
ಪಾಟ್ನಾ, ಸೆಪ್ಟೆಂಬರ್ 17: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ತಾಯಿ ದಿ. ಹೀರಾಬೆನ್ ಕುರಿತಾದ ಎಐ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದ್ದಕ್ಕೆ, ಪಾಟ್ನಾ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೂಡಲೇ ಸೋಶಿಯಲ್ ಮೀಡಿಯಾಗಳಿಂದ ಈ ವಿಡಿಯೋವನ್ನು ತೆಗೆದುಹಾಕುವಂತೆ ಸೂಚನೆ ನೀಡಿದೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಪುಟದಿಂದ ಹಂಚಿಕೊಂಡಿದ್ದ ವಿಡಿಯೋವನ್ನು ತಕ್ಷಣ ತೆಗೆದುಹಾಕಲು ಹೈಕೋರ್ಟ್ ಆದೇಶಿಸಿದೆ. ಆ ವಿಡಿಯೋದಲ್ಲಿ ಪ್ರಧಾನಿ ಮೋದಿಯವರ ತಾಯಿ ಅವರ ಕನಸಿನಲ್ಲಿ ಬಂದು ಅವರೊಂದಿಗೆ ಮಾತನಾಡುತ್ತಿರುವಂತೆ ತೋರಿಸಲಾಗಿದೆ. ತಾಯಿ ಮತ್ತು ಮಗನ ನಡುವಿನ ಕಾಲ್ಪನಿಕ ಸಂಭಾಷಣೆಯನ್ನು ಎಐ ವಿಡಿಯೋ ತೋರಿಸುತ್ತದೆ.
ಈ ವಿಡಿಯೋ ಬಹಿರಂಗವಾದಾಗಿನಿಂದ ಬಿಜೆಪಿ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯನ್ನು ನಿಂದಿಸಿದ್ದಾರೆ.ಕಾಂಗ್ರೆಸ್ ಪಕ್ಷವು ಮಹಿಳೆಯರನ್ನು ನಿಂದಿಸುವ ಅಭ್ಯಾಸವನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಈ ವಿಡಿಯೋ ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿದ ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ಮತ್ತಷ್ಟು ಓದಿ: PM Modi at 75: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಶುಭ ಕೋರಿದ ವಿರೋಧ ಪಕ್ಷದ ನಾಯಕರು
ಇತ್ತೀಚೆಗೆ, ಬಿಹಾರದ ದರ್ಭಾಂಗದಲ್ಲಿ ರಾಹುಲ್ ಗಾಂಧಿಯವರ ಮತದಾರರ ಹಕ್ಕುಗಳ ಯಾತ್ರೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ಕಾಂಗ್ರೆಸ್ ಪಕ್ಷವು ಬಿಜೆಪಿ ಉದ್ದೇಶಪೂರ್ವಕವಾಗಿ ಅಂತಹ ಹಿಂಸಾಚಾರವನ್ನು ಪ್ರಚೋದಿಸಲು ತನ್ನ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಕಳುಹಿಸಿದೆ ಎಂದು ಹೇಳಿಕೊಂಡಿದೆ.
ಮೋದಿ ಇದಕ್ಕೆ ಪ್ರತಿಕ್ರಿಯಿಸಿ ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ ಎಂದು ಕರೆದಿದ್ದರು. ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ನನ್ನ ತಾಯಿಯನ್ನು ಏಕೆ ಎಳೆದುತಂದಿದ್ದೀರಿ ಎಂದು ಪ್ರಶ್ನಿಸಿದರು. ಬಿಜೆಪಿ ದೆಹಲಿ ಚುನಾವಣಾ ಕೋಶದ ಸಂಚಾಲಕ ಸಂಕೇತ್ ಗುಪ್ತಾ ಅವರ ದೂರಿನ ಮೇರೆಗೆ ಸೆಪ್ಟೆಂಬರ್ 13 ರಂದು ದೆಹಲಿ ಪೊಲೀಸರು ಕಾಂಗ್ರೆಸ್ ಮತ್ತು ಅದರ ಐಟಿ ಸೆಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿರಬೇಕು, ಆದರೆ ತಾಯಿಯನ್ನು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