ರಾಜ್ಯಸಭೆ ಸದನ ನಾಯಕರಾಗಿ ಪಿಯೂಶ್ ಗೋಯಲ್ ನೇಮಕ; ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗ್ತಾರಾ ರಾಹುಲ್ ಗಾಂಧಿ?

| Updated By: ಸಾಧು ಶ್ರೀನಾಥ್​

Updated on: Jul 14, 2021 | 6:25 PM

ಕಾಂಗ್ರೆಸ್ ಪಕ್ಷವು ಲೋಕಸಭೆಯ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರನ್ನು ಬದಲಾಯಿಸಿ ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲು ನಿರ್ಧರಿಸಿದೆ. ಆದರೆ, ಯಾರನ್ನು ನೇಮಿಸುತ್ತೆ ಎಂಬ ಬಗ್ಗೆ ಕುತೂಹಲ ಇದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯ ಕಾಂಗ್ರೆಸ್ ನಾಯಕ ಹುದ್ದೆ ವಹಿಸಿಕೊಂಡು, ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯೊಳಗೆ ಹೋರಾಟ ನಡೆಸಬೇಕು ಎಂದು ಕಾಂಗ್ರೆಸ್ ಒಂದು ವರ್ಗದ ನಾಯಕರು ಬಯಸುತ್ತಿದ್ದಾರೆ.

ರಾಜ್ಯಸಭೆ ಸದನ ನಾಯಕರಾಗಿ ಪಿಯೂಶ್ ಗೋಯಲ್ ನೇಮಕ; ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗ್ತಾರಾ ರಾಹುಲ್ ಗಾಂಧಿ?
ರಾಹುಲ್ ಗಾಂಧಿ
Follow us on

ಸಂಸತ್ ಮಾನ್ಸೂನ್ ಅಧಿವೇಶನ ಮುಂದಿನ ಸೋಮವಾರದಿಂದ ಆರಂಭವಾಗಲಿದೆ. ಮಾನ್ಸೂನ್ ಅಧಿವೇಶನದಲ್ಲಿ ಪ್ರಮುಖ ಮಸೂದೆಗಳ ಮಂಡನೆಯ ಜೊತೆಗೆ ಕೆಲವೊಂದು ಬದಲಾವಣೆಗಳು ಲೋಕಸಭೆ, ರಾಜ್ಯಸಭೆಯಲ್ಲಿ ಆಗಬೇಕಾಗಿದೆ. ರಾಜ್ಯಸಭೆಯ ಸದನದ ನಾಯಕರಾಗಿ ಪಿಯೂಶ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ. ಆದರೇ, ಕಾಂಗ್ರೆಸ್ ಪಕ್ಷವು ಲೋಕಸಭೆಯ ಕಾಂಗ್ರೆಸ್ ನಾಯಕ ಹುದ್ದೆಯಲ್ಲಿರುವ ಅಧೀರ್ ರಂಜನ್ ಚೌಧರಿ ಅವರನ್ನು ಬದಲಿಸಲು ನಿರ್ಧರಿಸಿದ್ದು, ಈಗ ಆ ಹುದ್ದೆಗೆ ಯಾರುನ್ನು ನೇಮಿಸುತ್ತೆ ಎಂಬ ಕುತೂಹಲ ಇದೆ.

ರಾಜ್ಯಸಭೆಯ ಸದನದ ನಾಯಕರಾಗಿ ಪಿಯೂಶ್ ಗೋಯಲ್ ನೇಮಕ

ಸಂಸತ್‌ನ ಮಾನ್ಸೂನ್ ಅಧಿವೇಶನ ಜುಲೈ 19ರ ಮುಂದಿನ ಸೋಮವಾರದಿಂದ ಆರಂಭವಾಗಲಿದೆ. ಕೇಂದ್ರ ಸರ್ಕಾರವು ರಾಜ್ಯಸಭೆಯ ಸದನದ ನಾಯಕರಾಗಿ ಪಿಯೂಶ್ ಗೋಯಲ್ ಅವರನ್ನು (Piyush Goyal) ನೇಮಕ ಮಾಡಿದೆ. ಇದುವರೆಗೂ ಥಾವರ್ ಚಂದ್ ಗೆಹ್ಲೋಟ್ ರಾಜ್ಯಸಭೆಯ ಸದನದ ನಾಯಕರಾಗಿದ್ದರು. ಆದರೆ, ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾದ ಹಿನ್ನಲೆಯಲ್ಲಿ ರಾಜ್ಯಸಭೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ರಾಜ್ಯಸಭೆಯ ಸದಸ್ಯ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇತ್ತು.

