Crime News: ಒಂದೂವರೆ ತಿಂಗಳಿಂದ ಗಂಡನ ಕೊಳೆತ ಶವದ ಜೊತೆಗೇ ಜೀವನ; ಏನಿದು ಸಾವಿನ ರಹಸ್ಯ?
Murder News Today: ಕೊಲ್ಕತ್ತಾದ ಮನೆಯೊಂದರಲ್ಲಿ ಒಂದೂವರೆ ತಿಂಗಳ ಹಿಂದೆ ಸಾವನ್ನಪ್ಪಿದ ವ್ಯಕ್ತಿಯ ಕೊಳೆತ ಶವದೊಂದಿಗೆ ಆತನ ಹೆಂಡತಿ ಮತ್ತು ಮಗಳು ಮಾಮೂಲಿನಂತೆ ಜೀವನ ನಡೆಸಿದ್ದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಕೊಲ್ಕತ್ತಾ: ಕಳೆದ ಒಂದೂವರೆ ತಿಂಗಳಿನಿಂದ ಗಂಡನ ಶವದ ಜೊತೆಯೇ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕೊಲ್ಕತ್ತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಈ ಘಟನೆ ನಡೆದಿದೆ. ಆಕೆ ತನ್ನ ಗಂಡ ಸತ್ತು ಒಂದೂವರೆ ತಿಂಗಳಾದರೂ ಆ ಶವವನ್ನು ಮಣ್ಣು ಮಾಡದೆ ಕೊಳೆತ ಹೆಣದೊಂದಿಗೇ ವಾಸವಾಗಿದ್ದಳು. ಸಂಪೂರ್ಣವಾಗಿ ಕೊಳೆತು ಹೋಗಿದ್ದ ಶವದೊಂದಿಗೇ ಜೀವನ ನಡೆಸುತ್ತಿದ್ದ ಆ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳಾಗಿದ್ದಳಾ ಎಂಬುದು ವಿಚಾರಣೆಯ ನಂತರ ತಿಳಿಯಲಿದೆ. ಆಕೆ ಮಾತ್ರವಲ್ಲದೆ ಆಕೆಯ ಜೊತೆಗೆ ಆಕೆಯ ಮಗಳು ಕೂಡ ಅದೇ ಮನೆಯಲ್ಲಿ ವಾಸವಾಗಿದ್ದಳು.
ಕೊಳೆತ ಶವದ ವಾಸನೆ ಆ ಮನೆಯ ಕಿಟಕಿಗಳನ್ನು ದಾಟಿ ಪಕ್ಕದ ಮನೆಗಳಿಗೂ ಹರಡಿತ್ತು. ಆ ದುರ್ವಾಸನೆಯನ್ನು ತಡೆಯಲಾರದೆ ಅಕ್ಕ-ಪಕ್ಕದ ಮನೆಯವರು ಆ ಮನೆಯತ್ತ ಬಂದು ನೋಡಿದ್ದರು. ಆದರೆ, ಕಳೆದೊಂದು ತಿಂಗಳಿನಿಂದ ಆ ಮಹಿಳೆ ಮನೆಯಿಂದ ಹೊರಗೆ ಬರುತ್ತಿದ್ದುದೇ ಅಪರೂಪವಾಗಿತ್ತು. ಎಷ್ಟು ಬಾಗಿಲು ಬಡಿದರೂ ಬಾಗಿಲನ್ನು ತೆರೆಯದ ಕಾರಣದಿಂದ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು.
ವಿಷಯ ತಿಳಿದ ಪೊಲೀಸರು ಆ ವಾಸನೆಯ ಮೂಲವನ್ನು ಕಂಡುಹಿಡಿಯಲು ಮಂಗಳವಾರ ರಾತ್ರಿ ಸ್ಥಳಕ್ಕೆ ಆಗಮಿಸಿದ್ದರು. ಮನೆಯ ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ರೂಮಿನ ಹಾಸಿಗೆಯ ಮೇಲೆ 78 ವರ್ಷದ ದಿಗ್ವಿಜಯ್ ಘೋಷ್ ಎಂಬುವವರ ಶವ ಕೊಳೆತ ಸ್ಥಿತಿಯಲ್ಲಿ ಬಿದ್ದಿತ್ತು. ಅದೇ ಮನೆಯಲ್ಲಿ ಈ ವಿಚಾರವೇ ಗೊತ್ತಿಲ್ಲದಂತೆ ಆತನ ಹೆಂಡತಿ ಮತ್ತು ಮಗಳು ವಾಸವಾಗಿದ್ದರು. ಆ ಶವ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಅಸ್ಥಿಪಂಜರದ ರೂಪದಲ್ಲಿತ್ತು.
ದಿಗ್ವಿಜಯ್ ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಆ ಮಹಿಳೆಯರೇ ಅವರನ್ನು ಕೊಂದಿದ್ದಾರಾ ಅಥವಾ ವಯೋಸಹಜವಾಗಿ ಅವರು ಸಾವನ್ನಪ್ಪಿದ್ದಾರಾ ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕ ಗೊತ್ತಾಗಲಿದೆ. ಪೊಲೀಸರು ಮನೆಯೊಳಗೆ ಬರುತ್ತಿದ್ದಂತೆ ಗಲಾಟೆ ಮಾಡಿದ ಆ ಮಹಿಳೆಯರಿಬ್ಬರು ಯಾವ ಪ್ರಶ್ನೆಗೂ ಉತ್ತರ ನೀಡಲಿಲ್ಲ. ಅವರು ದಿನನಿತ್ಯದಂತೆ ಅಡುಗೆ ಮಾಡಿಕೊಂಡು, ಊಟ ಮಾಡುತ್ತಾ, ಮಾಮೂಲಿನ ಜೀವನ ಸಾಗಿಸುತ್ತಿದ್ದುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಮನೆಯ ಬಾಗಿಲು ಮತ್ತು ಕಿಟಕಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಇದರಿಂದ ಮನೆಯೊಳಗೆ ಯಾರೂ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ, ಮನೆಯಲ್ಲಿ ನಡೆಯುವ ಘಟನೆಗಳೂ ಯಾರಿಗೂ ಗೊತ್ತಾಗುತ್ತಿರಲಿಲ್ಲ. ದಿಗ್ವಿಜಯ್ ಅವರ ಮಗಳು ಕೂಡ ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿರಲಿಲ್ಲ. ಮದುವೆಯಾದ ಮೇಲೂ ತಾಯಿಯ ಜೊತೆಗೇ ವಾಸವಾಗಿದ್ದಳು. ಆರೋಗ್ಯಕರವಾಗಿದ್ದ ಆಕೆ ಯಾಕೆ ಈ ವಿಷಯವನ್ನು ಯಾರಿಗೂ ಹೇಳಲಿಲ್ಲ ಮತ್ತು ಹೇಗೆ ಆ ಕೊಳೆತ ವಾಸನೆಯಲ್ಲಿ ಜೀವಿಸುತ್ತಿದ್ದರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Crime News: ಬಾಯ್ಫ್ರೆಂಡ್ನನ್ನು ಕೆಲಸದಿಂದ ಕಿತ್ತೊಗೆದ ಕಂಪನಿಗೆ ಗರ್ಲ್ಫ್ರೆಂಡ್ ಮಾಡಿದ್ದೇನು ಗೊತ್ತಾ?
Crime News: ಜೈಲು ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿ 7 ಕೈದಿಗಳು ಪರಾರಿ; ಪೊಲೀಸರು ಕಂಗಾಲು!
(Wife and Daughter Living with Decomposed Body Of Man In Kolkata House Murder Mystery)