Kannada News National Noida Supertech Twin Towers Demolition Today First of its kind operation in India 10 facts
Noida Supertech: 9 ಸೆಕೆಂಡ್ನಲ್ಲಿ ಧರೆಗುರುಳಲಿದೆ 337 ಅಡಿ ಎತ್ತರದ ಕಟ್ಟಡ, ಭಾರತದ ಬೃಹತ್ ಕಾರ್ಯಾಚರಣೆಯ ಅತಿಮುಖ್ಯ ಅಂಕಿಅಂಶಗಳಿವು
ಇಂದು ಕೆಡವ ಬೇಕಿರುವ ಅವಳಿ ಕಟ್ಟಡಗಳಿಗೆ ಕೇವಲ 8 ಮೀಟರ್ ದೂರದಲ್ಲಿ ಇತರ ಅಪಾರ್ಟ್ಮೆಂಟ್ಗಳಿವೆ. ಸುಮಾರು 7,000 ಜನರು ವಾಸವಿದ್ದಾರೆ.
ನೊಯ್ಡಾ ಅವಳಿ ಕಟ್ಟಡಗಳು
Follow us on
ದೆಹಲಿ: ಕಳೆದ ಕೆಲ ದಿನಗಳಿಂದ ದೇಶದ ಗಮನ ಸೆಳೆದಿದ್ದ ನೊಯ್ಡಾದ ‘ಸೂಪರ್ಟೆಕ್ ಅವಳಿ ಕಟ್ಟಡ’ಗಳ (Noida Supertech Twin Towers) ನೆಲಸಮ ಕಾರ್ಯಾಚರಣೆ ಇಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಇಂಥ ಕಾರ್ಯಾಚರಣೆ ಜಾಗತಿಕ ಇತಿಹಾಸದಲ್ಲಿಯೇ ಅಪರೂಪ ಎಂದು ಹೇಳಲಾಗಿದೆ. ನೋಯ್ಡಾದ ಸೆಕ್ಟರ್ 93ಎ ಪ್ರದೇಶದಲ್ಲಿರುವ ಎರಡು ದೊಡ್ಡ ಕಟ್ಟಡಗಳನ್ನು ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿತ್ತು. ಹಲವು ವರ್ಷಗಳ ಕಾನೂನು ಸಮರದ ನಂತರ ಕಟ್ಟಡಗಳನ್ನು ಕೆಡವುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಈ ಕಾರ್ಯಾಚರಣೆ ಎಷ್ಟು ದೊಡ್ಡದು ಎಂದು ತಿಳಿಯಲು ಅಂಕಿಅಂಶಗಳು ನೆರವಾಗಬಹುದು.
40 ಮಹಡಿಗಳು: ಎರಡೂ ಕಟ್ಟಡಗಳಲ್ಲಿ 40 ಮಹಡಿಗಳನ್ನು ಕಟ್ಟಲು ಆರಂಭದಲ್ಲಿ ಚಿಂತನೆ ನಡೆದಿತ್ತು. ಆದರೆ ನ್ಯಾಯಾಲಯವು ತಡೆಯಾಜ್ಞೆ ಕೊಟ್ಟ ಕಾರಣ ಒಂದಿಷ್ಟು ಮಹಡಿಗಳನ್ನು ಕಟ್ಟಲಿಲ್ಲ. ಕೆಲ ಮಹಡಿಗಳನ್ನು ಬಿಲ್ಡರ್ಗಳೇ ಒಡೆದು ತೆಗೆದಿದ್ದರು. ಇದೀಗ ಈ ಅವಳಿ ಕಟ್ಟಡಗಳ ಪೈಕಿ ಒಂದಾಗಿರುವ ‘ಅಪೆಕ್ಸ್ ಟವರ್ (Apex Tower) 32 ಹಾಗೂ ಸಯಾನಿ (Ceyane) 29 ಮಹಡಿಗಳನ್ನು ಹೊಂದಿದೆ. ಎರಡೂ ಕಟ್ಟಡಗಳಿಂದ 900+ ಫ್ಲಾಟ್ಗಳನ್ನು ಮಾರಲು ಬಿಲ್ಡರ್ಗಳು ಯೋಜನೆ ರೂಪಿಸಿದ್ದರು. ಅದರಂತೆ ಈ ಪೈಕಿ ಮೂರನೇ ಎರಡರಷ್ಟು ಫ್ಲಾಟ್ಗಳನ್ನು ಬುಕ್ ಮಾಡಲಾಗಿತ್ತು. ಒಂದಿಷ್ಟು ಫ್ಲಾಟ್ಗಳನ್ನು ಮಾರಾಟ ಮಾಡಲಾಗಿತ್ತು. ಕಟ್ಟಡ ಕೆಡವಲು ಆದೇಶ ಕೊಟ್ಟ ನ್ಯಾಯಾಲಯವು ಗ್ರಾಹಕರಿಗೆ ಬಡ್ಡಿ ಸಹಿತ ಹಣ ಹಿಂದಿರುಗಿಸುವಂತೆ ಆದೇಶಿಸಿತು. ಈಗ ಅಲ್ಲಿ ಅಸ್ತಿಪಂಜರದಂಥ ಆಕೃತಿ ಮಾತ್ರ ನಿಂತಿದೆ.
