ನವದೆಹಲಿ: ಜನರ ಗರಬಡಿಸಿ ಮತ್ತು ಭೀತಿ ಹುಟ್ಟಿಸುತ್ತಿರುವ ಕೊವಿಡ್-19 ಸೋಂಕಿನ ಎರಡನೇ ಅಲೆ ನಡುವೆ ಕೆಲವು ಸಮಾಧಾನಕರ ಸಂಗತಿಗಳು ಲಭ್ಯವಾಗುತ್ತಿವೆ. ಖುದ್ದು ಪ್ರಧಾನ ಪ್ರಧಾನ ಮಂತ್ರಿಯವರ ಉಸ್ತುವಾರಿಯಲ್ಲಿ ಅಮ್ಲಜನಕದ ಟ್ಯಾಂಕರ್ಗಳು ಬೇರೆ ಬೇರೆ ರಾಜ್ಯಗಳಿಗೆ ವಿಮಾನ ಮತ್ತು ರೈಲು ಸೇರಿದಂತೆ ಸಾಧ್ಯವಿರುವ ಎಲ್ಲ ಸಾರಿಗೆ ಮಾಧ್ಯಮಗಳ ಮೂಲಕ ಒಂದು ವಾರದೊಳಗಾಗಿ ತಲುಪಿಸಲಾಗುತ್ತದೆ ಎಂದು ಉನ್ನತ ಮೂಲಗಳಿಂದ ಲಭ್ಯವಿರುವ ಮಾಹಿತಿ ತಿಳಿಸುತ್ತದೆ. ಅಲ್ಲದೆ ಸುನಾಮಿಯಂತೆ ಭಾರತಕ್ಕೆ ಅಪ್ಪಳಿಸಿರುವ ಕೊವಿಡ್ ಸೋಂಕಿನ ಎರಡನೇ ಅಲೆಯು ಗರಿಷ್ಠ ಪ್ರಮಾಣ ತಲುಪಿದ ನಂತರ ಕ್ರಮೇಣವಾಗಿ ತಗ್ಗಲಿದೆ ಅಂತ ಮೂಲಗಳಿಂದ ಗೊತ್ತಾಗಿದೆ.
ಇನ್ನೊಂದು ಸಮಾಧಾನಕರ ಸಂಗತಿಯೆಂದರೆ, ರವಿವಾರದಂದು, ದೇಶದ ನಾನಾ ಭಾಗಗಳಲ್ಲಿನ 551 ಜಿಲ್ಲೆಗಳಲ್ಲಿ ಪಿಎಸ್ಎ (ಪ್ರೆಶರ್ ಸ್ವಿಂಗ್ ಅಡ್ಸಾರ್ಪಷನ್) ಆಕ್ಸಿಜನ್ ಘಟಕಗಳನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಂಡಿದೆ, ಈ ಯೋಜನೆಗೆ ತಗಲುವ ವೆಚ್ಚವನ್ನು ಪಿಎಂ ಕೇರ್ಸ್ ಫಂಡ್ನಿಂದ ಭರಿಸಲು ನಿಶ್ಚಯಿಸಲಾಗಿದೆ. ಈ ಯೋಜನೆಯು ಡಿಸೆಂಬರ್ 2020ರ ಹೊತ್ತಿಗೆ ಮುಗಿಯಬೇಕಾಗಿತ್ತು. ಅದರೆ, ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯಗಳು ಸೈಟ್ ಕ್ಲಿಯರೆನ್ಸ್ ಪ್ರಮಾಣ ಪತ್ರಗಳನ್ನು ನೀಡದ ಕಾರಣ ಅದು ವಿಳಂಬಗೊಂಡಿತು.
ಏತನ್ಮಧ್ಯೆ, ಸುಪ್ರೀಮ್ ಕೋರ್ಟಿಗೆ ಮಂಗಳವಾರದಂದು ಸಲ್ಲಿಸಿರುವ ಅಫಿಡವಿಟ್ನಲ್ಲಿ ಕೇಂದ್ರವು ಕೊವಿಡ್ ಸೋಂಕಿನ ಜಾಸ್ತಿ ಪ್ರಕರಣಗಳಿರುವ 12 ರಾಜ್ಯಗಳಲ್ಲಿ ಏಪ್ರಿಲ್ 30 ಹೊತ್ತಿಗೆ 6,593 ಮೆಟ್ರಿಕ್ ಟನ್ಗಳಷ್ಟು ವೈದ್ಯಕೀಯ ಆಮ್ಲಜನಕ ಬೇಕಾಗುತ್ತದೆ ಎಂದು ತಿಳಿಸಿದೆ.
