ಪಹಲ್ಗಾಮ್​ ದಾಳಿಗೆ ಒಂದು ತಿಂಗಳು, ಆಪರೇಷನ್​ ಸಿಂಧೂರ್​ನಿಂದ ಸರ್ವಪಕ್ಷ ಸಂಸದರ ನಿಯೋಗ ರಚನೆವರೆಗೆ ಇಲ್ಲಿದೆ ಮಾಹಿತಿ

Pahalgam Terrorist Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕ ದಾಳಿ ನಡೆದು ಇಂದಿಗೆ ಒಂದು ತಿಂಗಳು ಕಳೆದಿದೆ. ಪ್ರಿಲ್ 22 ರಂದು ಕಣಿವೆಯಲ್ಲಿ ಭಯೋತ್ಪಾದಕರು ಪ್ರವಾಸಿಗರ ಬಳಿ ನಿಮ್ಮ ಧರ್ಮ ಯಾವುದು ಎಂದು ಕೇಳಿ ಹಿಂದೂಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿರುವುದು ಬಹಿರಂಗವಾಯಿತು, ನಂತರ ಭಾರತವು ಭಯೋತ್ಪಾದನೆಗೆ ಆಶ್ರಯ ನೀಡುತ್ತಿದ್ದ ನೆರೆಯ ದೇಶದ ವಿರುದ್ಧ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ಹಾಗಾದರೆ ಒಂದು ತಿಂಗಳಲ್ಲಿ ಏನೆಲ್ಲಾ ನಡೆಯಿತು ಎನ್ನುವ ಮಾಹಿತಿ ಇಲ್ಲಿದೆ.

ಪಹಲ್ಗಾಮ್​ ದಾಳಿಗೆ ಒಂದು ತಿಂಗಳು, ಆಪರೇಷನ್​ ಸಿಂಧೂರ್​ನಿಂದ ಸರ್ವಪಕ್ಷ ಸಂಸದರ ನಿಯೋಗ ರಚನೆವರೆಗೆ ಇಲ್ಲಿದೆ ಮಾಹಿತಿ
ಪಹಲ್ಗಾಮ್ ದಾಳಿ
Image Credit source: CNN

Updated on: May 22, 2025 | 1:05 PM

ನವದೆಹಲಿ, ಮೇ 22: ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್(Pahalgam)​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ನಡೆದು ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ಏಪ್ರಿಲ್ 22ರಂದು ಈ ದುರ್ಘಟನೆ ನಡೆದಿತ್ತು. ಇಲ್ಲಿಯವರೆಗೆ ಏನೆಲ್ಲಾ ಬೆಳವಣಿಗೆಗಳು ನಡೆದಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಈ ಒಂದು ತಿಂಗಳಲ್ಲಿ ಸಾಕಷ್ಟು ಘಟನೆಗಳು ಸಂಭವಿಸಿವೆ. ಭಾರತವು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿತು. ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿ ಭಾರತ ಆಪರೇಷನ್ ಸಿಂಧೂರ್ ಅಡಿಯಲ್ಲಿ ದಾಳಿ ನಡೆಸಿತ್ತು. ಪಾಕಿಸ್ತಾನದೊಂದಿಗೆ ಯುದ್ಧದ ಪರಿಸ್ಥಿತಿ ಉದ್ಭವಿಸಿತ್ತು. ನಂತರ ಕದನ ವಿರಾಮವನ್ನೂ ಸಹ ಘೋಷಿಸಲಾಯಿತು ಪಹಲ್ಗಾಮ್ ದಾಳಿಯ ತನಿಖೆಯಿಂದ ಹಿಡಿದು ಭಾರತದ ಜಾಗತಿಕ ಕಾರ್ಯಾಚರಣೆಯವರೆಗೆ ಈ ಒಂದು ತಿಂಗಳಲ್ಲಿ ಏನಾಯಿತು ನೋಡೋಣ.

ಪಹಲ್ಗಾಮ್ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ
ಪಹಲ್ಗಾಮ್ ದಾಳಿಯ ಮರುದಿನವೇ, ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತು. ಏಪ್ರಿಲ್ 23 ರಂದು ಎನ್‌ಐಎ ತಂಡವು ಈ ಭಯೋತ್ಪಾದಕ ದಾಳಿಯ ತನಿಖೆಯನ್ನು ಪ್ರಾರಂಭಿಸಿತ್ತು. ತನಿಖಾ ತಂಡವು ಬೈಸರನ್ ಕಣಿವೆಯನ್ನು ತಲುಪಿ ಅಪರಾಧದ ಸ್ಥಳವನ್ನು ಪರಿಶೀಲಿಸಿತು ಮತ್ತು ವಿಚಾರಣೆ ನಡೆಸಿತು. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಮತ್ತು ಪಾಕಿಸ್ತಾನದಲ್ಲಿರುವ ಅವರ ಕಮಾಂಡರ್​ಗಳ ನಡುವಿನ ಸಂಪರ್ಕಗಳು ಸಂಬಂಧ ಹೊಂದಿವೆ ಎಂದು ವಿದೇಶಾಂಗ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.

