ದೆಹಲಿ: ಇಂದು(ಮಂಗಳವಾರ) ಪಾಕಿಸ್ತಾನ (Pakistan) ಸೇನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅಂತರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಅರೆಸೇನಾಪಡೆಯ ಗಡಿ ಭದ್ರತಾ ಪಡೆಯ ಯೋಧರ ಮೇಲೆ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಫೆಬ್ರವರಿ 2021 ರಿಂದ ಪಾಕಿಸ್ತಾನದಿಂದ ಇದು ಮೊದಲ ಕದನ ವಿರಾಮ ಉಲ್ಲಂಘನೆಯಾಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಫೆಬ್ರವರಿ 2021ರಲ್ಲಿ ಭಾರತ ಮತ್ತು ಪಾಕಿಸ್ತಾನ ನಿಯಂತ್ರಣ ರೇಖೆಯ ಉದ್ದಕ್ಕೂ ಗುಂಡಿನ ದಾಳಿಯನ್ನು ನಿಲ್ಲಿಸುವ ಒಪ್ಪಂದವನ್ನು ಪುನರುಚ್ಚರಿಸಿತ್ತು. 2003 ರ ಕದನ ವಿರಾಮ ಒಪ್ಪಂದದ ನಂತರ ಮೊದಲ ಬಾರಿಗೆ ಎರಡೂ ದೇಶಗಳು ಕದನ ವಿರಾಮಕ್ಕೆ ಬದ್ಧವಾಗಿರಲು ನಿರ್ಧರಿಸಿದವು. ಫೆಬ್ರವರಿ 25, 2021 ರಿಂದ ಕದನ ವಿರಾಮವನ್ನು ನಡೆಸಲಾಗಿದೆ ಮತ್ತು ಈ ವರ್ಷದ ಫೆಬ್ರವರಿವರೆಗೆ ಉಭಯ ಸೇನೆಗಳ ನಡುವೆ ಒಂದೇ ಒಂದು ಗುಂಡಿನ ಚಕಮಕಿ ನಡೆದಿಲ್ಲ ಎಂದು ಭಾರತೀಯ ಸೇನೆಯು ಈ ವರ್ಷದ ಆರಂಭದಲ್ಲಿ ಹೇಳಿತ್ತು.
ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಡೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ರೇಂಜರ್‌ಗಳು ಮಂಗಳವಾರ ಬೆಳಿಗ್ಗೆ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು ಜಿಲ್ಲೆಯ ಅರ್ನಿಯಾ ಸೆಕ್ಟರ್‌ನಲ್ಲಿ ನಡೆದ ಗುಂಡಿನ ದಾಳಿಗೆ ಬಿಎಸ್‌ಎಫ್ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ಹೇಳಿದರು.
ಇಂದು ಬೆಳಗ್ಗೆ, ಬಿಎಸ್‌ಎಫ್ ಗಸ್ತು ತಿರುಗುತ್ತಿದ್ದವರ ಮೇಲೆ ಪಾಕಿಸ್ತಾನ ರೇಂಜರ್‌ಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಅಲರ್ಟ್ ಆದ ಬಿಎಸ್‌ಎಫ್ ಜಮ್ಮು ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ ಎಂದು ಬಿಎಸ್‌ಎಫ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಎಸ್‌ಪಿಎಸ್ ಸಂಧು ತಿಳಿಸಿದ್ದಾರೆ.
ಭಾರತದ ಕಡೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಬಿಎಸ್ಎಫ್ ಜಮ್ಮು ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. ಫೆಬ್ರವರಿ 2020 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನವೀಕರಿಸಿದ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ.
Published On - 12:37 pm, Tue, 6 September 22