ಭುವನೇಶ್ವರ್: ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಒಡಿಶಾ ಆರೋಗ್ಯ ಸಚಿವ ನಬ ಕಿಶೋರ್ ದಾಸ್ (Odisha Minister Nab Kishore Das) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ್ದಾರೆ. ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್ನ ಗಾಂಧಿ ಚೌಕ್ ಎಂಬಲ್ಲಿ ಇಂದು (ಜನವರಿ 29) ಮಧ್ಯಾಹ್ನ 12:30ಕ್ಕೆ ಪೊಲೀಸ್ ಅಧಿಕಾರಿ ಎಎಸ್‌ಐ ಗೋಪಾಲ್ ಚಂದ್ರ ದಾಸ್ ಅವರು ಸಚಿವರ ಎದೆಗೆ ಗುಂಡು ಹಾರಿಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸಚಿವ ನಬ ಕಿಶೋರ್ ದಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಭುವನೇಶ್ವರದ ಅಪೋಲೊ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Odisha Minister Attacked: ಒಡಿಶಾ ಸಚಿವ ನಬ ದಾಸ್ ಮೇಲೆ ಗುಂಡಿನ ದಾಳಿ, ಗಂಭೀರ ಗಾಯ
ಇಂದು ಝಾರ್ಸುಗುಡಾದ ಗಾಂಧಿ ಚೌಕ್‌ನಲ್ಲಿ ಆರೋಗ್ಯ ಸಚಿವ ನಬಾ ದಾಸ್ ಮೇಲೆ ಎಎಸ್‌ಐ ಗುಂಡು ಹಾರಿಸಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಭುವನೇಶ್ವರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಅನೇಕರು ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆದರೆ, ಗುಂಡು ಸಚಿವ ನಬಾ ಕಿಶೋರ್ ದಾಸ್ ದೇಹದಿಂದ ಹೊರಬಂದಿದ್ದು, ಹೃದಯ, ಶ್ವಾಸಕೋಶದಲ್ಲಿ ಗಂಭೀರ ಗಾಯದಿಂದ ನಿಧನರಾಗಿದ್ದಾರೆ ಎಂದು ಅಪೋಲೋ ಆಸ್ಪತ್ರೆ ತಿಳಿಸಿದೆ.
ಇನ್ನು ನಬಾ ಕಿಶೋರ್ ಮೇಲೆ ಫೈರಿಂಗ್ ನಡೆಸಿದ್ದ ಎಎಸ್‌ಐ ಗೋಪಾಲ್ ದಾಸ್ ನನ್ನು ಪೊಲೀಸರು ಬಂಧಿಸಿದ್ದು, ಸಚಿವರ ಎದೆಗೆ ಏಕೆ ಗುಂಡು ಹಾರಿಸಿದರೆಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಸೂಕ್ತ ತನಿಖೆಗೆ ಒಡಿಶಾ ಸರ್ಕಾರ ಸಿಐಡಿ ಪೊಲೀಸರ ವಿಶೇಷ ತಂಡವನ್ನು ರಚಿಸಿದೆ. ಡಿವೈಎಸ್‌ಪಿ ನೇತೃತ್ವದಲ್ಲಿ ಸೈಬರ್ ತಜ್ಞರು, ಬ್ಯಾಲಿಸ್ಟಿಕ್ ತಜ್ಞರು ಮತ್ತು ಕ್ರೈಂ ಬ್ರ್ಯಾಂಚ್ ಅಧಿಕಾರಿಗಳನ್ನೊಳಗೊಂಡ 7 ಸದಸ್ಯರ ತಂಡ ರಚನೆ ಮಾಡಲಾಗಿದೆ.
Shocked and disturbed by the death of Shri Naba Kishore Das ji, Odisha Health minister, in a dastardly act of violence. My deepest condolences to his family and well wishers.
— President of India (@rashtrapatibhvn) January 29, 2023
ರಾಷ್ಟ್ರಪತಿ ಸಂತಾಪ
ಒಡಿಶಾ ಸಚಿವ ನಬ ಕಿಶೋರ್ ದಾಸ್ ದುರ್ಮರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಘಾತ ವ್ಯಕ್ತಪಡಿಸಿದ್ದು, ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
Published On - 8:32 pm, Sun, 29 January 23