ಇದನ್ನೂ ಓದಿ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಮತ್ತಷ್ಟು ಓದಿ: Khawaja Asif: ಭಾರತದಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ‘ಎಕ್ಸ್​’ ಖಾತೆ ನಿರ್ಬಂಧ

ಸಿಂಧೂ ನದಿ ನೀರು ಒಪ್ಪಂದ ರದ್ದು
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮರುದಿನವೇ, ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಯಿತು. ಏಪ್ರಿಲ್ 23 ರಂದು ನಡೆದ ಈ ಸಭೆಯಲ್ಲಿ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದದ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು. ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿತು. ಈ ಮಾಹಿತಿಯನ್ನು ಪಾಕಿಸ್ತಾನಕ್ಕೂ ನೀಡಲಾಗಿತ್ತು.

ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೆ ಈ ಒಪ್ಪಂದವನ್ನು ಅಮಾನತುಗೊಳಿಸಲಾಗುತ್ತದೆ ಎಂದು ಭಾರತ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪ್ರಧಾನಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉಪಸ್ಥಿತರಿದ್ದರು.

ಅಟ್ಟಾರಿ ಗಡಿ ಬಂದ್
ಸಿಸಿಎಸ್ ಸಭೆಯಲ್ಲಿಯೇ ಭಾರತ ಮತ್ತೊಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿತ್ತು. ಅಟ್ಟಾರಿ ಗಡಿಯನ್ನು ಮುಚ್ಚುವುದಾಗಿ ಭಾರತದ ಕಡೆಯಿಂದ ಘೋಷಿಸಲಾಯಿತು. ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚುವುದಾಗಿ ಘೋಷಿಸಿದ ಭಾರತ, ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ವೀಸಾಗಳನ್ನು ರದ್ದುಗೊಳಿಸಿತು.

ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿ ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ವೀಸಾಗಳನ್ನು ರದ್ದುಗೊಳಿಸಿರುವ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಹಿತಿ ನೀಡಿದ್ದು, ಈ ವೀಸಾದಲ್ಲಿ ಭಾರತಕ್ಕೆ ಬಂದ ಜನರು 48 ಗಂಟೆಗಳ ಒಳಗೆ ದೇಶವನ್ನು ತೊರೆಯಬೇಕು ಎಂದು ಹೇಳಿದರು. ಮಾನ್ಯ ದಾಖಲೆಗಳ ಆಧಾರದ ಮೇಲೆ ಭಾರತಕ್ಕೆ ಬಂದ ಪಾಕಿಸ್ತಾನಿ ನಾಗರಿಕರು ಮೇ 1 ರ ಮೊದಲು ದೇಶವನ್ನು ತೊರೆಯುವಂತೆ ತಿಳಿಸಲಾಯಿತು.

ಪಾಕ್​ ರಾಯಭಾರಿಗಳಿಗೆ ದೇಶ ತೊರೆಯುವಂತೆ ಸೂಚನೆ
ಪಾಕ್ ರಾಯಭಾರಿಗಳಿಗೆ ಏಳು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಸುಚಿಸಲಾಗಿತ್ತು. ಪಾಕಿಸ್ತಾನಿ ರಾಯಭಾರ ಕಚೇರಿ ಅಧಿಕಾರಿ ಅಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರನ್ನು ಮೇ 13 ರಂದು ಭಾರತವನ್ನು ತೊರೆಯುವಂತೆ ಕೇಳಿಕೊಂಡಿತು. ಮೇ 21 ರಂದು, ಪಹಲ್ಗಾಮ್ ದಾಳಿಯ ಒಂದು ತಿಂಗಳು ಪೂರ್ಣಗೊಳ್ಳುವ ಕೇವಲ ಒಂದು ದಿನ ಮೊದಲು, ಭಾರತವು ಪಾಕಿಸ್ತಾನಿ ಅಧಿಕಾರಿಯೊಬ್ಬರನ್ನು 24 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಕೇಳಿಕೊಂಡಿತ್ತು.

ಆಪರೇಷನ್ ಸಿಂಧೂರ್​:  ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆ
ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಸೇನೆಗೆ ಸ್ವಾತಂತ್ರ್ಯ ನೀಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ನಿರಂತರ ಸಭೆಗಳನ್ನು ನಡೆಸಿದರು. ಮೇ 6 ಮತ್ತು 7 ರ ರಾತ್ರಿ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಗಡಿಯುದ್ದಕ್ಕೂ ಇದ್ದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು.

