ನವೀಕರಣಗೊಂಡ ಕಾಶಿ ವೈಭವ ನೋಡಲು ಹೊಸವರ್ಷದ ಮೊದಲ ದಿನ 5 ಲಕ್ಷಕ್ಕೂ ಅಧಿಕ ಭಕ್ತರ ಭೇಟಿ; ಶಿವರಾತ್ರಿಯಲ್ಲೂ ಇಷ್ಟು ಜನರು ಬಂದಿರಲಿಲ್ಲ !

| Updated By: Lakshmi Hegde

Updated on: Jan 03, 2022 | 7:18 AM

ಕಾಶಿ ನವೀಕರಣವೆಂಬುದು ಪ್ರಧಾನಿ ಮೋದಿಯವರ ಕನಸಿನ ಯೋಜನೆ.  ಡಿಸೆಂಬರ್​ ಎರಡನೇ ವಾರದಲ್ಲಿ ವಾರಾಣಸಿಗೆ ಭೇಟಿ ಕೊಟ್ಟಿದ್ದ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥ ಧಾಮ ಕಾರಿಡಾರ್​ನ್ನು ಉದ್ಘಾಟನೆ ಮಾಡಿದ್ದಾರೆ.

ನವೀಕರಣಗೊಂಡ ಕಾಶಿ ವೈಭವ ನೋಡಲು ಹೊಸವರ್ಷದ ಮೊದಲ ದಿನ 5 ಲಕ್ಷಕ್ಕೂ ಅಧಿಕ ಭಕ್ತರ ಭೇಟಿ; ಶಿವರಾತ್ರಿಯಲ್ಲೂ ಇಷ್ಟು ಜನರು ಬಂದಿರಲಿಲ್ಲ !
ಕಾಶಿ ವಿಶ್ವನಾಥ ಧಾಮಕ್ಕೆ ಭಕ್ತರ ಭೇಟಿ (ಪಿಟಿಐ ಚಿತ್ರ)
Follow us on

ವಾರಾಣಸಿಯ ಕಾಶಿ ವಿಶ್ವನಾಥ ದೇಗುಲದ ನವೀಕೃತ ಸಂಕೀರ್ಣ, ಕಾಶಿ ವಿಶ್ವನಾಥ ಧಾಮ (Kashi Vishwanath Dham) ಕಾರಿಡಾರ್​​ನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ಯವರು ಇತ್ತೀಚೆಗಷ್ಟೇ ಉದ್ಘಾಟನೆ ಮಾಡಿದ್ದಾರೆ. ಅದ್ದೂರಿಯಾಗಿ ಲೋಕಾರ್ಪಣೆಗೊಂಡ ಕಾಶಿ ವಿಶ್ವನಾಥ ಧಾಮ ದೇಗುಲಕ್ಕೆ ಹೊಸವರ್ಷದ ಮೊದಲ ದನ 5 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು ದಾಖಲೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಈ ಶಿವನ ದೇವಸ್ಥಾನಕ್ಕೆ ಸಾಮಾನ್ಯವಾಗಿ ಶಿವರಾತ್ರಿಯಂದು  ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಇದುವರೆಗೆ ಶಿವರಾತ್ರಿಯಂದು ಕೂಡ ಭಕ್ತರ ಸಂಖ್ಯೆ 2.5 ಲಕ್ಷ ದಾಟಿರಲಿಲ್ಲ. ಹೊಸ ವರ್ಷದ ಮೊದಲ ದಿನ 5 ಲಕ್ಷ ಜನರು ಭೇಟಿ ಕೊಟ್ಟಿದ್ದು ಅಚ್ಚರಿಯಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. 

