ದೆಹಲಿ: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ಆಯೋಜಿಸಿದ್ದ ಆನ್ಲೈನ್ ತರಬೇತಿ ವಿಚಾರ ಸಂಕಿರಣ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಆಗಸ್ಟ್ 18ರಿಂದ 21ರವರೆಗೆ ರಾಷ್ಟ್ರಮಟ್ಟದಲ್ಲಿ ಆಯೋಜಿಸಿಲಾಗಿದ್ದ ಆನ್ಲೈನ್ ಸಂಕಿರಣವು ಮತ್ತೊಂದು ಭಾಷಾ ಸಮರಕ್ಕೆ ಅಣಿಮಾಡಿಕೊಟ್ಟಿದೆ.
ಹೌದು, ಆಯುಷ್ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ಆನ್ಲೈನ್ ತರಬೇತಿ ಸಂಕಿರಣದಲ್ಲಿ ಸುಮಾರು 350ಕ್ಕು ಹೆಚ್ಚು ಜನ ಪಾಲ್ಗೊಂಡಿದ್ದರು. ಯೋಗ ತರಬೇತಿ ಕುರಿತು ಆಯೋಜಿಸಲಾಗಿದ್ದ ಈ ಆನ್ಲೈನ್ ಸಂಕಿರಣದಲ್ಲಿ ತಮಿಳುನಾಡಿನ ಸುಮಾರು 37 ವೈದ್ಯರು ಸಹ ಭಾಗಿಯಿದ್ದರು. ಈ ವೈದ್ಯರು ಹೇಳುವ ಪ್ರಕಾರ ಸಂಕಿರಣದಲ್ಲಿ ನಡೆದ ಬಹಳಷ್ಟು ತರಬೇತಿ ಕ್ಲಾಸ್ಗಳನ್ನು ಬಹುಪಾಲು ಹಿಂದಿಯಲ್ಲೇ ನಡೆಸಲಾಯಿತು. ವೈದ್ಯರಿಗೆ ಹಿಂದಿ ಅರ್ಥವಾಗದ ಕಾರಣ ಕ್ಲಾಸ್ಗಳನ್ನು ಇಂಗ್ಲಿಷ್ನಲ್ಲಿ ನಡೆಸಲು ಮನವಿ ಮಾಡಿದರೂ ಅದಕ್ಕೆ ಯಾರೂ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.
ಈ ನಡುವೆ ಸಂಕಿರಣದ ಅಂತಿಮ ದಿನದಂದು ಆಯುಷ್ ಸಚಿವಾಲಯದ ಕಾರ್ಯದರ್ಶಿಗಳಾದ ವೈದ್ಯ ರಾಜೇಶ್ ಕೊಟೇಚಾರವರು ತಮ್ಮ ಭಾಷಣವನ್ನು ಹಿಂದಿಯಲ್ಲಿ ಮಾಡಲು ಪ್ರಾರಂಭಿಸಿದ್ದರಂತೆ. ಇದಕ್ಕೆ ತಮಿಳುನಾಡಿನ ವೈದ್ಯರು ದಯವಿಟ್ಟು ಇಂಗ್ಲಿಷ್ನಲ್ಲಿ ಮಾತನಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಕೊಟೇಚಾರವರು ನನಗೆ ಸಮರ್ಪಕವಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಹಾಗಾಗಿ, ನಾನು ಹಿಂದಿಯಲ್ಲಿ ಮಾತನಾಡುತ್ತೇನೆ. ಹಿಂದಿ ಅರ್ಥವಾಗದೆ ಇರುವವರು ಸೆಷನ್ ಬಿಟ್ಟು ಹೋಗಬಹುದು ಎಂದು ಹೇಳಿದ್ದಾರಂತೆ.
ಕಾರ್ಯದರ್ಶಿ ಕೊಟೇಚಾರ ಮಾತಿಗೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. DMK ಸಂಸದೆ ಕನಿಮೋಳಿ ಮತ್ತು ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ P ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸಹ ಇದನ್ನು ಖಂಡಿಸಿದ್ದಾರೆ. ಸಂಸದೆ ಕನಿಮೋಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಗ್ರಹಿಸಿ ಸಹ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ರಿಗೆ ಪತ್ರ ಬರೆದಿದ್ದಾರೆ.
My letter to the Honorable Union Minister @shripadynaik on the reported hindi imposition.#StopHindiImposition pic.twitter.com/Wzlib2f9fl
— Kanimozhi (கனிமொழி) (@KanimozhiDMK) August 22, 2020