Train Accident: ಒಡಿಶಾ ರೈಲು ಅಪಘಾತ, ಮೃತರ ಸಂಬಂಧಿಕರಿಗೆ 10 ಲಕ್ಷ, ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಕೇಂದ್ರ

|

Updated on: Jun 02, 2023 | 11:05 PM

ಒಡಿಶಾದ ಬಾಲಸೋರ್‌ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂದವರಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.

Train Accident: ಒಡಿಶಾ ರೈಲು ಅಪಘಾತ, ಮೃತರ ಸಂಬಂಧಿಕರಿಗೆ 10 ಲಕ್ಷ, ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಕೇಂದ್ರ
ಅಪಘಾತದ ತೀವ್ರತೆಗೆ ನುಜ್ಜುಗುಜ್ಜಾಗಿರುವ ಬೋಗಿಗಳು
Follow us on

ನವದೆಹಲಿ: ಒಡಿಶಾದ ಬಾಲಸೋರ್‌ (Balasore) ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂದವರಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್  (Ashwini Vaishnaw) ಘೋಷಿಸಿದ್ದಾರೆ. ಅದೇ ರೀತಿ ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ (Coromandel Express) ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ದುರಂತದಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಒಡಿಶಾದ ಘಟನಾ ಸ್ಥಳಕ್ಕೆ ಧಾವಿಸುತ್ತಿದ್ದೇನೆ. ಘಟನೆಯಲ್ಲಿ ಸಾವಿಗೀಡಾದವರ ಕುಟುಂಬದವರಿಗೆ ಸಂತಾಪಗಳು. ಗಾಯಾಳುಗಳು ಬೇಗನೆ ಚೇತರಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇವೆ. ಭುವನೇಶ್ವರ ಮತ್ತು ಕೋಲ್ಕತ್ತಗಳಿಂದ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿವೆ. ಎನ್​​ಡಿಆರ್​ಎಫ್, ರಾಜ್ಯ ಸರ್ಕಾರಗಳ ತಂಡಗಳೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ವಾಯುಪಡೆಯ ತಂಡವೂ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Odisha Train Accident: ಒಡಿಶಾದ ಬಾಲಸೋರ್​​ನಲ್ಲಿ ಭೀಕರ ರೈಲು ಅಪಘಾತ; 50 ಮಂದಿ ಸಾವು

ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಸಂಜೆ ಒಡಿಶಾದ ಬಾಲಸೋರ್‌ನಿಂದ ಸುಮಾರು 40 ಕಿಮೀ ದೂರದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ ರೈಲಿನ 3 ಸ್ಲೀಪರ್ ಕೋಚ್‌ಗಳನ್ನು ಬಿಟ್ಟು ಉಳಿದ ಬೋಗಿಗಳು ಹಳಿತಪ್ಪಿದ್ದವು. ಸುಮಾರು 18 ಬೋಗಿಗಳು ಹಳಿ ತಪ್ಪಿವೆ ಎನ್ನಲಾಗಿದೆ. ಈ ರೈಲು ಚೆನ್ನೈ ಸೆಂಟ್ರಲ್‌ ಹಾಗೂ ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದ ಮಧ್ಯೆ ಸಂಚರಿಸುತ್ತಿತ್ತು.

ಇದನ್ನೂ ಓದಿ: Odisha Train Accident: ರೈಲು ದುರಂತದಿಂದ ಆಘಾತವಾಗಿದೆ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ; ಪ್ರಧಾನಿ ಮೋದಿ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಖುದ್ದು ಮಾಹಿತಿ ಪಡೆಯುತ್ತಿದ್ದೇವೆ ಎಂದು ಉಭಯ ನಾಯಕರು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 pm, Fri, 2 June 23