ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಪಕ್ಕದ ನೆರೆ ಹೊರೆಯಲ್ಲಿ ಅತಿ ಹೆಚ್ಚು ಪ್ರಮಾಣದ ಮಾಲಿನ್ಯಕ್ಕೆ ಪಾಕಿಸ್ತಾನ ಮತ್ತು ಚೀನಾವನ್ನು ದೂಷಿಸಬೇಕು. ಈ ಎರಡು ನೆರೆಯ ರಾಷ್ಟ್ರಗಳು ಯಾವುದಾದರೂ ಒಂದು ವಿಷಕಾರಿ ಅನಿಲವನ್ನು ಭಾರತಕ್ಕೆ ಬಿಡುಗಡೆ ಮಾಡಿರಬಹುದು ಎಂದು ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದಾ ಅನುಮಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಅಥವಾ ಚೀನಾ ನಮಗೆ ಭಯಪಡುತ್ತವೆ. ಹಾಗಾಗಿ ಪಾಕಿಸ್ತಾನ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದನ್ನ ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಾಕಿಸ್ತಾನ ನಿರಾಶೆಗೊಂಡಿದೆ ಮತ್ತು ಯಾವುದೇ ಯುದ್ಧದಲ್ಲಿ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವಾಗದ ಕಾರಣ ಭಾರತದ ವಿರುದ್ಧ ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದೆ ಎಂದು ಶಾರದಾ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹರಿಯಾಣ ಮತ್ತು ಪಂಜಾಬ್‌ನಲ್ಲಿ ರೈತರು ಕೃಷಿ ತ್ಯಾಜ್ಯವನ್ನು ಸುಡುವುದು ಹಾಗೂ ಕೈಗಾರಿಕೆಗಳೇ ದೆಹಲಿಯಲ್ಲಿ ಅಪಾಯಕಾರಿ ಮಾಲಿನ್ಯದ ಮಟ್ಟಕ್ಕೆ ಕಾರಣ ಎಂದು ದೂಷಿಸಿದ್ದಾರೆ ಆದರೆ ಕೃಷಿ ನಮ್ಮ ದೇಶದ ಬೆನ್ನೆಲುಬು ಯಾವುದೇ ಕಾರಣಕ್ಕೂ ಕೃಷಿಯನ್ನು ದೂಷಿಸಬಾರದು ಎಂದು ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸಿದರು.
ಮಹಾಭಾರತ ಮಹಾಕಾವ್ಯದಲ್ಲಿ ಬರುವ ಶ್ರೀಕೃಷ್ಣ ಮತ್ತು ಅರ್ಜುನನನ್ನು ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಗೆ ಹೋಲಿಸಿದ್ದಾರೆ. “ಇದು ಕೃಷ್ಣ ಮತ್ತು ಅರ್ಜುನರ ಸಮಯ. ಕೃಷ್ಣನಂತೆ ಮೋದಿ ಮತ್ತು ಅರ್ಜುನನಾಗಿ ಅಮಿತ್ ಶಾ ಒಟ್ಟಿಗೆ ಇದನ್ನು ನೋಡಿಕೊಳ್ಳುತ್ತಾರೆ” ಇವರಿಬ್ಬರು ಸೇರಿದರೆ ಯಾವುದೇ ಸಮಸ್ಯೆಯನ್ನಾದರೂ ಪರಿಹರಿಸಬಲ್ಲರು ಎಂದು ವಿನೀತ್ ಅಗರ್ವಾಲ್ ಶಾರ್ದಾ ಹೇಳಿದರು.
Published On - 3:19 pm, Wed, 6 November 19