103 ಮೀಟರ್ (337 ಅಡಿ): ಅಪೆಕ್ಸ್ ಟವರ್ನ ಎತ್ತರ 103 ಮೀಟರ್ ಇದೆ. ಸಯಾನಿ 97 ಮೀಟರ್ ಎತ್ತರವಿದೆ. ಈ ಕಟ್ಟಡಗಳನ್ನು ಕೆಡವುವ ಗುತ್ತಿಗೆ ಪಡೆದಿರುವ ಎಡಿಫಿಸ್ ಎಂಜಿನಿಯರಿಂಗ್ ಡೆಮಾಲಿಶನ್ ಕಂಪನಿಯು ದಕ್ಷಿಣ ಆಫ್ರಿಕಾದ ತಜ್ಞರ ನೆರವು ಪಡೆದಿದೆ. ದಕ್ಷಿಣ ಆಫ್ರಿಕಾದ ರಾಜಧಾನಿ ಜೊಹನ್ಸ್ಬರ್ಗ್ನಲ್ಲಿ ಮೂರು ವರ್ಷಗಳ ಹಿಂದೆ 108 ಮೀಟರ್ ಎತ್ತರದ ಬ್ಯಾಂಕ್ ಕಟ್ಟಡವನ್ನು ಕೆಡವಿದ ಕಾರ್ಯಾಚರಣೆಯಲ್ಲಿ ಇವರು ಪಾಲ್ಗೊಂಡಿದ್ದರು. ಕೇರಳದಲ್ಲಿ 2020ರಲ್ಲಿ 68 ಮೀಟರ್ ಎತ್ತರದ ಕಟ್ಟಡ ಕೆಡವಿರುವುದು ಈವರೆಗಿನ ಅತಿದೊಡ್ಡ ಕಾರ್ಯಾಚರಣೆಯಾಗಿತ್ತು. ವಿಶ್ವದ ಅತಿದೊಡ್ಡ ಕಟ್ಟಡ ಕೆಡವುವ ಕಾರ್ಯಾಚರಣೆ ನಡೆದಿರುವ ಅಬುದಾಭಿಯಲ್ಲಿ. ಅಲ್ಲಿ 168 ಮೀಟರ್ ಎತ್ತರದ ಕಟ್ಟಡ ಕೆಡವಲಾಗಿತ್ತು.
8 ಮೀಟರ್ (26 ಅಡಿ): ಇಂದು ಕೆಡವ ಬೇಕಿರುವ ಅವಳಿ ಕಟ್ಟಡಗಳಿಗೆ ಕೇವಲ 8 ಮೀಟರ್ ದೂರದಲ್ಲಿ ಇತರ ಅಪಾರ್ಟ್ಮೆಂಟ್ಗಳಿವೆ. ಕೇವಲ 9ರಿಂದ 12 ಮೀಟರ್ ಆಸುಪಾಸಿನಲ್ಲಿ ಇನ್ನೂ ಹಲವು ಕಟ್ಟಡಗಳಿವೆ. ಈ ಕಟ್ಟಡಗಳಿಗೆ ದೂಳು ನುಗ್ಗದಂತೆ ತಡೆಯಲು ವಿಶೇಷ ಬಟ್ಟೆಯಿಂದ ಮುಚ್ಚಲಾಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಇದಕ್ಕೂ ಎತ್ತರದ ಕಟ್ಟಡ ಕೆಡವುವಾಗ ಪಕ್ಕದ ಕಟ್ಟಡಗಳು ಕೇವಲ 7.8 ಮೀಟರ್ ದೂರದಲ್ಲಿದ್ದವು. ಆ ಕಟ್ಟಡಗಳಿಗೆ ತೊಂದರೆಯಾಗದಂತೆ ಕಟ್ಟಡ ಕೆಡವಲಾಗಿತ್ತು.
