ಬೀಡಾಡಿ ಹಸುಗಳು, ಬೀದಿ ನಾಯಿಗಳು, ಊರಿಗೆ ದಾಳಿ ಇಡುವ ಮಂಗಗಳಿಂದ ತೊಂದರೆಗಳು ತಪ್ಪಿದ್ದಲ್ಲ ಎಂಬುದು ಸತ್ಯ. ಅದರಲ್ಲಿ ಈ ಹಸುಗಳು ಬೆಳೆಹಾನಿ ಮಾತ್ರ ಮಾಡಿದರೆ, ನಾಯಿ-ಮಂಗಗಳು ಮನುಷ್ಯರ ಮೇಲೆ ಕೂಡ ಆಕ್ರಮಣ ಮಾಡುತ್ತವೆ. ಅದರಲ್ಲೂ ಬೀದಿ ನಾಯಿಗಳ ಆಕ್ರಮಣದಿಂದ ಅದೆಷ್ಟೋ ಪುಟ್ಟ ಮಕ್ಕಳು ಜೀವವನ್ನೇ ಬಿಟ್ಟ ಉದಾಹರಣೆಗಳೂ ಇವೆ. ಹೀಗಾಗಿ ಬೀಡಾಡಿ ಪ್ರಾಣಿಗಳ ಸಂಖ್ಯೆ ಹೆಚ್ಚಾದಾಗ ಸ್ಥಳೀಯ ಆಡಳಿತಗಳೇ ಮುಂದಾಗಿ ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಆದರೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಲ್ಲಲಾಗಿದೆ. ಇದು ಪ್ರಾಣಿಗಳ ಹಕ್ಕು ರಕ್ಷಣಾ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಪ್ರಾಣಿ ಹಕ್ಕುಗಳ ರಕ್ಷಣಾ ಹೋರಾಟಗಾರ ಗೌತಮ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಿದ್ದಿಪೇಟ್ ಜಿಲ್ಲೆಯ ಜಗದೇವ್ಪುರ ಮಂಡಲ್ನಲ್ಲಿರುವ ತಿಗುಲ್ ಎಂಬ ಗ್ರಾಮದಲ್ಲಿ 100ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹತ್ಯೆಗೈಯ್ಯಲಾಗಿದೆ. ಆ ಗ್ರಾಮದ ಸರ್ಪಂಚ್, ಗ್ರಾಮಪಂಚಾಯಿತಿ ಕಾರ್ಯದರ್ಶಿ ಸೇರಿ, ಒಬ್ಬ ವೃತ್ತಿಪರ ನಾಯಿಹಿಡಿಯುವವನನ್ನು ನೇಮಕ ಮಾಡಿಕೊಂಡು ಈ ಕೃತ್ಯ ನಡೆಸಿದ್ದಾರೆ. ನಾಯಿಗಳಿಗೆ ವಿಷಪೂರಿತ ಅಂಶವನ್ನು ಇಂಜೆಕ್ಟ್ ಮಾಡಲಾಗಿದೆ ಎಂದು ಗೌತಮ್ ಆರೋಪಿಸಿದ್ದಾರೆ.
ಹೀಗೆ ಸಾಮೂಹಿಕವಾಗಿ ನಾಯಿಗಳನ್ನು ಕೊಂದು ಅವುಗಳ ಶವವನ್ನು ಗುಂಡಿಯೊಳಗೆ ಹಾಕಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಈ ಬಗ್ಗೆ ಸಿದ್ದಿಪೇಟ್ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಘಟನೆ ನಡೆದ ಗ್ರಾಮದ ಸರ್ಪಂಚ್ ಮತ್ತು ಕಾರ್ಯದರ್ಶಿಯನ್ನು ಅಮಾನತು ಮಾಡುವಂತೆ ಹೇಳಿದ್ದೇನೆ ಎಂದೂ ಗೌತಮ್ ತಿಳಿಸಿದ್ದಾರೆ.
ಇದನ್ನೂ ಓದಿ: IPL 2022: ರಾಜಸ್ಥಾನ್ ರಾಯಲ್ಸ್ ಎದುರು ಹೀನಾಯ ಪ್ರದರ್ಶನ; ಬೇಡದ ದಾಖಲೆ ಬರೆದ ಸನ್ರೈಸರ್ಸ್ ಹೈದರಾಬಾದ್
Published On - 9:56 am, Wed, 30 March 22