Himachal Pradesh Rain: ಹಿಮಾಚಲ ಪ್ರದೇಶದಲ್ಲಿ ನಿಲ್ಲದ ಪ್ರವಾಹ; ಭಾರೀ ಮಳೆಯಿಂದ ಸೂಫಿ ಗಾಯಕ ಸೇರಿ 8 ಜನ ಸಾವು
Monsoon 2021 Updates: ಬೋಹ್ ಕಣಿವೆಯಲ್ಲಿ ಭೂ ಕುಸಿತ ಉಂಟಾಗಿ ಮೃತಪಟ್ಟವರಲ್ಲಿ ಪಂಜಾಬಿನ ಸೂಫಿ ಗಾಯಕ ಮನಮೀತ್ ಸಿಂಗ್ ಕೂಡ ಸೇರಿದ್ದಾರೆ.
ಧರ್ಮಶಾಲಾ: ಹಿಮಾಚಲಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಮಳೆಯಿಂದ ಹಿಮಾಚಲ ಪ್ರದೇಶದಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ (Himachal Pradesh Flood) ಕಂಗ್ರಾ ಜಿಲ್ಲೆಯ ಶಾಹ್ಪುರ ತೆಹ್ಸಿಲ್ನ ಬೋಹ್ ಎಂಬ ಗ್ರಾಮದಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಭಾರೀ ಭೂಕುಸಿತ (Landslide) ಉಂಟಾಗಿದೆ. ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ 6 ಜನರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಇನ್ನೂ 4 ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅವರು ಬದುಕಿರುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಬೋಹ್ ಕಣಿವೆಯಲ್ಲಿ ಭೂ ಕುಸಿತ ಉಂಟಾಗಿ ಮೃತಪಟ್ಟವರಲ್ಲಿ ಪಂಜಾಬಿನ ಸೂಫಿ ಗಾಯಕ ಮನಮೀತ್ ಸಿಂಗ್ ಕೂಡ ಸೇರಿದ್ದಾರೆ. ಅಮೃತಸರ ಮೂಲದವರಾದ ಮನಮೀತ್ ಸಿಂಗ್ ತಮ್ಮ ಸ್ನೇಹಿತರೊಂದಿಗೆ ಕರೇರಿ ಕೆರೆಯನ್ನು ವೀಕ್ಷಿಸಲು ತೆರಳಿದ್ದರು. ಆ ವೇಳೆ ಆ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದ್ದು, ಮನಮೀತ್ ಸಿಂಗ್ ನಾಪತ್ತೆಯಾಗಿದ್ದರು. 2 ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಮತ್ತು ಎನ್ಡಿಆರ್ಎಫ್ ತಂಡದವರು ಮಂಗಳವಾರ ರಾತ್ರಿ ಮನಮೀತ್ ಸಿಂಗ್ ಅವರ ಶವವನ್ನು ಹೊರಗೆ ಎಳೆದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಒಟ್ಟು 8 ಜನ ಬಲಿಯಾಗಿದ್ದಾರೆ. ಬೋಹ್ ಎಂಬ ಕುಗ್ರಾಮದಲ್ಲಿ ಇದ್ದಕ್ಕಿದ್ದಂತೆ ಬೆಟ್ಟ ಕುಸಿದ ಪರಿಣಾಮವಾಗಿ 17 ಜನರು ಮಣ್ಣಿನಡಿ ಸಿಲುಕಿದ್ದರು. ಅವರಲ್ಲಿ 7 ಜನರನ್ನು ರಕ್ಷಣೆ ಮಾಡಲಾಗಿತ್ತು. ಈಗಾಗಲೇ 6 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದಂತೆ 11 ವರ್ಷದ ಬಾಲಕಿಯೊಬ್ಬಳು ಕಾಲುಜಾರಿ ಕಾಲುವೆಗೆ ಬಿದ್ದು ಕೊಚ್ಚಿಹೋಗಿದ್ದಾಳೆ. ಹಾಗೇ, 55 ವರ್ಷದ ವ್ಯಕ್ತಿಯೊಬ್ಬರು ಪ್ರವಾಹದಲ್ಲಿ ಕೊಚ್ಚಿಹೋಗುವ ಮೂಲಕ ಹಿಮಾಚಲಪ್ರದೇಶದಲ್ಲಿ ಮಳೆಯ ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
Himachal Pradesh | Border Roads Organisation (BRO) authority informed that Gramphu-Kaza road was blocked at Dorni Nala due to landslide. Administration working on clearing the route and it will be opened by tomorrow. People are advised to avoid the route: Police, Lahaul-Spiti pic.twitter.com/2DLmxJhmwa
— ANI (@ANI) July 14, 2021
ಹಿಮಾಚಲ ಪ್ರದೇಶದ ಧರ್ಮಶಾಲಾ (Dharamshala) ಸುತ್ತಮುತ್ತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಧರ್ಮಶಾಲಾದಲ್ಲಿ ಪ್ರವಾಹದ ಹೊಡೆತಕ್ಕೆ ಮನೆಗಳು, ಕಾರು, ಸೇತುವೆಗಳು ಕೊಚ್ಚಿಹೋಗಿರುವ ವಿಡಿಯೋಗಳು ಭಾರೀ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಕಂಗ್ರಾ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಪ್ರಾಣಾಪಾಯದ ಭೀತಿಯಲ್ಲಿದ್ದಾರೆ. ಜುಲೈ 15ರವರೆಗೂ ಹಿಮಾಚಲಪ್ರದೇಶದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಧರ್ಮಶಾಲಾ ಸುತ್ತಮುತ್ತ ಇಂದು ಕೂಡ ಮಳೆಯ ಆರ್ಭಟ ಜೋರಾಗಿದೆ.
ಕರ್ನಾಟಕದಲ್ಲೂ ಮತ್ತೆ ಮಳೆಯ ಆರ್ಭಟ ಜೋರಾಗಿದ್ದು, ಜುಲೈ 18ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು, ಕೊಡಗು, ಬೆಂಗಳೂರು ಸೇರಿದಂತೆ ಅನೇಕ ಕಡೆ ಮಳೆಯಿಂದಾಗಿ ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Karnataka Dams: ರಾಜ್ಯದಲ್ಲಿ ಮಳೆ ಜೋರು; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
(including Sufi Singer Eight Dead In Rain Related Incidents In Himachal Pradesh)