Video: ಛತ್ತೀಸ್​ಗಢ್​​ನ ಹಳ್ಳಿಯೊಂದರಲ್ಲಿ ವಿವಾದಿತ ಪ್ರತಿಜ್ಞಾ ವಿಧಿ ಸ್ವೀಕಾರ; ಕಾರ್ಯಕ್ರಮ ಆಯೋಜಕರನ್ನು ಹುಡುಕುತ್ತಿರುವ ಪೊಲೀಸರು !

| Updated By: Lakshmi Hegde

Updated on: Jan 08, 2022 | 11:06 AM

ಜನವರಿ 1 ರಂದು ಕುಂಡಿಕಾಲಾ ಮತ್ತು ಆರಾ ಎಂಬ ಎರಡು ಹಳ್ಳಿಗಳ ಜನರ ನಡುವೆ ಜಗಳ ನಡೆದಿತ್ತು. ಅದರ ಬೆನ್ನಲ್ಲೇ ಈ ವಿಡಿಯೋ ವೈರಲ್​ ಆಗಿದೆ ಎಂದು ಸರ್ಗುಜಾ ಜಿಲ್ಲೆಯ ಐಜಿ ಅಜಯ್​ ಕುಮಾರ್ ಯಾದವ್ ತಿಳಿಸಿದ್ದಾರೆ.

Video: ಛತ್ತೀಸ್​ಗಢ್​​ನ ಹಳ್ಳಿಯೊಂದರಲ್ಲಿ ವಿವಾದಿತ ಪ್ರತಿಜ್ಞಾ ವಿಧಿ ಸ್ವೀಕಾರ; ಕಾರ್ಯಕ್ರಮ ಆಯೋಜಕರನ್ನು ಹುಡುಕುತ್ತಿರುವ ಪೊಲೀಸರು !
ಪ್ರತಿಜ್ಞಾವಿಧಿ ಸ್ವೀಕಾರ ಮಾಡುತ್ತಿರುವ ಹಳ್ಳಿಗರು
Follow us on

ಭೋಪಾಲ್​: ಛತ್ತೀಸ್​ಗಢ್​​ನ ಹಳ್ಳಿಯೊಂದರಲ್ಲಿ ಜನರು ವಿಚಿತ್ರವಾದ ಪ್ರತಿಜ್ಞೆ ಸ್ವೀಕಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಹಾಗೇ, ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಂಥದ್ದೊಂದು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಆಯೋಜಿಸಿದವರಿಗಾಗಿ ಹುಡುಕುತ್ತಿರುವುದಾಗಿ ಹೇಳಿದ್ದಾರೆ. ಛತ್ತೀಸ್​ಗಢ್​​ನ  ಕುಂಡಿಕಾಲ ಎಂಬ ಹಳ್ಳಿಗರು ಈ ವಿಚಿತ್ರ ಪ್ರಮಾಣವಚನ ಸ್ವೀಕರಿಸಿದ್ದು,  ಅದು ಮುಸ್ಲಿಮರನ್ನು ಬಹಿಷ್ಕರಿಸುವುದಾಗಿದೆ.  ಹಿಂದುಗಳಾದ ನಾವು ಮುಸ್ಲಿಂ ಅಂಗಡಿಗಳಿಂದ ಯಾವುದೇ ವಸ್ತುಗಳನ್ನೂ ಖರೀದಿ ಮಾಡುವುದಿಲ್ಲ. ಯಾವುದೇ ಮುಸ್ಲಿಮರಿಗೂ ನಮ್ಮ ಭೂಮಿಯನ್ನು ಮಾರಾಟ ಮಾಡುವುದಿಲ್ಲ ಮತ್ತು ಬಾಡಿಗೆಗೂ ಕೊಡುವುದಿಲ್ಲ ಎಂಬುದು ಈ ಹಳ್ಳಿಗರ ಪ್ರತಿಜ್ಞಾ ವಿಧಿ.  ಬರೀ ಇಷ್ಟೇ ಅಲ್ಲ, ನಮ್ಮ ಹಳ್ಳಿಗೆ ಯಾವುದೇ ವಸ್ತುಗಳ  ಮಾರಾಟಗಾರರು ಬಂದರೂ ಮೊದಲು ಅವರ ಧರ್ಮ ಕೇಳುತ್ತೇವೆ. ಮುಸ್ಲಿಂ ಅಲ್ಲ ಎಂದರೆ ಮಾತ್ರ ಖರೀದಿ ಮಾಡುತ್ತೇವೆ. ಮುಸ್ಲಿಮರಿಗೆ ಯಾವುದೇ ಕೂಲಿ ಕೆಲಸವನ್ನೂ ಮಾಡಿಕೊಡುವುದಿಲ್ಲ ಎಂದೂ ಅವರು ಹೇಳಿದ್ದು ವಿಡಿಯೋದಲ್ಲಿ ಕೇಳುತ್ತದೆ ಎಂದು ರಾಷ್ಟ್ರೀಯ ಮಾಧ್ಯಮ ಎನ್​ಡಿಟಿವಿ ವರದಿ ಮಾಡಿದೆ.

