ಇಶಾ ಔಟ್‌ರೀಚ್ ಬೆಂಬಲಿತ ಮೂರು ರೈತ ಉತ್ಪಾದಕ ಸಂಸ್ಥೆಗಳಿಗೆ ಸಿಐಐ ಎಫ್‌ಪಿಒ ಎಕ್ಸೆಲೆನ್ಸ್ ಅವಾರ್ಡ್ ಗೌರವ
ಸದ್ಗುರು ಅವರ ‘ಈಶಾ ಔಟ್‌ರೀಚ್’ ಬೆಂಬಲಿತ ಮೂರು ರೈತ ಉತ್ಪಾದಕ ಸಂಸ್ಥೆಗಳು ನವದೆಹಲಿಯಲ್ಲಿ ನಡೆದ CII FPO Excellence Awardsನಲ್ಲಿ ಪ್ರಶಸ್ತಿ ಹಾಗೂ ವಿಶೇಷ ಮನ್ನಣೆ ಪಡೆದಿವೆ. ಕರ್ನಾಟಕದ ಕೊಡಗಿನ ಪೊನ್ನಾಡ್ ಸಂಸ್ಥೆ ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಭಾಗದಲ್ಲಿ ಗೌರವ ಗಳಿಸಿದೆ. ಈಶಾ ಬೆಂಬಲಿತ 25 ಸಂಸ್ಥೆಗಳಲ್ಲಿ 17 ಸಾವಿರಕ್ಕೂ ಹೆಚ್ಚು ರೈತರಿದ್ದು, ಅವುಗಳ ಒಟ್ಟು ಸಂಚಿತ ವಹಿವಾಟು 400 ಕೋಟಿ ರೂಪಾಯಿ ಮೀರಿದೆ.

ಮುಖ್ಯಾಂಶಗಳು
- ಇಶಾ ಬೆಂಬಲಿತ ಮೂರು ರೈತ ಸಂಸ್ಥೆಗಳಿಗೆ ಗೌರವ
- ಕೊಡಗಿನ ಪೊನ್ನಾಡ್ ಎಫ್‌ಪಿಒಗೆ ತಂತ್ರಜ್ಞಾನ ವಿಭಾಗದ ಪ್ರಶಸ್ತಿ
- 25 ಸಂಸ್ಥೆಗಳ ಸಂಚಿತ ವಹಿವಾಟು 400 ಕೋಟಿ ರೂ.
ನವದೆಹಲಿ, ಅಕ್ಟೋಬರ್ 24: ಸದ್ಗುರು ಅವರ ‘ಇಶಾ ಔಟ್‌ರೀಚ್’ ಬೆಂಬಲಿತ ಮೂರು ರೈತ ಉತ್ಪಾದಕ ಸಂಸ್ಥೆಗಳು (FPO) ಭಾರತೀಯ ಕೈಗಾರಿಕಾ ಒಕ್ಕೂಟ (CII) ಆಯೋಜಿಸಿದ್ದ ಎಫ್‌ಪಿಒ ಎಕ್ಸಲೆನ್ಸ್ ಅವಾರ್ಡ್ಸ್‌ನಲ್ಲಿ ಗೌರವಕ್ಕೆ ಪಾತ್ರವಾಗಿವೆ. ಅಕ್ಟೋಬರ್ 23ರಂದು ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಸಂಸ್ಥೆಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಹಾಗೂ ವಿಶೇಷ ಮನ್ನಣೆ ನೀಡಿ ಗೌರವಿಸಲಾಯಿತು. ತಮಿಳುನಾಡಿನ ಕೊಯಮತ್ತೂರಿನ ತೆಂಚೆರಿಮಲೈ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಮಾರುಕಟ್ಟೆ ಸಂಪರ್ಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಕರ್ನಾಟಕದ ಕೊಡಗಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಭಾಗದಲ್ಲಿ ಗೌರವ ಪಡೆದಿದೆ. ಕೊಯಮತ್ತೂರಿನ ಸೆನ್ನಿಯಾಂಡವರ್ ಎಫ್‌ಪಿಒ ಮಾರುಕಟ್ಟೆ ಸಂಪರ್ಕ ವಿಭಾಗದಲ್ಲಿ ವಿಶೇಷ ಮನ್ನಣೆಗೆ ಪಾತ್ರವಾಗಿದೆ.
ರೈತ ಉತ್ಪಾದಕ ಸಂಸ್ಥೆಗಳ ಸಾಧನೆಗೆ ಮನ್ನಣೆ
ದೇಶಾದ್ಯಂತ ಸಾವಿರಾರು ರೈತ ಉತ್ಪಾದಕ ಸಂಸ್ಥೆಗಳು ಭಾಗವಹಿಸಿದ್ದ ಈ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆದಿತ್ತು. ರೈತರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು, ವ್ಯವಹಾರ ನಿರ್ವಹಣೆಯನ್ನು ಬಲಪಡಿಸುವುದು ಹಾಗೂ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಪ್ರಯತ್ನಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಇಶಾ ಔಟ್‌ರೀಚ್ ತಿಳಿಸಿದೆ. ಇಶಾ ಔಟ್‌ರೀಚ್ ಬೆಂಬಲಿತ ರೈತ ಉತ್ಪಾದಕ ಸಂಸ್ಥೆಗಳು ಸತತ ನಾಲ್ಕನೇ ವರ್ಷವೂ ಈ ಪ್ರಶಸ್ತಿಗಳಲ್ಲಿ ರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದಿವೆ ಎಂದು ಸಂಸ್ಥೆ ತಿಳಿಸಿದೆ.
