸಮಯ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ, ಆದರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅವರಿಗೆ ಮನೆಗೆ ಹೋಗಲು ಮಧ್ಯಂತರ ಜಾಮೀನು ನೀಡಬೇಕು” ಎಂದು ಕೋರಿದ್ದರು.


ಗೋವಾ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಮಧ್ಯಂತರ ಜಾಮೀನು ಕೋರಿಕೆಯನ್ನು ಕಟ್ಟುನಿಟ್ಟಾಗಿ ವಿರೋಧಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು ತರುಣ್ ತೇಜ್‌ಪಾಲ್ ಅವರ ಶಿಕ್ಷೆಯನ್ನು ತಡೆಹಿಡಿಯಲು ನಿರಾಕರಿಸಿತು.

ಇದನ್ನೂ ಓದಿ: ‘ಸಂವಿಧಾನವೇ ಶ್ರೇಷ್ಠ’; ಸಿಜೆಐ ವಿರುದ್ಧದ ಪೋಸ್ಟ್ ಪ್ರಕರಣದಲ್ಲಿ ಕೇರಳ ಕಾಂಗ್ರೆಸ್‌ಗೆ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್

ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶ:

ಹೈಕೋರ್ಟ್ ತೀರ್ಪಿನ ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆಗಸ್ಟ್ 25ರಂದು ನೀಡಿದ ಆದೇಶದಲ್ಲಿ, 10 ವರ್ಷಗಳ ಶಿಕ್ಷೆಯನ್ನು ಅನುಭವಿಸಲು 3 ವಾರಗಳ ಒಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ತರುಣ್ ತೇಜ್‌ಪಾಲ್ ಅವರಿಗೆ ನಿರ್ದೇಶನ ನೀಡಿತು. ಅಲ್ಲದೆ, ಶರಣಾಗತಿಯಿಂದ ವಿನಾಯಿತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿತು. ನ್ಯಾಯಾಲಯದ ಕಠಿಣ ನಿಲುವಿನ ಹಿನ್ನೆಲೆಯಲ್ಲಿ, ತರುಣ್ ತೇಜ್‌ಪಾಲ್ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕಾಯಿತು. ತರುಣ್ ತೇಜ್‌ಪಾಲ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದೆ. ತಮ್ಮ ಅಪರಾಧ ಸಾಬೀತಾಗಿರುವುದನ್ನು ಎತ್ತಿಹಿಡಿದ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ, ತರುಣ್ ತೇಜ್‌ಪಾಲ್ ಆಗಸ್ಟ್ 20ರಂದು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ. ಇದೇ ವೇಳೆ, ತೇಜ್‌ಪಾಲ್ ಅವರಿಗೆ ವಿಧಿಸಲಾದ ಶಿಕ್ಷೆಯನ್ನು ಹೆಚ್ಚಿಸಬೇಕೆಂದು ಕೋರಿ ಗೋವಾ ಸರ್ಕಾರವೂ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸುವುದು ಸೂಕ್ತ ಎಂದು ಸರ್ಕಾರ ವಾದಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us