3,500 ಕೆಜಿ: ಈ ಕಟ್ಟಡವನ್ನು ಸುರಕ್ಷಿತವಾಗಿ ಕೆಡವಲು ಕಂಬಗಳಲ್ಲಿ 7,000 ರಂಧ್ರಗಳನ್ನು ಕೊರೆದು ಸ್ಫೋಟಕಗಳನ್ನು ತುಂಬಲಾಗಿದೆ. ಈ ರಂಧ್ರಗಳು ಎರಡು ಮೀಟರ್ ಉದ್ದವಿದೆ. ಅಂದರೆ ಇಡೀ ಕಟ್ಟಡದಲ್ಲಿ ಸುಮಾರು 14 ಕಿಮೀಗಳಗಷ್ಟು ರಂಧ್ರಗಳಿದ್ದು, ಸ್ಫೋಟಕಗಳನ್ನು ತುಂಬಿಸಲಾಗಿದೆ. ಏಕಕಾಲಕ್ಕೆ ಸ್ಫೋಟಕಗಳು ಆ್ಯಕ್ಟಿವೇಟ್ ಆಗಲು ಅನುವಾಗುವಂತೆ 20,000 ಸರ್ಕೀಟ್ಗಳನ್ನು ಅಳವಡಿಸಲಾಗಿದೆ. ಡಿಟೊನೇಟರ್ಗಳ ಮೂಲಕ ಸ್ಫೋಟಕಕ್ಕೆ ಸಂಕೇತ ರವಾನೆಯಾದಾಗ ಏಕಕಾಲಕ್ಕೆ ಎಲ್ಲ ಕಂಬಗಳೂ ಸ್ಫೋಟಗೊಂಡು, ಲಂಬವಾಗಿ ಕಟ್ಟಡ ಕುಸಿಯುತ್ತದೆ (Straight Down). ಇದನ್ನು ಜಲಪಾತ ತಂತ್ರ (Waterfall Technique) ಎನ್ನುತ್ತಾರೆ.
9 ಸೆಕೆಂಡ್: ಕಟ್ಟಡ ಕುಸಿದು ಬೀಳಲು ಕೇವಲ 9 ಸೆಕೆಂಡ್ ಸಾಕು. ಆಫ್ರಿಕಾದಿಂದ ಬಂದಿರುವ ಮೂವರು ತಜ್ಞರು ಮತ್ತು ನೊಯ್ಡಾ ನಗರಾಡಳಿತದ ಎಂಜಿನಿಯರ್ಗಳ ಜೊತೆಗೆ ಪ್ರಾಜೆಕ್ಟ್ ಮ್ಯಾನೇಜರ್ ಸಹ ಸ್ಥಳದಲ್ಲಿದ್ದು ಡಿಟೊನೇಟರ್ ಮೂಲಕ ಸ್ಫೋಟಕಗಳನ್ನು ಆ್ಯಕ್ಟಿವೇಟ್ ಮಾಡುತ್ತಾರೆ. ಸ್ಫೋಟಗೊಳ್ಳುವ ಸ್ಥಳಕ್ಕೆ ಅತ್ಯಂತ ಸಮೀಪದಲ್ಲಿ ಒಟ್ಟು 10 ಮಂದಿ ಮಾತ್ರ ಇರುತ್ತಾರೆ. ಸ್ಫೋಟಗೊಳ್ಳುವ ಕಟ್ಟಡಕ್ಕೆ ಕೇವಲ 450 ಮೀಟರ್ ದೂರದಲ್ಲಿ ಗ್ರೇಟರ್ ನೊಯ್ಡಾ ಎಕ್ಸ್ಪ್ರೆಸ್ ವೇ ಹೆದ್ದಾರಿಯಿದ್ದು ಅದರಲ್ಲಿ ಕನಿಷ್ಠ ಅರ್ಧಗಂಟೆ ಸಂಚಾರ ನಿರ್ಬಂಧಿಸಲಾಗುತ್ತದೆ.
