
ನವದೆಹಲಿ, ಅಕ್ಟೋಬರ್ 25: ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಪ್ರಕ್ರಿಯೆಗಳಲ್ಲಿ ಗಂಭೀರ ಲೋಪಗಳಾಗಿವೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳ ‘INDIA’ ಒಕ್ಕೂಟವು, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಸರಣಿಯಾಗಿ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಿದೆ. ಅಕ್ಟೋಬರ್ 30ರಂದು ಸಿಇಸಿ ವಿರುದ್ಧ ಸಾರ್ವಜನಿಕ ದೋಷಾರೋಪಣೆ ಪ್ರಕ್ರಿಯೆ ನಡೆಸುವುದಾಗಿ ವಿಪಕ್ಷಗಳು ಹೇಳಿವೆ. ವಿಪಕ್ಷಗಳ ಈ ನಡೆಯನ್ನು ಬಿಜೆಪಿ ಖಂಡಿಸಿದ್ದು, ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸಂಸ್ಥೆಗಳನ್ನು ಹತ್ತಿಕ್ಕುವ ಕೆಲಸ ಎಂದು ಪ್ರತ್ಯಾರೋಪಿಸಿದೆ.
ಸಂವಿಧಾನವನ್ನು ರಕ್ಷಿಸುವ ಮತ್ತು ಚುನಾವಣಾ ವ್ಯವಸ್ಥೆಯ ಲೋಪಗಳನ್ನು ಖಂಡಿಸುವ ನಿಟ್ಟಿನಲ್ಲಿ, ಅಕ್ಟೋಬರ್ 30 ರಂದು ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ದೋಷಾರೋಪಣೆ ಪ್ರಕ್ರಿಯೆಯನ್ನು (Public Impeachment Proceeding) ನಡೆಸಲಾಗುವುದು. ಈ ವೇಳೆ ಸಾರ್ವಜನಿಕರ ತೀರ್ಪನ್ನು ಸ್ಪಷ್ಟವಾಗಿ ತಲುಪಿಸಲಾಗುವುದು ಎಂದು ಪ್ರಮುಖ ವಿಪಕ್ಷವಾದ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ ಎಂದು ವಿಪಕ್ಷಗಳು ತೀವ್ರವಾಗಿ ಆಕ್ಷೇಪಿಸಿವೆ. ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ INDIA ಒಕ್ಕೂಟ, ಆಯೋಗದ ನಿಷ್ಪಕ್ಷಪಾತತೆಯ ವಿರುದ್ಧ ಸರಣಿ ಹೋರಾಟಗಳನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ: ಇಶಾ ಔಟ್‌ರೀಚ್ ಬೆಂಬಲಿತ ಮೂರು ರೈತ ಉತ್ಪಾದಕ ಸಂಸ್ಥೆಗಳಿಗೆ ಸಿಐಐ ಎಫ್ಪಿಒ ಎಕ್ಸೆಲೆನ್ಸ್ ಅವಾರ್ಡ್ ಗೌರವ
ಸಂಸತ್ತಿನಲ್ಲಿ ಈ ಹಿಂದೆ ಮಂಡಿಸಲಾಗಿದ್ದ ದೋಷಾರೋಪಣೆ ನೋಟಿಸ್‌ಗಳು ತಿರಸ್ಕೃತಗೊಂಡ ಬಳಿಕ, ಈಗ ವಿರೋಧ ಪಕ್ಷಗಳು ನೇರವಾಗಿ ಜನತೆಯ ಅಂಗಳದಲ್ಲಿ ‘ಸಾರ್ವಜನಿಕ ದೋಷಾರೋಪಣೆ’ ನಡೆಸುವ ಮೂಲಕ ಸರ್ಕಾರದ ಮೇಲೆ ರಾಜಕೀಯ ಹಾಗೂ ಸಾರ್ವಜನಿಕ ಒತ್ತಡವನ್ನು ತೀವ್ರಗೊಳಿಸಲು ಮುಂದಾಗಿವೆ.
ಒಬ್ಬ ವ್ಯಕ್ತಿ ಮೇಲೆ ಸಾರ್ವಜನಿಕ ದೋಷಾರೋಪಣೆ ಕ್ರಮ ನಡೆಸುವುದು ಒಂದು ಸಾಂಕೇತಿಕ ಪ್ರತಿಭಟನೆಯಂತೆ ಇರುತ್ತದೆ. ದೋಷಾರೋಪಣೆಯಿಂದ ಸಿಇಸಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಆಗದು. ಹುದ್ದೆಯಿಂದ ಕೆಳಗಿಳಿಸಬೇಕಾದರೆ ಸಂಸತ್ತಿನಲ್ಲಿ ಅದರದ್ದೇ ಕ್ರಮ ಇದ್ದು, ಅದಕ್ಕೆ ಮೂರನೇ ಎರಡರಷ್ಟು ಬಹುಮತದ ಅವಶ್ಯಕತೆ ಇರುತ್ತದೆ. ಈಗ ವಿಪಕ್ಷಗಳ ಕ್ರಮ ಕೇವಲ ಸಾಂಕೇತಿಕವಾಗಿರುತ್ತದೆ.
ಇದನ್ನೂ ಓದಿ: ‘ಕಾಶ್ಮೀರಿಗಳಿಗೆ ಪಾಕಿಸ್ತಾನದ ರಕ್ಷಣೆ, ಕೇಂದ್ರ ಸರ್ಕಾರ ಮೌನ’: ತೀವ್ರ ವಿವಾದಕ್ಕೆ ಗುರಿಯಾದ ಫಾರೂಕ್ ಅಬ್ದುಲ್ಲಾ ಹೇಳಿಕೆ
ಮುಖ್ಯ ಚುನಾವಣಾ ಆಯುಕ್ತರನ್ನು ಸಾರ್ವಜನಿಕ ವಿಚಾರಣೆಗೆ ಒಳಪಡಿಸುವ ವಿಪಕ್ಷಗಳ ನಿರ್ಧಾರವನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಇದು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಹತ್ತಿಕ್ಕುವ ದುರುದ್ದೇಶ ಹೊಂದಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿಲ್ಲವೆಂಬ ಹತಾಶೆಯಲ್ಲಿ ರಾಹುಲ್ ಗಾಂಧಿ ಹಾಗು ಇಂಡಿಯಾ ಕೂಟವು ಜನತೆಯಲ್ಲಿ ಗೊಂದಲ, ಸುಳ್ಳುಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