ಮಹಾರಾಷ್ಟ್ರಕ್ಕೆ 2,000 ಮೆಟ್ರಿಕ್ ಟನ್ ಆಮ್ಲಜನಕ ಬೇಕಿದ್ದರೆ ಗುಜರಾತ್ಗೆ 1,200 ಮೆಟ್ರಿಕ್ ಟನ್ ಬೇಕು. ಉತ್ತರ ಪ್ರದೇಶಕ್ಕೆ 800 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 700 ಮೆಟ್ರಿಕ್ ಟನ್, ದೆಹಲಿಗೆ 445 ಮೆಟ್ರಿಕ್ ಟನ್, ಛತ್ತೀಸಗಡಕ್ಕೆ 382 ಮೆಟ್ರಿಕ್ ಟನ್, ತಮಿಳುನಾಡಿಗೆ 465 ಮೆಟ್ರಿಕ್ ಟನ್ ಮತ್ತು ಕರ್ನಾಟಕಕ್ಕೆ 111 ಮೆಟ್ರಿಕ್ ಟನ್ ಆಮ್ಲಜನಕ ಅವಶ್ಯಕತೆಯಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಪಂಜಾಬ್ಗೆ 82 ಮೆಟ್ರಿಕ್ ಟನ್ ಆಕ್ಸಿಜನ್ನ ಕೊರತೆಯಿದೆ.
ಸರ್ಕಾರ ಈ ಹಿಂದೆ ನೀಡಿದ ಹೇಳಿಕೆ ಪ್ರಕಾರ ದೇಶದಲ್ಲಿ ಪ್ರತಿದಿನದ ಆಮ್ಲಜನಕ ಸಾಮರ್ಥ್ಯವು (ಔದ್ಯೋಗಿಕ ಬಳಕೆ ಸೇರಿದಂತೆ) 7,127 ಮೆಟ್ರಿಕ್ ಟನ್ ಇದ್ದು ಈಗಿನ ಬೇಡಿಕೆ ಪ್ರಮಾಣ 6.600 ಮೆಟ್ರಿಕ್ ಟನ್ನಷ್ಟಿದೆ.
ಆದರೆ ಸಮಸ್ಯೆಯಿರುವುದು ಬೇಡಿಕೆ ಇರುವ ಸ್ಥಳಗಳಿಗೆ ಅಮ್ಲಜನಕದ ಟ್ಯಾಂಕರ್ಗಳನ್ನು ತಲುಪಿಸುವುದಾಗಿದೆ. ದೇಶದಲ್ಲಿ ಈಗ ಕೇವಲ 1,224 ಆಕ್ಸಿಜನ್ ಟ್ಯಾಂಕರ್ಗಳಿವೆ ಮತ್ತು ಸುಮಾರು 600 ನೈಟ್ರೋಜನ್ ಟ್ಯಾಂಕರ್ಗಳ ಪೈಕಿ ಅರ್ಧದಷ್ಟನ್ನು ಆಕ್ಸಿಜನ್ ಹೊತ್ತೊಯ್ಯುವ ಟ್ಯಾಂಕರ್ಗಳಾಗಿ ಪರಿವರ್ತಿಸಲಾಗಿದೆ. ಆಮ್ಲಜನಕವನ್ನು ಸಾಗಿಸಲು 138 ಕ್ರೈಯೋಜಿನಿಕ್ ಟ್ಯಾಂಕರ್ಗಳು ಕೂಡ ಲಭ್ಯ ಇವೆಯೆಂದು ಕೇಂದ್ರ ಸರ್ಕಾರ ಹೇಳಿದೆ.
ರಾಜ್ಯಗಳಿಗೆ ಆಮ್ಲಜನಕ ಸರಬರಾಜು ಮಾಡಲು ಟ್ಯಾಂಕರ್ಗಳ ಏರ್ಪಾಟು ಮಾಡುವುದೇ ಸಮಸ್ಯೆಯಾಗಿದೆ. ದೆಹಲಿಯಲ್ಲಿರುವ ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜು ಮಾಡಲು ದೆಹಲಿ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಆ ಸರ್ಕಾರವನ್ನು ದೂರುತ್ತಿದೆ.
‘ಸಾರಿಗೆ ಸಮಸ್ಯೆಗಳಿಂದಾಗಿ ದೆಹಲಿಗೆ ಅಗತ್ಯವಿರುವಷ್ಟು ಆಮ್ಲಜನಕದವನ್ನು ಪೂರೈಸಲು ಸಾಧ್ಯವಾಗಿಲ್ಲ, ಯಾಕೆಂದರೆ ಆ ಸರ್ಕಾರವು ಸಾರಿಗೆ ಸಮಸ್ಯೆಯ ಬಗೆಹರಿಸುವ ಬಗ್ಗೆ ಯೋಚನೆಯೇ ಮಾಡಿಲ್ಲ,’ ಎಂದು ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿಯವರು ದೆಹಲಿ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: PM Modi Announcement: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಲಾಕ್ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ: ಮೋದಿ