ದೆಹಲಿಯಲ್ಲಿ ತುಂಬ ಆಕ್ಸಿಜನ್ ಅಭಾವ ಉಂಟಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳುತ್ತಲೇ ಇದ್ದಾರೆ. ಈಗಾಗಲೇ ದೆಹಲಿಯ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಹತ್ತಾರು ರೋಗಿಗಳು ಜೀವವನ್ನೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕೇಂದ್ರದ ವಿರುದ್ಧ ಅರವಿಂದ್ ಕೇಜ್ರಿವಾಲ್ ನಿರಂತರವಾಗಿ ಆರೋಪ ಮಾಡಿಕೊಂಡೇ ಬರುತ್ತಿದ್ದಾರೆ.
ಆದರೆ ಇದೀಗ ಕೇಂದ್ರ ಸರ್ಕಾರ ದೆಹಲಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ದೆಹಲಿಗೆ ಹೆಚ್ಚುವರಿ ಆಮ್ಲಜನಕ ಪೂರೈಕೆಯಾಗುತ್ತಿದೆ. ಆದರೆ ಅದನ್ನು ಬಳಸುವಲ್ಲಿ ಅಸಮರ್ಥವಾಗಿದೆ. ವೈದ್ಯಕೀಯ ಆಕ್ಸಿಜನ್ ಕಪ್ಪು ಮಾರುಕಟ್ಟೆಗೆ ಹೋಗುತ್ತಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ದೆಹಲಿಯಲ್ಲಿ ವೈದ್ಯಕೀಯ ಆಕ್ಸಿಜನ್ ಬಗ್ಗೆ ಸರ್ವೇ ನಡೆಸಿದ ಬಗ್ಗೆ ಈ ವರದಿ ಬಹಿರಂಗಗೊಂಡಿದೆ.
ದೆಹಲಿಯ 62 ಪ್ರಮುಖ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸರ್ವೇ ನಡೆಸಲಾಗಿದೆ. ಇಲ್ಲಿ ಒಟ್ಟು 11 ಆಮ್ಲಜನಕ ಮರುಪೂರಣ ಕೇಂದ್ರಗಳಿವೆ. ದೆಹಲಿಗೆ ಪೂರೈಕೆ ಮಾಡಲಾದ ಆಮ್ಲಜನಕ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿಲ್ಲ. ಆಮ್ಲಜನಕ ಸಿಲಿಂಡರ್ಗಳು ಕಪ್ಪು ಮಾರುಕಟ್ಟೆಗೆ ಸೇರುತ್ತಿರುವಂತೆ ಕಾಣುತ್ತಿದೆ ಅಥವಾ ಇಲ್ಲಿನ ಕೆಲವು ಸಚಿವರು ಅಕ್ರಮವಾಗಿ ಸಂಗ್ರಹ ಮಾಡಿಟ್ಟಿರುವ ಸಾಧ್ಯತೆಯೂ ದಟ್ಟವಾಗಿದೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.
ದೆಹಲಿಗೆ ಆಕ್ಸಿಜನ್ ಪೂರೈಕೆ ಸರಿಯಾಗಿಯೇ ಆಗುತ್ತಿದೆ ಎಂದು ಖಡಾಖಂಡಿತವಾಗಿ ಪ್ರತಿಪಾದಿಸಿರುವ ಕೇಂದ್ರ ಸರ್ಕಾರ, ಇನ್ನು ಅಲ್ಲಿಯೇ ಪೂರೈಕೆ ಮಾಡುತ್ತ ಹೋದರೆ ಉಳಿದ ರಾಜ್ಯಗಳಿಗೆ ಕಡಿಮೆಯಾಗುತ್ತದೆ ಎಂದೂ ಹೇಳಿದೆ.
ಕಳೆದವಾರವಷ್ಟೇ ಸುಪ್ರೀಂಕೋರ್ಟ್ನ ಆದೇಶದ ಅನ್ವಯ ದೆಹಲಿಗೆ 730 ಮೆಟ್ರಿಕ್ ಟನ್ಗಳಷ್ಟು ದ್ರವರೂಪ ವೈದ್ಯಕೀಯ ಆಕ್ಸಿಜನ್ನ್ನು ಕೇಂದ್ರಸರ್ಕಾರ ಪೂರೈಕೆ ಮಾಡಿತ್ತು. ಆಕ್ಸಿಜನ್ ಅಭಾವದ ಕೊರತೆಯನ್ನು ನೀಗಿಸಿ ಎಂದು ಹಲವು ಆಸ್ಪತ್ರೆಗಳು ಹೈಕೋರ್ಟ್ ಮೆಟ್ಟಿಲು ಏರಿದ್ದವು.
ಆಕ್ಸಿಜನ್ನ್ನು ಎಷ್ಟೇ ಪೂರೈಕೆ ಮಾಡಿದರೂ ಅಭಾವ ಉಂಟಾಗುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಸರ್ವೇ ಮಾಡಿಸಿತ್ತು. ಆಸ್ಪತ್ರೆ ಮತ್ತು ಮರುಪೂರಣ ಘಟಕಗಳಲ್ಲಿ ಆಕ್ಸಿಜನ್ ಸಂಗ್ರಹದ ಪ್ರಮಾಣ ಕಳೆದ ಎರಡು ದಿನಗಳಲ್ಲಿ ಶೇ.50ಕ್ಕೂ ಹೆಚ್ಚಾಗಿದೆ. ಇನ್ನು ಕೆಲವು ಆಸ್ಪತ್ರೆಗಳಲ್ಲಂತೂ ಕಳೆದ 3-4 ದಿನಗಳಿಂದ ವೈದ್ಯಕೀಯ ಆಮ್ಲಜನಕ ಸಂಗ್ರಹ ಇದೆ ಎಂದು ಸರ್ವೇಯಲ್ಲಿ ತಿಳಿದುಬಂದಿದ್ದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಕಾಬೂಲ್‌ನ ಶಾಲೆ ಬಳಿ ಬಾಂಬ್ ಸ್ಫೋಟ, 40 ವಿದ್ಯಾರ್ಥಿನಿಯರ ಸಾವು
ಟೀಂ ಇಂಡಿಯಾಕ್ಕೆ ಆಯ್ಕೆಯಾಗಬೇಕಾದರೆ ನಿನ್ನ ತೂಕ ಇಳಿಸು; ಪೃಥ್ವಿ ಶಾಗೆ ಖಡಕ್ ಸೂಚನೆ ಕೊಟ್ಟ ಬಿಸಿಸಿಐ