ಇಷ್ಟು ದಿನಗಳ ಕಾಲ ರಾಜ್ಯಸಭೆಯ ಸದನದ ಉಪನಾಯಕರಾಗಿದ್ದ ಪಿಯೂಶ್ ಗೋಯಲ್ ಅವರಿಗೆ ಬಡ್ತಿ ನೀಡಿ ಸದನದ ನಾಯಕ ಹುದ್ದೆಗೆ (Leader of House in Rajya Sabha) ಸರ್ಕಾರ ಆಯ್ಕೆ ಮಾಡಿದೆ. 2010ರಿಂದ ರಾಜ್ಯಸಭೆಯ ಸದಸ್ಯರಾಗಿರುವ ಪಿಯೂಶ್ ಗೋಯಲ್ ಗೆ ಈಗ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಪ್ರಮುಖ ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರವಾಗುವಂತೆ ನೋಡಿಕೊಳ್ಳೇಬೇಕಾದ ಹೊಣೆಗಾರಿಕೆ ಹೆಗಲೇರಿದೆ.

ರಾಜ್ಯಸಭೆಯಲ್ಲಿ ಇನ್ನೂ ಬಿಜೆಪಿ, ಎನ್‌ಡಿಎಗೆ ಬಹುಮತ ಸಿಕ್ಕಿಲ್ಲ. ಹೀಗಾಗಿ ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್, ಟಿಆರ್‌ಎಸ್ ನಂಥ ಅಡ್ಡಗೋಡೆ ಮೇಲೆ ಕುಳಿತ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಮಸೂದೆ ಅಂಗೀಕಾರವಾಗುವಂತೆ ನೋಡಿಕೊಳ್ಳುವ ಚಾಕಚಾಕ್ಯತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಿದೆ. ಇದೇ ತಂತ್ರವನ್ನು ಈಗ ಪಿಯೂಶ್ ಗೋಯಲ್ ಮುಂದುವರಿಸಬಹುದು. ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸದನದ ನಾಯಕರಾಗಿದ್ದಾರೆ. ರಾಜ್ಯಸಭೆಯ ಸದನದ ನಾಯಕ ಹುದ್ದೆಗೆ ಕೇಂದ್ರದ ಕಾರ್ಮಿಕ ಖಾತೆ ಸಚಿವ ಭೂಪೇಂದ್ರ ಯಾದವ್ ಹೆಸರು ಕೂಡ ಕೇಳಿ ಬಂದಿತ್ತು.

ಲೋಕಸಭೆಯ ಕಾಂಗ್ರೆಸ್ ನಾಯಕರಾಗ್ತಾರಾ ರಾಹುಲ್?

ಇನ್ನು ಕಾಂಗ್ರೆಸ್ ಪಕ್ಷವು ಲೋಕಸಭೆಯ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರನ್ನು ಬದಲಾಯಿಸಿ ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲು ನಿರ್ಧರಿಸಿದೆ. ಆದರೆ, ಯಾರನ್ನು ನೇಮಿಸುತ್ತೆ ಎಂಬ ಬಗ್ಗೆ ಕುತೂಹಲ ಇದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಲೋಕಸಭೆಯ ಕಾಂಗ್ರೆಸ್ ನಾಯಕ ಹುದ್ದೆ (Congress in Lok Sabha) ವಹಿಸಿಕೊಂಡು, ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯೊಳಗೆ ಹೋರಾಟ ನಡೆಸಬೇಕು ಎಂದು ಕಾಂಗ್ರೆಸ್ ಒಂದು ವರ್ಗದ ನಾಯಕರು ಬಯಸುತ್ತಿದ್ದಾರೆ.

