FATF: ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ, ಎಫ್ಎಟಿಎಫ್‌ನ ಗ್ರೇ ಲಿಸ್ಟ್​ನಲ್ಲಿ ಪಾಕ್ ಮುಂದುವರಿಕೆ

| Updated By: Digi Tech Desk

Updated on: Oct 22, 2021 | 11:47 AM

ಭಾರತದ ವೈರಿ ರಾಷ್ಟ್ರ ಪಾಕಿಸ್ತಾನವನ್ನು ಎಫ್ಎಟಿಎಫ್‌ನ ಬೂದು ಪಟ್ಟಿಯಲ್ಲಿ ಮುಂದುವರಿಸಲು ಎಫ್ಎಟಿಎಫ್ ನಿರ್ಧಾರ ತೆಗೆದುಕೊಂಡಿದೆ. ಪಾಕಿಸ್ತಾನವು 2018ರಿಂದ ಭಯೋತ್ಪಾದನೆಗೆ ಹಣಕಾಸು ಹೂಡಿಕೆ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೀಗಾಗಿ ಪಾಕಿಸ್ತಾನ ದೇಶವನ್ನು ಎಫ್ಎಟಿಎಫ್ನ ಬೂದುಪಟ್ಟಿಯಲ್ಲಿ ಮುಂದುವರಿಸಲು ಎಫ್ಎಟಿಎಫ್ ನಿರ್ಧರಿಸಿದೆ .

FATF: ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ, ಎಫ್ಎಟಿಎಫ್‌ನ ಗ್ರೇ ಲಿಸ್ಟ್​ನಲ್ಲಿ ಪಾಕ್ ಮುಂದುವರಿಕೆ
ಪಾಕಿಸ್ತಾನದ ಬಾವುಟ
Follow us on

ದೆಹಲಿ: ಪಾಕಿಸ್ತಾನವು “ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನ ‘ಗ್ರೇ ಲಿಸ್ಟ್’ ನಲ್ಲಿ ಉಳಿಯುತ್ತದೆ ಎಂದು ಎಫ್ಎಟಿಎಫ್ ಅಧ್ಯಕ್ಷ ಮಾರ್ಕಸ್ ಪ್ಲೇಯರ್ ಹೇಳಿದ್ದಾರೆ. ಭಯೋತ್ಪಾದನೆಗೆ ಹಣಕಾಸು ವ್ಯವಸ್ಥೆ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿರುವ ಜಾಗತಿಕ ಸಂಸ್ಥೆಯೇ ಎಫ್ಎಟಿಎಫ್. ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಪಾಕಿಸ್ತಾನವನ್ನು ಗ್ರೇ ಲಿಸ್ಟ್ ಅಂದರೇ, ಬೂದು ಪಟ್ಟಿಯಲ್ಲಿ ಮುಂದುವರಿಸಲು ಎಫ್‌ಎಟಿಎಫ್ ನಿರ್ಧರಿಸಿದೆ.

ಪಾಕಿಸ್ತಾನವು ಆಕ್ಷನ್ ಪ್ಲ್ಯಾನ್ ನ 34 ಐಟಂಗಳ ಪೈಕಿ 30 ಐಟಂಗಳನ್ನು ಮಾತ್ರ ಜಾರಿಗೊಳಿಸಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ಹಣಕಾಸು ಹೂಡಿಕೆ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದ್ದರಿಂದ ಬೂದು ಪಟ್ಟಿಯಲ್ಲಿ ಮುಂದುವರಿದಿದೆ. ಎಫ್ಐಟಿಎಫ್‌ನ ಸ್ಟಾಂಡರ್ಡ್ ಗೆ ತಕ್ಕಂತೆ ಆಕ್ಷನ್ ಪ್ಲ್ಯಾನ್ ಗಳನ್ನ ಜಾರಿಗೊಳಿಸಲು ವಿಫಲವಾಗಿದೆ. ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕರು ಎಂದು ಘೋಷಿಸಿರುವ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ವಿರುದ್ಧ ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಪಾಕಿಸ್ತಾನ ವಿಫಲವಾಗಿದೆ. ಎಫ್‌ಎಟಿಎಫ್‌ನ ಸ್ಟಾಂಡರ್ಡ್ ಗೆ ತಕ್ಕಂತೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪಾಕಿಸ್ತಾನವು ಗ್ರೇ ಲಿಸ್ಟ್ ಅಥವಾ ಬೂದು ಪಟ್ಟಿಯಲ್ಲಿ ಮುಂದುವರಿಯಲಿದೆ.

FATF ಸಂಸ್ಥೆಯ ಮೂರು ದಿನಗಳ ವರ್ಚುವಲ್ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಫ್‌ಎಟಿಎಫ್ ಅಧ್ಯಕ್ಷ ಮಾರ್ಕಸ್ ಪ್ಲೇಯರ್ ಹೇಳಿದರು. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಮತ್ತು ವಿಶ್ವಸಂಸ್ಥೆ ನಿಯೋಜಿತ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನವು “ಹೆಚ್ಚಿನ ಮೇಲ್ವಿಚಾರಣಾ ಪಟ್ಟಿಯಲ್ಲಿ” ಮುಂದುವರಿದಿದೆ ಎಂದು ಮಾರ್ಕಸ್ ಪ್ಲೇಯರ್ ಪ್ಯಾರಿಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. “ಹೆಚ್ಚಿನ ಮೇಲ್ವಿಚಾರಣಾ ಪಟ್ಟಿ” ಎಂಬುದು ‘ಗ್ರೇ ಲಿಸ್ಟ್’ ನ ಇನ್ನೊಂದು ಹೆಸರು.