ತೆಂಗಿನಕಾಯಿಗೆ ಹೆಚ್ಚಿನ ಬೆಲೆ
ಸೆನ್ನಿಯಾಂಡವರ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯ ಸೆಲ್ವರಾಜ್ ಅವರ ಪ್ರಕಾರ, ಸಂಸ್ಥೆಯಲ್ಲಿ 750 ರೈತ ಸದಸ್ಯರಿದ್ದು, ಸುಮಾರು 240 ರೈತರಿಂದ ತೆಂಗಿನಕಾಯಿ ಖರೀದಿಸಲಾಗುತ್ತಿದೆ. ಇತರ ಖರೀದಿದಾರರಿಗೆ ಹೋಲಿಸಿದರೆ ಪ್ರತಿ ತೆಂಗಿನಕಾಯಿ ಅಥವಾ ಪ್ರತಿ ಕೆ.ಜಿ.ಗೆ 3ರಿಂದ 4 ರೂಪಾಯಿ ಹೆಚ್ಚು ಬೆಲೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಸುಧಾರಿಸಲು ನೆರವಾಗಿದೆ ಎಂದು ಹೇಳಿದ್ದಾರೆ.
ಇಶಾ ಔಟ್‌ರೀಚ್‌ನ ಬೆಂಬಲದಿಂದ ಇತರ ರಾಜ್ಯಗಳು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಸಂಪರ್ಕ ಬೆಳೆಸುವ ವಿಶ್ವಾಸವಿದೆ. ಇದರಿಂದ ಕೃಷಿ ಉತ್ಪನ್ನಗಳ ಮಾರಾಟವನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಾಗಲಿದೆ ಎಂದು ಸೆಲ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಸಾಮೂಹಿಕ ಕೃಷಿಗೆ ಇಶಾ ಔಟ್‌ರೀಚ್ ಬೆಂಬಲ
ಇಶಾ ಔಟ್‌ರೀಚ್‌ನ ‘ಸೇವ್ ಸೋಯಿಲ್ ಫಾರ್ಮರ್ಸ್ ಮೂವ್‌ಮೆಂಟ್’ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಒಗ್ಗೂಡಿಸುತ್ತದೆ. ರೈತರು ತಮ್ಮದೇ ಆದ ಉದ್ಯಮಗಳನ್ನು ರೂಪಿಸಿಕೊಳ್ಳಲು ತಾಂತ್ರಿಕ, ಆರ್ಥಿಕ ಮತ್ತು ಮಾರುಕಟ್ಟೆ ಸಂಬಂಧಿತ ನೆರವನ್ನು ಒದಗಿಸುತ್ತದೆ. ಸಾಮೂಹಿಕ ಪ್ರಯತ್ನಗಳ ಮೂಲಕ ರೈತರ ಚೌಕಾಸಿ ಸಾಮರ್ಥ್ಯ ಹೆಚ್ಚಿಸುವುದು ಮತ್ತು ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.
2013ರಲ್ಲಿ ವೆಳ್ಳಿಯಂಗಿರಿ ಉಝವನ್ ಎಫ್‌ಪಿಒ ಸ್ಥಾಪನೆಯೊಂದಿಗೆ ಆರಂಭವಾದ ಈ ಉಪಕ್ರಮವು ಇದೀಗ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಒಟ್ಟು 25 ರೈತ ಉತ್ಪಾದಕ ಸಂಸ್ಥೆಗಳಿಗೆ ವಿಸ್ತರಿಸಿದೆ.
ಎಂಟು ಜಿಲ್ಲೆಗಳಲ್ಲಿ 17 ಸಾವಿರಕ್ಕೂ ಹೆಚ್ಚು ರೈತರು
ಇಶಾ ಔಟ್‌ರೀಚ್ ನೀಡಿರುವ ಮಾಹಿತಿಯ ಪ್ರಕಾರ, ಈ 25 ಸಂಸ್ಥೆಗಳಲ್ಲಿ ಒಟ್ಟು 17 ಸಾವಿರಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದಾರೆ. ಇವರಲ್ಲಿ ಶೇ 60ರಷ್ಟು ಮಂದಿ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು, ಶೇ 15ರಷ್ಟು ಮಹಿಳೆಯರಿದ್ದಾರೆ.
ಈ ರೈತರು ಎಂಟು ಜಿಲ್ಲೆಗಳ 580ಕ್ಕೂ ಹೆಚ್ಚು ಗ್ರಾಮಗಳಲ್ಲಿ 54 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದಾರೆ. ತೆಂಗು, ಕಾಫಿ, ಬಾಳೆ ಮತ್ತು ಸಿರಿಧಾನ್ಯಗಳು ಸೇರಿದಂತೆ 15 ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ 25 ರೈತ ಉತ್ಪಾದಕ ಸಂಸ್ಥೆಗಳ ಒಟ್ಟು ಸಂಚಿತ ವಹಿವಾಟು 400 ಕೋಟಿ ರೂಪಾಯಿ ಮೀರಿದೆ ಎಂದು ಈಶಾ ಔಟ್‌ರೀಚ್ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