ಮೇ 7 ರ ರಾತ್ರಿ, ಪಾಕಿಸ್ತಾನದ ಪ್ರತಿದಾಳಿಯ ಪ್ರಯತ್ನವನ್ನು ವಿಫಲಗೊಳಿಸಿದ ಭಾರತೀಯ ಸೇನೆಯು ನೆರೆಯ ದೇಶದ ಸೇನಾ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿತು. ಭಾರತೀಯ ಸೇನೆಯ ದಾಳಿಯಲ್ಲಿ ಪಾಕಿಸ್ತಾನದ ಅರ್ಧ ಡಜನ್ ವಾಯುನೆಲೆಗಳು ನಾಶವಾದವು. ಸೇನೆಯ ಆಪರೇಷನ್ ಸಿಂಧೂರ್ ನಾಲ್ಕು ದಿನಗಳ ಕಾಲ ನಡೆಯಿತು. ಎರಡೂ ದೇಶಗಳ ನಡುವೆ ಯುದ್ಧ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಪಾಕಿಸ್ತಾನದ ಡಿಜಿಎಂಒ ತಮ್ಮ ಭಾರತೀಯ ಸಹವರ್ತಿಗೆ ಕರೆ ಮಾಡಿ ಕದನ ವಿರಾಮಕ್ಕೆ ಒಪ್ಪಿಕೊಂಡರು.

ಆಪರೇಷನ್ ಸಿಂಧೂರ್ ಬಗ್ಗೆ ಪುರಾವೆ ಕೊಟ್ಟ ಸೇನೆ
ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಬಗ್ಗೆ ಪುರಾವೆಗಳನ್ನು ನೀಡಿದೆ. ಭಾರತೀಯ ಸೇನೆ, ವಾಯುಪಡೆ ಮತ್ತು ವಿದೇಶಾಂಗ ಸಚಿವಾಲಯ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಇದರಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಭಾಗವಹಿಸಿದ್ದರು. ಭಯೋತ್ಪಾದಕರ ಅಡಗುತಾಣಗಳ ಮೇಲಿನ ದಾಳಿಯ ತುಣುಕುಗಳನ್ನು ಮಿಲಿಟರಿ ಅಧಿಕಾರಿಗಳು ಬಿಡುಗಡೆ ಮಾಡಿದ್ದರು.

ಪಾಕ್​ನಿಂದ ಭಾರತದ ಮೇಲೆ ಪ್ರತಿದಾಳಿ
ಪಾಕಿಸ್ತಾನ ಸೇನೆಯು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ಭಾರತೀಯ ಸೇನೆಯು S-400 ವಾಯು ರಕ್ಷಣಾ ವ್ಯವಸ್ಥೆಯೊಂದಿಗೆ ಆ ದಾಳಿಗಳನ್ನು ವಿಫಲಗೊಳಿಸಿತು ಮತ್ತು ಪ್ರತೀಕಾರವಾಗಿ ಲಾಹೋರ್‌ನಲ್ಲಿರುವ ಪಾಕಿಸ್ತಾನ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿತು. ಇದರೊಂದಿಗೆ, ಪಾಕಿಸ್ತಾನದ 11 ವಾಯುನೆಲೆಗಳು ನಾಶವಾದವು. ಭಾರತದ ದಾಳಿಗೆ ಹೆದರಿ, ಪಾಕಿಸ್ತಾನವು ವಿಶ್ವದ ಹಲವು ದೇಶಗಳಲ್ಲಿ ಕದನ ವಿರಾಮಕ್ಕೆ ಮನವಿ ಮಾಡಿತ್ತು.

ಪಾಕ್ ಬಣ್ಣ ಬಯಲು ಮಾಡಲು ಸಂಸದರ ನಿಯೋಗ

ಪಾಕಿಸ್ತಾನದೊಂದಿಗೆ ಕದನ ವಿರಾಮ ಘೋಷಿಸಲಾಗಿದೆ ಆದರೆ ಭಾರತ ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮುಖವಾಡ ಕಳಚಲು ಜಾಗತಿಕ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನಕ್ಕೆ ನೀಡಲಾಗುವ ಸಾಲವನ್ನು ಭಾರತ ವಿರೋಧಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಪಾಕಿಸ್ತಾನಕ್ಕೆ ನೀಡುತ್ತಿರುವ ಹಣಕಾಸು ನೆರವನ್ನು ನಿಲ್ಲಿಸುವಂತೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಗೆ ಮನವಿ ಮಾಡಿದ್ದಾರೆ. ಈಗ ಭಾರತವು ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನದ ನಿಲುವನ್ನು ಬಯಲು ಮಾಡಲು ಏಳು ಸರ್ವಪಕ್ಷ ನಿಯೋಗಗಳನ್ನು ಕಳುಹಿಸುತ್ತಿದೆ. ಮೊದಲ ಬ್ಯಾಚ್‌ನ ನಿಯೋಗಗಳು ವಿದೇಶಗಳ  ತಲುಪಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:02 pm, Thu, 22 May 25