ಎಫ್ಎಟಿಎಫ್ನ ಬೂದು ಪಟ್ಟಿಯಲ್ಲಿ ಪಾಕ್
ಪಾಕಿಸ್ತಾನವು ಪ್ಯಾರಿಸ್ ಮೂಲದ ಎಫ್‌ಎಟಿಎಫ್‌ನ ಬೂದು ಪಟ್ಟಿಯಲ್ಲಿ ಜೂನ್ 2018 ರಿಂದ ಇದೆ. ಇದಲ್ಲದೆ, ಇನ್ನೂ ಮೂರು ದೇಶಗಳು FATF ಪಟ್ಟಿಯಲ್ಲಿವೆ. ಜೋರ್ಡಾನ್, ಮಾಲಿ ಮತ್ತು ಟರ್ಕಿ ಕೂಡ ಎಫ್ಎಟಿಎಫ್‌ನ ಪಟ್ಟಿಯಲ್ಲಿವೆ. ಈ ಮೂರು ದೇಶಗಳು FATF ನ ಆಕ್ಷನ್ ಪ್ಲ್ಯಾನ್ ಅನ್ನು ಒಪ್ಪಿಕೊಂಡಿವೆ.
ಜಾಗತಿಕ ಎಫ್‌ಎಟಿಎಫ್ ಮಾನದಂಡಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದ್ದಕ್ಕಾಗಿ ಮತ್ತು ವಿಶ್ವಸಂಸ್ಥೆ ನಿಯೋಜಿತ ಭಯೋತ್ಪಾದಕ ಗುಂಪುಗಳ ಹಿರಿಯ ನಾಯಕರು ಮತ್ತು ಕಮಾಂಡರ್‌ಗಳ ತನಿಖೆ ಮತ್ತು ವಿಚಾರಣೆಯಲ್ಲಿ ಪ್ರಗತಿಯ ಕೊರತೆಯಿಂದಾಗಿ ಪಾಕಿಸ್ತಾನವನ್ನು ಎಫ್‌ಎಟಿಎಫ್ ‘ಗ್ರೇ ಲಿಸ್ಟ್’ ನಲ್ಲಿ ಉಳಿಸಿಕೊಳ್ಳಲಾಗಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ
ಪಾಕಿಸ್ತಾನವು ಹೆಚ್ಚಿನ ಮೇಲ್ವಿಚಾರಣೆಯಲ್ಲಿದೆ. ಪಾಕಿಸ್ತಾನ ಸರ್ಕಾರವು ಎರಡು ಏಕಕಾಲಿಕ ಕ್ರಿಯಾ ಯೋಜನೆಗಳನ್ನು ಹೊಂದಿದೆ, ಒಟ್ಟು 34 ಕ್ರಿಯಾ ಯೋಜನೆಗಳನ್ನು ಹೊಂದಿದೆ. ಈಗ 30 ಐಟಂಗಳನ್ನು ಹೆಚ್ಚಾಗಿ ಪರಿಹರಿಸಿದೆ “ಎಂದು ಪ್ಲೇಯರ್ ಹೇಳಿದರು. “ಪಾಕಿಸ್ತಾನವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 2018 ರ ಜೂನ್‌ನಲ್ಲಿ ಮೊದಲ ಬಾರಿಗೆ ಬದ್ಧವಾದ ಕ್ರಿಯಾ ಯೋಜನೆಯಲ್ಲಿ 27 ರಲ್ಲಿ 26 ಅಂಶಗಳನ್ನು ಅದು ಜಾರಿಗೊಳಿಸಿದೆ.” ಆದಾಗ್ಯೂ, ಆರ್ಥಿಕ ಭಯೋತ್ಪಾದನೆಗೆ ಸಂಬಂಧಿಸಿದ ವಿಷಯವನ್ನು ಇನ್ನೂ ಪರಿಹರಿಸಬೇಕಾಗಿದೆ ಎಂದು ಅವರು ಹೇಳಿದರು. ಇದು ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಗುಂಪುಗಳ ಹಿರಿಯ ನಾಯಕರು ಮತ್ತು ಕಮಾಂಡರ್‌ಗಳ ತನಿಖೆ ಮತ್ತು ಕಾನೂನು ಕ್ರಮ” ಕ್ಕೆ ಸಂಬಂಧಿಸಿದೆ.

ಪಾಕಿಸ್ತಾನದ ವಿರೋಧ ಪಕ್ಷಗಳು ಇಮ್ರಾನ್ ಖಾನ್ ಸರ್ಕಾರವನ್ನು FATF ಗ್ರೇ ಪಟ್ಟಿಯಿಂದ ದೇಶವನ್ನು ತೆಗೆದುಹಾಕುವಲ್ಲಿ ವಿಫಲವಾದ ಮೇಲೆ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿವೆ. ಪಾಕಿಸ್ತಾನವು ಎಫ್ಎಟಿಎಫ್‌ನ ಬೂದು ಪಟ್ಟಿಯಲ್ಲಿ ಮುಂದುವರಿದಿರುವುದಿಂದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಾದ ಐಎಂಎಫ್, ವಿಶ್ವಬ್ಯಾಂಕ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸುಲಭವಾಗಿ ಸಾಲಸೌಲಭ್ಯ ಸಿಗಲ್ಲ. ಇದರಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟ ಹೆಚ್ಚಾಗಲಿದೆ.

ವರದಿ: ಚಂದ್ರಮೋಹನ್

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ 48 ಗಂಟೆಗಳ ನಂತರ ಯೋಧರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ

Published On - 11:30 am, Fri, 22 October 21