ಕಾಳಿ ಚರಣ್ ಮಹಾರಾಜ್ ಜೈಲಿನಲ್ಲಿ ಇರುವ ಅಗತ್ಯವಿಲ್ಲ; ಜಾಮೀನು ನೀಡಿದ ಪುಣೆ ಕೋರ್ಟ್ ನ್ಯಾಯಾಧೀಶ ಎಂ.ಎ.ಶೇಖ್
ಈ ಮಧ್ಯೆ ಕಾಳಿ ಚರಣ್ ಮಹಾರಾಜ್ ಪರ ವಕೀಲ ಅಮೋಲ್ ಡಂಗೆ ಪುಣೆಯ ನ್ಯಾಯಾಲಯವೊಂದರಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ವಿರೋಧಿಸಿದ್ದರು.
ದ್ವೇಷ ಭಾಷಣ ಸಂಬಂಧಿತ ಪ್ರಕರಣದಲ್ಲಿ ಬಂಧಿತರಾಗಿದ್ದ ಧರ್ಮಗುರು ಕಾಳಿಚರಣ್ ಮಹಾರಾಜ್(Kalicharan Maharaj)ರಿಗೆ ಪುಣೆಯ ನ್ಯಾಯಾಲಯ(Pune Court)ವೊಂದು ಶುಕ್ರವಾರ ಜಾಮೀನು ನೀಡಿದೆ. ಕಾಳಿ ಚರಣ್ ಮಹಾರಾಜ್ ಕಳೆದ ತಿಂಗಳು ರಾಯ್ಪುರದಲ್ಲಿ ನಡೆದ ಧರ್ಮ ಸಮಾರಂಭವೊಂದರಲ್ಲಿ ಗಾಂಧೀಜಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಛತ್ತೀಸ್ಗಢ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿ ದೂರು ದಾಖಲಾಗಿತ್ತು. ನಂತರ ಛತ್ತೀಸ್ಗಢ ಪೊಲೀಸರು ಮಧ್ಯಪ್ರದೇಶಹ ಖುಜರಾಹೋದಲ್ಲಿ ಕಾಳಿ ಚರಣ್ರನ್ನು ಬಂಧಿಸಿದ್ದರು. ಡಿಸೆಂಬರ್ 31 ರಂದು ವಿಚಾರಣೆ ನಡೆಸಿದ್ದ ರಾಯ್ಪುರ ನ್ಯಾಯಾಲಯ ಕಾಳಿ ಚರಣ್ಗೆ ಜನವರಿ 13ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರ ಅವರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಮಧ್ಯೆ ಕಾಳಿ ಚರಣ್ ಮಹಾರಾಜ್ ಪರ ವಕೀಲ ಅಮೋಲ್ ಡಂಗೆ ಪುಣೆಯ ನ್ಯಾಯಾಲಯವೊಂದರಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ವಿರೋಧಿಸಿದ್ದರು. ಕಾಳಿ ಚರಣ್ ಮಹಾರಾಜ್ ಗಾಂಧೀಜಿ ವಿರುದ್ಧ ನೀಡಿಕೆ ಗಂಭೀರ ಸ್ವರೂಪದ್ದಾಗಿದ್ದು ಅದು ಜಾಮೀನು ನೀಡಲು ಯೋಗ್ಯವಲ್ಲ ಎಂದಿದ್ದರು. ಒಂದೊಮ್ಮೆ ಕಾಳಿಚರಣ್ರನ್ನು ಜಾಮೀನು ಕೊಟ್ಟು ಬಿಡುಗಡೆ ಮಾಡಿದರೆ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ವಿವಾದಾತ್ಮಕ ಹೇಳಿಕೆ ನೀಡಬಹುದು. ಈ ಮೂಲಕ ಜನರನ್ನು ಪ್ರಚೋದಿಸಬಹುದು. ನಾಪತ್ತೆಯಾಗಬಹುದು ಎಂದೂ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು. ಆದರೆ ಕಾಳಿ ಚರಣ್ ಪರ ವಕೀಲರು ಪ್ರತಿವಾದ ಮಾಡಿ, ಕಾಳಿ ಚರಣ್ ವಿರುದ್ಧ ದಾಖಲಾಗಿರುವ ಐಪಿಸಿ ಸೆಕ್ಷನ್ಗಳ ಅನ್ವಯ ಗರಿಷ್ಠ 3 ವರ್ಷ ಅವರಿಗೆ ಶಿಕ್ಷೆ ವಿಧಿಸಬಹುದು. ಆದರೆ ಅವರನ್ನು ಬಂಧಿಸಿರುವ ಪೊಲೀಸರು ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 41ರ ಪ್ರಕಾರ ನೋಟಿಸ್ ನೀಡಬೇಕಿತ್ತು. ಆದರೆ ಅವರು ನೋಟಿಸ್ ನೀಡಲಿಲ್ಲ. ಹೀಗಾಗಿ ಇದೊಂದು ಕಾನೂನು ಬಾಹಿರ ಬಂಧನ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಘಟನೆ ನಡೆದ ಏಳು ದಿನಗಳ ನಂತರ ಎಫ್ಐಆರ್ ದಾಖಲಾಗಿದೆ ಎಂದೂ ತಿಳಿಸಿದ್ದರು.
