ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದ ಕಾರಣ ದೆಹಲಿ ಹೈಕೋರ್ಟ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ಗೆ ಸೋಮವಾರ ನೋಟಿಸ್ ನೀಡಿದೆ. ನ್ಯಾಯಮೂರ್ತಿ ರೇಖಾ ಪಲ್ಲಿ ಅವರ ನ್ಯಾಯಪೀಠ ಟ್ವಿಟರ್‌ಗೆ ಉತ್ತರಿಸಲು ಮೂರು ವಾರಗಳ ಕಾಲಾವಕಾಶ ನೀಡಿ ಜುಲೈ 6ಕ್ಕೆ ವಿಚಾರಣೆ ಮುಂದೂಡಿದೆ. ಮೇ 25 ರಿಂದ ಜಾರಿಗೆ ಬಂದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಎಥಿಕ್ಸ್ ಕೋಡ್) ನಿಯಮಗಳು 2021 ಅನ್ನು ಟ್ವಿಟರ್ ಪಾಲಿಸಲಿಲ್ಲ ಎಂದು ಆರೋಪಿಸಿರುವ ವಕೀಲ ಅಮಿತ್ ಆಚಾರ್ಯ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿತು.
ಹೊಸ ಮಾರ್ಗಸೂಚಿಗಳ ಅನ್ವಯ ಟ್ವಿಟರ್, ವಾಟ್ಸಾಪ್, ಫೇಸ್‌ಬುಕ್ ಮತ್ತು ಗೂಗಲ್ ತಮ್ಮ ಕಂಟೆಂಟ್ಗಳನ್ನು ನಿಯಂತ್ರಿಸಬೇಕಾಗಿದೆ. ಅದಕ್ಕಾಗಿ ಅಧಿಕಾರಿಗಳನ್ನು ನೇಮಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಟ್ವಿಟರ್ ಪರ ಹಾಜರಾದ ಹಿರಿಯ ವಕೀಲ ಸಜನ್ ಪೂವಾಯ, ಮೇ 28 ರಂದು ಈ ಬಗ್ಗೆ ಕುಂದುಕೊರತೆ ಪರಿಶೀಲಿಸಲು ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ಸರ್ಕಾರದ ವಕೀಲ ರಿಪುದಮನ್ ಭರದ್ವಾಜ್ ಈ ನಿಲುವನ್ನು ವಿರೋಧಿಸಿದ್ದಾರೆ. ಕೆಲವು ಟ್ವೀಟ್‌ಗಳ ವಿರುದ್ಧ ದೂರು ನೀಡಲು ಹೋದಾಗ ಟ್ವಿಟರ್ ನಿಗದಿತ ನಿಯಮಗಳನ್ನು ಪಾಲಿಸದಿರುವ ಬಗ್ಗೆ ತಮಗೆ ತಿಳಿದು ಬಂದಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಭಾರತದಲ್ಲಿನ ತಮ್ಮ ಉದ್ಯೋಗಿಗಳ ಬಗ್ಗೆ ಕಾಳಜಿ ಮತ್ತು ಇಲ್ಲಿ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂದು ಟ್ವಿಟರ್ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರವು, ಟ್ವಿಟ್ಟರ್ ಭಾರತವನ್ನು ಕೆಣಕಲು ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಮತ್ತು ನಿಯಮಗಳನ್ನು ನಿರ್ದೇಶಿಸುತ್ತಿದೆ ಎಂದು ಆರೋಪಿಸಿತ್ತು.
ಕೇಂದ್ರದ ಹೊಸ ನಿಯಮಗಳು ಮೂಲಭೂತ ಹಕ್ಕನ್ನು ಅಂದರೆ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ಗೂಗಲ್ ಸಿಇಒ ಸುಂದರ್ ಪಿಚೈ ಸುದ್ದಿಗಾರರೊಂದಿಗೆ ಮಾತನಾಡಿ, ಗೂಗಲ್ ಉಚಿತ ಮತ್ತು ಮುಕ್ತ ಇಂಟರ್ನೆಟ್ ಮಾಧ್ಯಮವನ್ನು ಪ್ರತಿಪಾದಿಸುತ್ತದೆ. ಹಾಗೆಂದು ಕಂಪನಿಯು ಸ್ಥಳೀಯ ಶಾಸಕಾಂಗ ಪ್ರಕ್ರಿಯೆಗಳನ್ನು ಗೌರವಿಸುತ್ತದೆ. ಆದರೆ ಅಗತ್ಯವಿದ್ದಾಗ ತಿರುಗಿ ಪ್ರಶ್ನಿಸುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಹೊಸ ಐಟಿ ನಿಯಮಗಳ ಉಲ್ಲಂಘನೆ: ಟ್ವಿಟರ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲು
Published On - 4:01 pm, Mon, 31 May 21