12 ನಿಮಿಷ: ಕಟ್ಟಡ ಸ್ಫೋಟದಿಂದ ಮೇಲೇಳುವ ದೂಳಿನ ಮೋಡವು ತಿಳಿಯಾಗಲು 12 ನಿಮಿಷಬೇಕಾಗಬಹುದು. ಗಾಳಿ ವೇಗವಾಗಿ ಬೀಸಿದರೆ, ಗಾಳಿಯ ದಿಕ್ಕು ಬದಲಾದರೆ ಇದು ಹೆಚ್ಚುಕಡಿಮೆಯಾಗಬಹುದು. ದೂಳು ಕಡಿಮೆಯಾದ ನಂತರ ಕಾರ್ಮಿಕರು ಅಕ್ಕಪಕ್ಕದ ಕಟ್ಟಡಗಳಿಗೆ ಧಾವಿಸಿ, ಸ್ವಚ್ಛತಾ ಕಾರ್ಯಾಚರಣೆ ಆರಂಭಿಸುತ್ತಾರೆ. ನಂತರ ಉರುಳಿದ ಕಟ್ಟಡದ ಅವಶೇಷ ತೆರವುಗೊಳಿಸಲು ಮುಂದಾಗುತ್ತಾರೆ. ಸುಮಾರು ಕಟ್ಟಡ ಕುಸಿದ ನಂತರ 55,000 ಟನ್ ಅವಶೇಷ ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಇದನ್ನು ಸಾಗಿಸಲು 3,000 ಟ್ರಕ್ ಟ್ರಿಪ್ಗಳು ಬೇಕಾಗುತ್ತವೆ.
ಭೂಕಂಪದ ಅನುಭವ: ಕಟ್ಟಡ ಕೆಡವಲು ಸ್ಫೋಟಕಗಳು ಸ್ಫೋಟಿಸಿದಾಗ ಅಕ್ಕಪಕ್ಕದ ಕಟ್ಟಡಗಳಲ್ಲಿ ಸೆಕೆಂಡ್ಗೆ 30 ಎಂಎಂ ತೀವ್ರತೆಯ ಭೂಕಂಪದ ಅನುಭವ ಆಗಬಹುದು. ಇದು ರಿಕ್ಟರ್ ಮಾಪಕದ ಲೆಕ್ಕದಲ್ಲಿ 0.4 ತೀವ್ರತೆಯ ಭೂಕಂಪ. ಸಾಮಾನ್ಯವಾಗಿ ಹೊಸದಾಗಿ ನಿರ್ಮಿಸಿದ ಕಟ್ಟಡಗಳಿಗೆ ರಿಕ್ಟರ್ ಮಾಪಕದ 6 ತೀವ್ರತೆಯ ಭೂಕಂಪ ತಡೆದುಕೊಳ್ಳುವ ಸಾಮರ್ಥ್ಯ ಇರುತ್ತದೆ.
7,000 ಮಂದಿ: ಕೆಡವುತ್ತಿರುವ ಕಟ್ಟಡಕ್ಕೆ ಸಮೀಪದಲ್ಲಿ ಸುಮಾರು 7,000 ಜನರು ವಾಸವಿದ್ದಾರೆ. ಇದರ ಜೊತಗೆ 150 ಸಾಕುಪ್ರಾಣಿಗಳು ಮತ್ತು 2,500 ವಾಹನಗಳು ಇವೆ. ಮುಂಜಾನೆ 7 ಗಂಟೆಗೆ ಜನರು ಮತ್ತು ಸಾಕುಪ್ರಾಣಿಗಳನ್ನು ಸ್ಥಳಾಂತರಿಸಲಾಗಿದೆ. ಬಹುತೇಕರು ನೆಂಟರು ಮತ್ತು ಗೆಳೆಯರ ಮನೆಗಳಿಗೆ ತೆರಳಿದ್ದಾರೆ. ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಎಂಜಿನಿಯರ್ಗಳು ಘೋಷಿಸುವವರೆಗೆ ಇವರನ್ನು ನಿರ್ಬಂಧಿತ ಸ್ಥಳಕ್ಕೆ ಬಿಡುವುದಿಲ್ಲ. ಈ ಪ್ರದೇಶದಲ್ಲಿ ಅಡುಗೆ ಅನಿಲ ಮತ್ತು ವಿದ್ಯುತ್ ಸಂಪರ್ಕವನ್ನು ಸಂಜೆ 4 ಗಂಟೆಗೆ ಮರುಸ್ಥಾಪಿಸಲಾಗುತ್ತದೆ. ಸಂಜೆ 5.30ರ ನಂತರ ಜನರು ನಿರ್ಬಂಧಿತ ಪ್ರದೇಶ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