ವಾದ-ಪ್ರತಿವಾದಗಳನ್ನು ಆಲಿಸಿ, ನೀಡಲಾದ ದಾಖಲೆಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶ ಎಂ.ಎ.ಶೇಖ್, ಕಾಳಿ ಚರಣ್ರನ್ನು ನ್ಯಾಯಾಂಗ ಬಂಧನದಲ್ಲಿ ಇಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಆಳವಾದ ತನಿಖೆಗಳು ಆಗುವ ಅಗತ್ಯವಿದೆ. ಅಲ್ಲಿಯವರೆಗೂ ಆರೋಪಿಯನ್ನು ಜೈಲಿನಲ್ಲಿ ಇರಿಸಬೇಕಾದ ಅಗತ್ಯ ಕಾಣುತ್ತಿಲ್ಲ. ಅವರಿಗೆ ಷರತ್ತುಬದ್ಧ ಜಾಮೀನು ನೀಡಬಹುದು ಎಂದು ತೀರ್ಪು ನೀಡಿದ್ದಾರೆ. 25 ಸಾವಿರ ರೂ.ಶ್ಯೂರಿಟಿ ಬಾಂಡ್, ತನಿಖೆಗೆ ಸಹಕರಿಸಬೇಕು, ತಿಂಗಳಿಗೊಮ್ಮೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಭೇಟಿ ನೀಡಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಕಾಳಿ ಚರಣ್ರಿಗೆ ಜಾಮೀನು ನೀಡಿದ್ದಾರೆ.
ಕಾಳಿ ಚರಣ್ ರಾಯ್ಪುರದಲ್ಲಿ ಡಿಸೆಂಬರ್ 26ರಂದು ನಡೆದ ಧರ್ಮ ಸಂಸದ್ನಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು. ಈ ವೇಳೆ ಮಹಾತ್ಮ ಗಾಂಧಿಯವರನ್ನು ಅವಹೇಳನ ಮಾಡಿ, ಅವರನ್ನು ಹತ್ಯೆ ಮಾಡಿದ್ದ ನಾಥೂರಾಂ ಗೋಡ್ಸೆಯನ್ನು ಶ್ಲಾಘಿಸಿದ್ದರು. ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂನ ಗುರಿಯಾಗಿದೆ. ನಾವು ಕಟ್ಟಾ ಹಿಂದು ನಾಯಕನ ನೇತೃತ್ವದ ಸರ್ಕಾರವನ್ನೇ ಆಯ್ಕೆ ಮಾಡಬೇಕು. ಇಸ್ಲಾಂ ನಮ್ಮ ಕಣ್ಣ ಮುಂದೆಯೇ, ಅಫ್ಘಾನಿಸ್ತಾನ, ಇರಾನ್, ಇರಾಕ್ಗಳನ್ನು ವಶಪಡಿಸಿಕೊಂಡಿತು. ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಿಸುತ್ತೇನೆ ಎಂದು ಹೇಳಿದ್ದರು. ಅದಾದ ಬಳಿಕ ಅವರ ವಿರುದ್ಧಬಲಪಂಥೀಯ ನಾಯಕ ಮಿಲಿಂದ್ ಎಕ್ಬೋಟೆ, ಕ್ಯಾಪ್ಟನ್ (ನಿವೃತ್ತ) ದಿಗೇಂದ್ರ ಕುಮಾರ್ ಮತ್ತು ಇತರರು ಪುಣೆಯ ಖಡಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ: Viral Video: ತಂದೆ ಬರೆದ ಪತ್ರವನ್ನೇ ಮದುವೆಯ ಉಡುಪು ಮಾಡಿಕೊಂಡ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್