2019ರ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರಾಹುಲ್ ಗಾಂಧಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿಲ್ಲ. 2014-19ರ ಅವಧಿಯಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವೈಫಲ್ಯಗಳ ವಿರುದ್ಧ ಸದನದೊಳಗೆ ಸಮರ್ಥವಾಗಿ ಹೋರಾಡಿ ಹೆಸರು ಗಳಿಸಿದ್ದರು. ಆದರೆ, ಅಧೀರ್ ರಂಜನ್ ಚೌಧರಿ ಆ ಮಟ್ಟಿಗೆ ಹೋರಾಡುತ್ತಿಲ್ಲ ಎಂಬ ಅಸಮಾಧಾನ ಇದೆ.

ಹೀಗಾಗಿ ಲೋಕಸಭೆಯ ಕಾಂಗ್ರೆಸ್ ನಾಯಕರಾಗಿ ರಾಹುಲ್ ಗಾಂಧಿ, ಮುಂಚೂಣಿಗೆ ಬರಬೇಕು ಎನ್ನುವುದು ಕಾಂಗ್ರೆಸ್ಸಿಗರ ಒತ್ತಾಯ. ಆದರೆ, ರಾಹುಲ್ ಗಾಂಧಿಗೆ ಈಗಲೂ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಪಂಜಾಬ್‌ನ ಮನೀಶ್ ತಿವಾರಿ, ಕೇರಳದ ತಿರುವನಂತಪುರದ ಶಶಿ ತರೂರ್, ತೆಲಂಗಾಣದ ಉತ್ತಮ್ ಕುಮಾರ್ ರೆಡ್ಡಿ, ಪಂಜಾಬ್‌ನ ರವನೀತ್ ಸಿಂಗ್ ಬಿಟ್ಟು, ಅಸ್ಸಾಂನ ಗೌರವ್ ಗೋಗೋಯಿ ಹೆಸರು ಕೇಳಿ ಬರುತ್ತಿವೆ.

ಮಾನ್ಸೂನ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೆ ರಫೇಲ್ ಜೆಟ್ ಖರೀದಿಯ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕೆಂದು ಆಗ್ರಹಿಸುವ ಸಾಧ್ಯತೆ ಇದೆ. ಪ್ರಾನ್ಸ್ ದೇಶದಲ್ಲಿ ರಫೇಲ್ ಮಾರಾಟದಲ್ಲಿ ಅವ್ಯವಹಾರ ಆಗಿರುವ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಹೀಗಾಗಿ ಭಾರತದಲ್ಲೂ ರಫೇಲ್ ಜೆಟ್ ಖರೀದಿ ಅವ್ಯವಹಾರ ನಡೆದಿದ್ದು, ಇದರ ಬಗ್ಗೆ ಸಂಸತ್‌ನ ಜಂಟಿ ಸಮಿತಿಯಿಂದ ತನಿಖೆ ಆಗಬೇಕೆಂದು ಆಗ್ರಹಿಸುವುದು ಕಾಂಗ್ರೆಸ್ ಅಜೆಂಡಾದಲ್ಲಿ ಸೇರಿದೆ.

ಹೀಗಾಗಿ ಇದರ ಬಗ್ಗೆ ಹೋರಾಟಕ್ಕೆ ರಾಹುಲ್ ಗಾಂಧಿಯೇ ಲೋಕಸಭೆಯ ಕಾಂಗ್ರೆಸ್ ನಾಯಕರಾಗಿ ಅಖಾಡಕ್ಕಿಳಿಯುವುದು ಉತ್ತಮ ಎನ್ನುವ ಅಭಿಪ್ರಾಯ ಕಾಂಗ್ರೆಸ್ ಪಾಳಯದಲ್ಲಿದೆ. ಅಂತಿಮವಾಗಿ ಇದರ ಬಗ್ಗೆ ಸೋನಿಯಾಗಾಂಧಿ, ರಾಹುಲ್ ಗಾಂಧಿಯೇ ತೀರ್ಮಾನ ಕೈಗೊಳ್ಳಬೇಕು. ಇಂದು ಅಥವಾ ನಾಳೆ ಈ ಬಗ್ಗೆ ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಪಕ್ಷ ಕೈಗೊಳ್ಳಲಿದೆ.

(Piyush goyal to be appointed as Leader of House in Rajya Sabha will rahul gandhi become leader for Congress in Lok Sabha)

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)