ಭಾರತದಲ್ಲಿ ಕೊವಿಡ್​ 19 ಮೂರನೇ ಅಲೆ ಫೆಬ್ರವರಿಯಲ್ಲಿ ಉತ್ತುಂಗಕ್ಕೆ ಏರಿಕೆ; ಎಚ್ಚರಿಕೆ ನೀಡಿದ ವಿಜ್ಞಾನಿಗಳು

| Updated By: Lakshmi Hegde

Updated on: Dec 22, 2021 | 8:44 AM

ಡಿ.10ರ ನಂತರದ ಒಮಿಕ್ರಾನ್​ ನಂತರದ ಕೊವಿಡ್​ 19 ಚಲನೆಗಳು ಸ್ವಲ್ಪ ವಿಭಿನ್ನ ಪಥವನ್ನು ತೋರಿಸುತ್ತಿವೆ. ಇದರ ಪ್ರಕಾರ ಜನವರಿ ಕೊನೆಯ ವೇಳೆಗೆ ಪ್ರತಿದಿನ 1.5 ಲಕ್ಷ ಕೇಸ್​ಗಳು ದಾಖಲಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರ ಅಂದಾಜಾಗಿದೆ.

ಭಾರತದಲ್ಲಿ ಕೊವಿಡ್​ 19 ಮೂರನೇ ಅಲೆ ಫೆಬ್ರವರಿಯಲ್ಲಿ ಉತ್ತುಂಗಕ್ಕೆ ಏರಿಕೆ; ಎಚ್ಚರಿಕೆ ನೀಡಿದ ವಿಜ್ಞಾನಿಗಳು
ಕೊರೊನಾ ಟೆಸ್ಟ್​
Follow us on

ದೆಹಲಿ: ಭಾರತದಲ್ಲಿ ಕೊವಿಡ್ 19 ಮೂರನೇ ಅಲೆ (Covid 19 3rd Wave) 2022ರ ಫೆಬ್ರವರಿಯಲ್ಲಿ ಉತ್ತುಂಗಕ್ಕೆ ಏರುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ಶುರುವಾಗಿರುವ ಒಮಿಕ್ರಾನ್ (Omicron)​ ಪ್ರಸರಣವೇ ಕೊವಿಡ್​ 19 ಮೂರನೇ ಅಲೆಗೆ ಕಾರಣವಾಗಲಿದ್ದು, ಆದರೆ ಈ ಅಲೆ 2ನೇ ಅಲೆಯಷ್ಟು ಭೀಕರವಾಗಿ ಇರುವುದಿಲ್ಲ. ಸ್ವಲ್ಪ ಸೌಮ್ಯವಾಗಿ ಇರಲಿದೆ ಎಂದು ದೇಶದ ಕೊವಿಡ್​ 19 ಪಥವನ್ನು ಟ್ರ್ಯಾಕ್​​ ಮಾಡುವಲ್ಲಿ ಸಕ್ರಿಯರಾಗಿರುವ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಒಮಿಕ್ರಾನ್​ ಡೆಲ್ಟಾಕ್ಕಿಂತಲೂ ಮೂರು ಪಟ್ಟು ಹೆಚ್ಚು ಪ್ರಸರಣಗೊಳ್ಳುತ್ತಿದೆ. ಅದು ಲಸಿಕೆಯ ದಕ್ಷತೆಯನ್ನೇ ಕುಗ್ಗಿಸುತ್ತಿದೆ. ಹೀಗಾಗಿ ಭಾರತದಲ್ಲಿ ಫೆಬ್ರವರಿ ಹೊತ್ತಿಗೆ ದಿನಕ್ಕೆ 1.5 ಲಕ್ಷ ದಿಂದ 1.8 ಲಕ್ಷದವರೆಗೆ ಕೊರೊನಾ ಪ್ರಕರಣಗಳು ಪತ್ತೆಯಾಗಬಹುದು ಎಂದು  ಐಐಟಿ ಕಾನ್ಪುರದ ಮನೀಂದ್ರ ಅಗರವಾಲ್ ಮತ್ತು ಐಐಟಿ ಹೈದರಾಬಾದ್‌ನ ಎಂ ವಿದ್ಯಾಸಾಗರ್ ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಇವರಿಬ್ಬರೂ ಕೊವಿಡ್​ 19 ಪಥದ ಟ್ರ್ಯಾಕ್​ಗೆ ಸೂತ್ರ ಮಾದರಿ ರಚಿಸಿದವರಾಗಿದ್ದು, ರಾಷ್ಟ್ರೀಯ ಕೊವಿಡ್​ 19 ಸೂಪರ್​ ಮಾಡೆಲ್ ಸಮಿತಿಯ ಸದಸ್ಯರೂ ಹೌದು. 