ಮುಸ್ಲಿಮರನ್ನು ಬಹಿಷ್ಕರಿಸುತ್ತಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.  ಜನವರಿ 1 ರಂದು ಕುಂಡಿಕಾಲಾ ಮತ್ತು ಆರಾ ಎಂಬ ಎರಡು ಹಳ್ಳಿಗಳ ಜನರ ನಡುವೆ ಜಗಳ ನಡೆದಿತ್ತು. ಅದರ ಬೆನ್ನಲ್ಲೇ ಈ ವಿಡಿಯೋ ವೈರಲ್​ ಆಗಿದೆ ಎಂದು ಸರ್ಗುಜಾ ಜಿಲ್ಲೆಯ ಐಜಿ ಅಜಯ್​ ಕುಮಾರ್ ಯಾದವ್ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಗುಂಪುಗಳ ಭಾಗವಹಿಸುವಿಕೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.  ಕುಂಡಿಕಾಲಾ ಮತ್ತು ಆರಾ ಹಳ್ಳಿಗಳ ಹಿಂದು ಹಾಗೂ ಮುಸ್ಲಿಂ ಸಮುದಾಯಗಳ ಮಧ್ಯೆ ಗಲಾಟೆಯಾಗಿತ್ತು. ಈ ಘರ್ಷಣೆವೇಳೆ ಅಪ್ರಾಪ್ತೆಯೊಬ್ಬಳ ಮೇಲೆ ಕೂಡ ಹಲ್ಲೆಯಾಗಿತ್ತು ಅದಕ್ಕೆ ಸಂಬಂಧಪಟ್ಟವರನ್ನು ಈಗಾಗಲೇ ನಾವು ಬಂಧಿಸಿದ್ದೇವೆ.  ಅದರ ಬೆನ್ನಲ್ಲೇ ಹಳ್ಳಿಗರು ಇಂಥ ಕೆಲಸ ಮಾಡಿದ್ದಾರೆ. ನಾವು ಸಮಗ್ರ ತನಿಖೆಗೆ ಆದೇಶ ನೀಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.  ಇನ್ನು ವಿಡಿಯೋ ವೈರಲ್ ಆದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕರ್ಫ್ಯೂ ಮಧ್ಯೆ ಮಾನವೀಯತೆ ತೋರಿದ ಹುಬ್ಬಳ್ಳಿ ಪೊಲೀಸರು: ರಸ್ತೆಯಲ್ಲಿ ಏಕಾಏಕಿ ಕುಸಿದು ಬಿದ್ದ ಯುವಕನಿಗೆ ನೆರವು

Published On - 9:30 am, Sat, 8 January 22