ಸಚಿವ ರವಿಶಂಕರ್​ ಪ್ರಸಾದ್, ಶಶಿ ತರೂರ್​ ಖಾತೆಯನ್ನು ಲಾಕ್​ ಮಾಡಿದ್ದಕ್ಕೆ ಟ್ವಿಟರ್​ ಬಳಿ ವಿವರಣೆ ಕೇಳಿದ ಸಂಸದೀಯ ಸ್ಥಾಯಿ ಸಮಿತಿ

|

Updated on: Jun 30, 2021 | 9:13 AM

Twitter: ರವಿ ಶಂಕರ್​ ಪ್ರಸಾದ್​ ಅವರು ಯುಎಸ್​​ನ ಕಾಪಿರೈಟ್​ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಟ್ವಿಟರ್​ ಅವರ ವೈಯಕ್ತಿಕ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್​ ಮಾಡಿತ್ತು. ಹಾಗೇ ಶಶಿ ತರೂರ್​ ಟ್ವಿಟರ್ ಅಕೌಂಟ್​ ಕೂಡ ಇದೇ ಕಾರಣಕ್ಕೆ ನಿರ್ಬಂಧವಾಗಿತ್ತು.

ಸಚಿವ ರವಿಶಂಕರ್​ ಪ್ರಸಾದ್, ಶಶಿ ತರೂರ್​ ಖಾತೆಯನ್ನು ಲಾಕ್​ ಮಾಡಿದ್ದಕ್ಕೆ ಟ್ವಿಟರ್​ ಬಳಿ ವಿವರಣೆ ಕೇಳಿದ ಸಂಸದೀಯ ಸ್ಥಾಯಿ ಸಮಿತಿ
ಟ್ವಿಟರ್​ ಪ್ರಾತಿನಿಧಿಕ ಚಿತ್ರ
Follow us on

ನಾಲ್ಕು ದಿನಗಳ ಹಿಂದೆ (ಜೂ.26) ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್​ ಪ್ರಸಾದ್​ ಮತ್ತು ಕಾಂಗ್ರೆಸ್​ ಸಂಸದ ಶಶಿ ತರೂರ್​ ಅವರ ವೈಯಕ್ತಿಕ ಟ್ವಿಟರ್​ ಖಾತೆಯನ್ನು ಯಾವ ಆಧಾರದ ಮೇಲೆ ಸ್ಥಗಿತಗೊಳಿಸಿದ್ದೀರಿ..ಸರಿಯಾದ ವಿವರಣೆ ಕೊಡಿ ಎಂದು ಮಾಹಿತಿ-ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸಂಸದೀಯ ಸ್ಥಾಯಿ ಸಮಿತಿ ಟ್ವಿಟರ್​​ನ್ನು ಕೇಳಿದೆ. ಈ ಬಗ್ಗೆ 48ಗಂಟೆಯೊಳಗೆ ಲಿಖಿತವಾಗಿ ವಿವರಣೆ ನೀಡುವಂತೆ ಟ್ವಿಟರ್​​ಗೆ ಸೂಚನೆ ನೀಡಿ ಎಂದು ಶಶಿ ತರೂರ್​ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ಲೋಕಸಭಾ ಸಚಿವಾಲಯಕ್ಕೆ ಹೇಳಿದೆ ಎನ್ನಲಾಗಿದೆ. ನಿನ್ನೆ ಸಮಿತಿ ನಡೆಸಿದ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದ್ದು, ಅದರಲ್ಲಿ ಫೇಸ್​​ಬುಕ್​ ಮತ್ತು ಗೂಗಲ್​​ ಪ್ರತಿನಿಧಿಗಳೂ ಇದ್ದರು ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಟ್ವಿಟರ್​ ರವಿಶಂಕರ್​ ಪ್ರಸಾದ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದಂತೆ ಫೇಸ್​ಬುಕ್​ ಕೂಡ ಇದೇ ಕ್ರಮ ವಹಿಸಬಹುದೇ ಎಂದು ಸ್ಥಾಯಿ ಸಮಿತಿ ಸದಸ್ಯರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಫೇಸ್​ಬುಕ್​ ಪ್ರತಿನಿಧಿ, ನಾವು ಖಂಡಿತ ಹಾಗೆಲ್ಲ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇವರಿಬ್ಬರ ಟ್ವಿಟರ್ ಅಕೌಂಟ್​ ಲಾಕ್ ಮಾಡಿದ್ದಕ್ಕೆ ಇನ್ನೆರಡು ದಿನಗಳಲ್ಲಿ ವಿವರಣೆ ನೀಡಬೇಕು ಎಂದು ಸಂಸದೀಯ ಸಮಿತಿ ಟ್ವಿಟರ್​ಗೆ ಸೂಚಿಸಿದೆ.

ರವಿ ಶಂಕರ್​ ಪ್ರಸಾದ್​ ಅವರು ಯುಎಸ್​​ನ ಕಾಪಿರೈಟ್​ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಟ್ವಿಟರ್​ ಅವರ ವೈಯಕ್ತಿಕ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್​ ಮಾಡಿತ್ತು. ಹಾಗೇ ಶಶಿ ತರೂರ್​ ಟ್ವಿಟರ್ ಅಕೌಂಟ್​ ಕೂಡ ಇದೇ ಕಾರಣಕ್ಕೆ ನಿರ್ಬಂಧವಾಗಿತ್ತು. ಈ ಬಗ್ಗೆ ಶಶಿ ತರೂರ್​ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಟ್ವಿಟರ್ ಭಾರತದಲ್ಲಿ ಕಾರ್ಯನಿರ್ವಹಿಸುವಾಗ ಅದರ ನಿಯಮಗಳು, ಕಾರ್ಯವಿಧಾನಗಳು ಹೇಗಿರಬೇಕು ಎಂಬುದನ್ನು ಅದರ ಬಳಿಯೇ ಕೇಳಬೇಕು ಎಂದು ಶಶಿ ತರೂರ್​ ಟ್ವೀಟ್ ಮಾಡಿದ್ದರು.

ಒಟ್ಟಾರೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್​ ನಡುವೆ ಒಂದಲ್ಲ ಒಂದು ಕಾರಣಕ್ಕೆ ಸಂಘರ್ಷ ಏರ್ಪಡುತ್ತಲೇ ಇದೆ. ಭಾರತದ ಭೂಪಟವನ್ನು ತಪ್ಪಾಗಿ ತೋರಿಸಿದ ಟ್ವಿಟರ್​ ಇಂಡಿಯಾಕ್ಕೆ ಇದೀಗ ಕೇಂದ್ರ ಸರ್ಕಾರ ನೋಟಿಸ್​ ನೀಡಿದೆ. ಟ್ವಿಟರ್​ ಇಂಡಿಯಾದ ಮುಖ್ಯಸ್ಥ ಮನೀಶ್​ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್​ಐಆರ್​ ದಾಖಲಾಗಿದೆ.

ಇದನ್ನೂ ಓದಿ: Petrol Price Today: ಇಂದು ಪೆಟ್ರೋಲ್​, ಡೀಸೆಲ್ ಬೆಲೆಯಲ್ಲಿ ಬದಲಾವಣೆಗಳಿಲ್ಲ! ಪ್ರಮುಖ ನಗರಗಳಲ್ಲಿನ ಇಂಧನ ದರ ವಿವರ ಗಮನಿಸಿ

Parliamentary Standing Committee asked Twitter to explain why locked profile of Ravi Shankar Prasad