ಡಿ.10ರ ನಂತರದ ಒಮಿಕ್ರಾನ್​ ನಂತರದ ಕೊವಿಡ್​ 19 ಚಲನೆಗಳು ಸ್ವಲ್ಪ ವಿಭಿನ್ನ ಪಥವನ್ನು ತೋರಿಸುತ್ತಿವೆ. ಇದರ ಪ್ರಕಾರ ಜನವರಿ ಕೊನೆಯ ವೇಳೆಗೆ ಪ್ರತಿದಿನ 1.5 ಲಕ್ಷ ಕೇಸ್​ಗಳು ದಾಖಲಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗೇ ಮಾರ್ಚ್ ಅಂತ್ಯದ ಹೊತ್ತಿಗೆ ಪ್ರಕರಣಗಳಲ್ಲಿ ಇಳಿಮುಖವಾಗುವ ಅಂದಾಜಿದೆ. ಅಂದರೆ ಕೊವಿಡ್ 19 ಮೂರನೇ ಅಲೆಯನ್ನು ಕೊನೆಗಾಣಿಸಲು ಒಂದು ತಿಂಗಳು ಸಾಕಾಗುತ್ತದೆ ಎಂದು ವಿಜ್ಞಾನಿಗಳಿಬ್ಬರೂ ವಿವರಿಸಿದ್ದಾರೆ. ಆದರೆ ಒಮಿಕ್ರಾನ್​ ಬಗ್ಗೆ, ಅದರ ಮಾರಕತೆಯ ಬಗ್ಗೆ ಈಗಲೇ ಹೇಳುವುದು ಸ್ವಲ್ಪ ಕಷ್ಟ ಎಂಬ ಅಭಿಪ್ರಾಯವನ್ನೂ ಹೊರಹಾಕಿದ್ದಾರೆ.

ಒಮಿಕ್ರಾನ್​ ಸೋಂಕು ಮೊದಲು ಪತ್ತೆಯಾಗಿದ್ದು ನವೆಂಬರ್​ ತಿಂಗಳಲ್ಲಿ, ದಕ್ಷಿಣ ಆಫ್ರಿಕಾದಲ್ಲಿ. ಅದಾದ ನಂತರ ಈಗ 90 ದೇಶಗಳಲ್ಲಿ ವ್ಯಾಪಿಸಿದೆ. ಅದರಲ್ಲೂ ಯುಕೆ, ಯುಎಸ್​ಗಳಲ್ಲಿ ತೀವ್ರತೆ ಹೆಚ್ಚಾಗಿದೆ. ಭಾರತದಲ್ಲೂ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಾರ್​ ರೂಂಗಳನ್ನು ಮತ್ತೆ ಪ್ರಾರಂಭಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಸೂಚನೆ ನೀಡಿದ್ದು, ಒಮಿಕ್ರಾನ್​ ನಿಯಂತ್ರಣ ಕ್ರಮಗಳನ್ನು ಶುರು ಮಾಡುವಂತೆ ತಿಳಿಸಿದೆ.  ಒಮಿಕ್ರಾನ್​ ಪ್ರಸರಣದ ವೇಗ ಅತ್ಯಂತ ಹೆಚ್ಚಾಗಿರುವ ಕಾರಣ, ದಿನಕ್ಕೆ 1.7-1.8 ಲಕ್ಷ ಕೇಸ್​ವರೆಗೂ ದಾಖಲಾಗಬಹುದು ಎಂಬುದು ಆರೋಗ್ಯ ತಜ್ಞರ ಎಚ್ಚರಿಕೆ. ಭಾರತದಲ್ಲಿ ಕೊವಿಡ್​ 19 ಎರಡನೇ ಅಲೆ ಅತ್ಯಂತ ಭೀಕರವಾಗಿತ್ತು. ದಿನಕ್ಕೆ 4 ಲಕ್ಷ ಕೊರೊನಾ ಕೇಸ್​​ಗಳೂ ದಾಖಲಾದ ಉದಾಹರಣೆ ಇತ್ತು. ಆಕ್ಸಿಜನ್​, ಬೆಡ್​​ಗಳ ಕೊರತೆ ಎದುರಾಗಿತ್ತು. ಆದರೆ ಈ ಬಾರಿ ಅಂಥ ಅಪಾಯಗಳಿಗೆ ಅವಕಾಶ ಕೊಡಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ:  R Madhavan: ನೆಟ್​​ಫ್ಲಿಕ್ಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಮಾಧವನ್ ನಟನೆಯ ವೆಬ್ ಸೀರೀಸ್; ಏನಿದು ಸಮಾಚಾರ?