ಸಾಮಾನ್ಯವಾಗಿ ಹೊಸ ವರ್ಷದ ಮೊದಲ ದಿನ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಹಾಗೇ, ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಸುಮಾರು 1 ಲಕ್ಷ ಭಕ್ತರು ಆಗಮಿಸಿಬಹುದು ಎಂದು ದೇಗುಲ ಮಂಡಳಿ ಅಂದಾಜಿಸಿತ್ತು. ಅದಕ್ಕೆ ತಕ್ಕಂತೆ ಸಿದ್ಧತೆ, ಭದ್ರತೆಗಳನ್ನೂ ಮಾಡಿಕೊಂಡಿತ್ತು. ಆದರೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು ಆಗಮಿಸಿದರು ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಗೆ ಹೋಗಿ ಕಾಶಿ ವಿಶ್ವನಾಥ ಧಾಮ ಕಾರಿಡಾರ್​ ಉದ್ಘಾಟನೆ ಮಾಡಿದ ಬೆನ್ನಲ್ಲೇ, ನವೀಕೃತ ಕಾಶಿಯ ಫೋಟೋಗಳು, ವಿಡಿಯೋಗಳು ಪ್ರಮುಖ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿವೆ. ಇತಿಹಾಸದಲ್ಲಿ ಇದ್ದಂಥ ಕಾಶಿ ಮತ್ತೆ ನಿರ್ಮಾಣವಾಗಿದೆ, ಕಾಶಿ ವೈಭವ ಮರುಕಳಿಸಿದೆ ಎಂದು ಹೇಳಲಾಗುತ್ತಿದ್ದು, ಅದನ್ನು ಕಣ್ತುಂಬಿಕೊಳ್ಳುವ ಸಲುವಾಗಿಯೇ ಭಕ್ತರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಕಾಶಿ ನವೀಕರಣವೆಂಬುದು ಪ್ರಧಾನಿ ಮೋದಿಯವರ ಕನಸಿನ ಯೋಜನೆ.  ಡಿಸೆಂಬರ್​ ಎರಡನೇ ವಾರದಲ್ಲಿ ವಾರಾಣಸಿಗೆ ಭೇಟಿ ಕೊಟ್ಟಿದ್ದ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥ ಧಾಮ ಕಾರಿಡಾರ್​ನ್ನು ಉದ್ಘಾಟನೆ ಮಾಡಿದ್ದಾರೆ. ಇದು ಕಾಶಿ ವಿಶ್ವನಾಥ ದೇಗುಲಕ್ಕೆ, ಗಂಗಾ ನದಿಯಿಂದ ಸಂಪರ್ಕ ಕಲ್ಪಿಸುತ್ತದೆ. ಕಾರಿಡಾರ್​ನ ಮೊದಲ ಹಂತವನ್ನು ಉದ್ಘಾಟನೆ ಮಾಡಿದ್ದು, ಭಕ್ತರಿಗೆ ಹಲವು ರೀತಿಯ ವ್ಯವಸ್ಥೆಯನ್ನು ಇದು ಕಲ್ಪಿಸುತ್ತದೆ.  ಹೊಸ ವರ್ಷದ ಮೊದಲ ದಿನ ಪ್ರಮುಖ ದೇಗುಲಗಳಲ್ಲಿ ಹೆಚ್ಚು ಭಕ್ತರು ಸೇರಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದ್ದು, ಅಲ್ಲಿಯೂ ಸಹ ಈ ಬಾರಿ 1.12ಲಕ್ಷ ಭಕ್ತರು ರಾಮಲಲ್ಲಾನ ದರ್ಶನಕ್ಕೆ ಆಗಮಿಸಿದ್ದರು. ಇದು ದಾಖಲೆಯ ಸಂಖ್ಯೆ ಎಂದು ಅಯೋಧ್ಯೆ ರಾಮಮಂದಿರ ಟ್ರಸ್ಟ್​ ಹೇಳಿದೆ.

ಇದನ್ನೂ ಓದಿ: Nitya Puja rituals: ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವಾಗ ಈ ಇಪ್ಪತ್ತು ಸರಳ ಆಚಾರ-ವಿಚಾರಗಳನ್ನು ಪಾಲಿಸಿ

Published On - 7:16 am, Mon, 3 January 22