9 ವರ್ಷಗಳು: ಕಳೆದ ವರ್ಷ (ಆಗಸ್ಟ್ 31, 2021) ಈ ಸಂಬಂಧ ಸುಪ್ರೀಂಕೋರ್ಟ್ ಅಂತಿಮ ಆದೇಶ ನೀಡಿತ್ತು. ‘ಸೂಪರ್ಟೆಕ್ ಎಮರಾಲ್ಡ್ ಕೋರ್ಟ್’ ಸೊಸೈಟಿಯ ನಿವಾಸಿಗಳು ಮೊದಲ ಬಾರಿಗೆ 2012ರಲ್ಲಿ ನ್ಯಾಯಾಲಯದ ಕದ ತಟ್ಟಿದ್ದರು. ಪರಿಷ್ಕೃತ ಯೋಜನೆಯ ಪ್ರಕಾರ ಮಾರ್ಪಡಿಸಿದ ನಂತರ ಅವಳಿ ಕಟ್ಟಡಗಳನ್ನು ಜನರ ವಾಸಕ್ಕೆ ಬಿಟ್ಟುಕೊಡಲಾಗಿತ್ತು. ಅನುಮೋದನೆ ಕೊಡುವಾಗಲೂ ಹಲವು ಅಕ್ರಮಗಳು ನಡೆದಿವೆ ಎಂದು ನಿವಾಸಿಗಳು ಆರೋಪಿಸಿದ್ದರು. ಕೆಲ ಅಧಿಕಾರಿಗಳಿಗೆ ಶಿಕ್ಷೆಯೂ ಆಗಿತ್ತು. 2014ರಲ್ಲಿ ಅಲಹಾಬಾದ್ ಹೈಕೋರ್ಟ್ ಕಟ್ಟಡ ಕೆಡವಲು ಆದೇಶಿಸಿತ್ತು. ನಂತರ ಸುಪ್ರೀಂಕೋರ್ಟ್ನಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಮೂರು ತಿಂಗಳಲ್ಲಿ ಕಟ್ಟಡ ಕೆಡವಬೇಕೆಂದು ಸುಪ್ರೀಂಕೋರ್ಟ್ ಆಗಸ್ಟ್ 31, 2021ರಲ್ಲಿ ತೀರ್ಪು ನೀಡಿತ್ತು. ತಾಂತ್ರಿಕ ಕಾರಣಗಳಿಂದಾಗಿ ಕಟ್ಟಡ ಕೆಡವುವ ಕಾರ್ಯಾಚರಣೆ 1 ವರ್ಷ ತಡವಾಯಿತು.
100 ಕೋಟಿ ರೂಪಾಯಿ: ಕಟ್ಟಡ ಕೆಡವುವ ಕಾರ್ಯಾಚರಣೆಗಾಗಿ ₹ 100 ಕೋಟಿ ಮೊತ್ತದ ಬಜೆಟ್ ಕಾಮಗಾರಿ ನಡೆಯಲಿದೆ. ಕೆಡವುವಾಗ ಅಕ್ಕಪಕ್ಕದ ಕಟ್ಟಡಗಳಿಗೆ ಆಗುವ ಹಾನಿಯನ್ನೂ ಭರಿಸಬೇಕಿದೆ. ಈ ವೆಚ್ಚಗಳನ್ನು ಸೂಪರ್ಟೆಕ್ ಕಂಪನಿಯೇ ಭರಿಸಬೇಕಿದೆ. ಕೆಡವುವ ಕಾರ್ಯಾಚರಣೆಗೆ ₹ 20 ಕೋಟಿ ಖರ್ಚಾದರೆ, ಕಟ್ಟಡದ ಅಸ್ಥಿಪಂಜರದಂಥ ಆಕೃತಿ ಕೆಡವಲು ₹ 50 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.