AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ರಿಕಲ್ಚರ್ ಈಸ್ ಅವರ್ ಕಲ್ಚರ್ ಎಂದ ಮೋದಿ: ಗುಜರಾತ್‌ಗೆ 14 ಸಾವಿರ ಕೋಟಿ ರೂ. ಯೋಜನೆಗಳ ಕೊಡುಗೆ

ಪ್ರಧಾನಿ ಮೋದಿ ಗುಜರಾತ್‌ಗೆ ಭೇಟಿ ನೀಡಿ 'ಕೃಷಿ ನಮ್ಮ ಸಂಸ್ಕೃತಿ' ಎಂದರು. 14,000 ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಿದರು. ರೈತರಿಗೆ ಪಿಎಂ ಕಿಸಾನ್ ನೆರವು, ರಸಗೊಬ್ಬರ ಸಬ್ಸಿಡಿ ಘೋಷಿಸಿದರು. ಹೈನುಗಾರಿಕೆ ಸುಧಾರಣೆಗೆ ಒತ್ತು, ಕಂಕರೆಜ್ ಗೋ ತಳಿ ಸಂಶೋಧನಾ ಕೇಂದ್ರ ಹಾಗೂ ಬಯೋ-ಸಿಎನ್‌ಜಿ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೃಷಿ ಮೂಲಸೌಕರ್ಯ, ರಸ್ತೆ, ಮೆಟ್ರೋ ಯೋಜನೆಗಳೂ ಸೇರಿವೆ.

ಅಗ್ರಿಕಲ್ಚರ್ ಈಸ್ ಅವರ್ ಕಲ್ಚರ್ ಎಂದ ಮೋದಿ: ಗುಜರಾತ್‌ಗೆ 14 ಸಾವಿರ ಕೋಟಿ ರೂ. ಯೋಜನೆಗಳ ಕೊಡುಗೆ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Oct 30, 2026 | 12:32 PM

Share

ಅಹಮದಾಬಾದ್, ಅಕ್ಟೋಬರ್ 30: ಅಗ್ರಿಕಲ್ಚರ್ ಈಸ್ ಅವರ್ ಕಲ್ಚರ್ ಅಂದರೆ, ಕೃಷಿ ನಮ್ಮ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‌ನ ಬನಸ್ಕಾಂಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ರೈತರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಗುಜರಾತ್‌ನಲ್ಲಿ 14 ಸಾವಿರ ಕೋಟಿ ರೂ. ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಪ್ರಧಾನಿ ಮೋದಿ ಅಕ್ಟೋಬರ್ 30 ಮತ್ತು 31ರಂದು ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಯ ಮೊದಲ ದಿನ ಬನಸ್ಕಾಂಠದಲ್ಲಿ ಕೃಷಿ, ಹೈನುಗಾರಿಕೆ, ರಸ್ತೆ, ರೈಲು ಮತ್ತು ಮೆಟ್ರೋ ಸಂಪರ್ಕಕ್ಕೆ ಸಂಬಂಧಿಸಿದ ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.

ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮತ್ತು ರಸಗೊಬ್ಬರಗಳ ಬೆಲೆಯಲ್ಲಿ ಭಾರಿ ಏರಿಕೆಯಾದರೂ, ಅದರ ಹೊರೆ ರೈತರ ಮೇಲೆ ಬೀಳದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಾದ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗದಂತೆ ಸರ್ಕಾರವೇ ಹೆಚ್ಚುವರಿ ವೆಚ್ಚದ ಹೊಣೆ ಹೊತ್ತುಕೊಂಡಿದೆ. ಇದಕ್ಕಾಗಿ ಸರ್ಕಾರ 16 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ ಎಂದು ಮೋದಿ ಹೇಳಿದರು.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮತ್ತೊಂದು ಕಂತಿನ ಹಣ ಇಂದು ದೇಶದ ರೈತರ ಖಾತೆಗಳಿಗೆ ತಲುಪಿದೆ ಎಂದು ಮೋದಿ ತಿಳಿಸಿದರು. ರೈತರನ್ನು ದೇಶದ ಅನ್ನದಾತರು ಎಂದು ಕರೆದ ಅವರು, ದೇಶದ ಆರ್ಥಿಕತೆ ಮತ್ತು ಆಹಾರ ಭದ್ರತೆಯಲ್ಲಿ ರೈತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ರೈತರ ಆದಾಯ ಹೆಚ್ಚಿಸುವುದು, ಕೃಷಿಯನ್ನು ಆಧುನಿಕಗೊಳಿಸುವುದು ಮತ್ತು ಅವರಿಗೆ ಅಗತ್ಯವಾದ ಆರ್ಥಿಕ ನೆರವು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಹೈನುಗಾರಿಕೆಯಲ್ಲಿ ವಿಜ್ಞಾನ-ತಂತ್ರಜ್ಞಾನದ ಕ್ರಾಂತಿ, ಗುಜರಾತ್‌ನಲ್ಲಿ ಪಶುಸಂತಾನೋತ್ಪತ್ತಿ ಕೇಂದ್ರ

ನಾಲ್ಕು ಹಸುಗಳ ಹಾಲು ಒಂದೇ ಹಸುವಿನಿಂದ ಸಿಗುವಂತಾಗಬೇಕು ಪಶುಸಂಗೋಪನೆಯಲ್ಲೂ ರೈತರು ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ನಾಲ್ಕು ಹಸುಗಳಿಂದ ಸಿಗುವಷ್ಟು ಹಾಲು ಒಂದೇ ಉತ್ತಮ ತಳಿಯ ಹಸುವಿನಿಂದ ಸಿಗುವಂತಾಗಬೇಕು ಎಂಬುದು ನಮ್ಮ ಗುರಿಯಾಗಬೇಕು ಎಂದು ಹೇಳಿದರು.

ಇದಕ್ಕಾಗಿ ಹಸುಗಳ ತಳಿ ಸುಧಾರಣೆ, ಉತ್ತಮ ಪೋಷಣೆ ಮತ್ತು ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಹಸುಗಳಿಗೆ ಅಗತ್ಯವಿರುವ ಲಸಿಕೆ ಹಾಗೂ ಔಷಧೋಪಚಾರವನ್ನು ಸರಿಯಾದ ಸಮಯಕ್ಕೆ ನೀಡಬೇಕು. ಅನಾರೋಗ್ಯದಿಂದ ಹಾಲಿನ ಉತ್ಪಾದನೆ ಕುಸಿಯದಂತೆ ನೋಡಿಕೊಳ್ಳಬೇಕು ಎಂದು ಪಶುಸಂಗೋಪಕರಿಗೆ ಸಲಹೆ ನೀಡಿದರು.

ಹೆಚ್ಚು ಹಾಲು ನೀಡುವ ಉತ್ತಮ ತಳಿಯ ಜಾನುವಾರುಗಳನ್ನು ಬೆಳೆಸುವುದರ ಜೊತೆಗೆ, ಅವುಗಳ ಆರೋಗ್ಯ ಕಾಪಾಡುವುದೂ ಮುಖ್ಯ. ಇದರಿಂದ ಕಡಿಮೆ ಜಾನುವಾರುಗಳ ಮೂಲಕವೂ ಹೈನುಗಾರರು ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ. ರೈತರ ಆರ್ಥಿಕ ಭದ್ರತೆ, ರಸಗೊಬ್ಬರದ ಬೆಲೆ ಏರಿಕೆಯಿಂದ ರಕ್ಷಣೆ, ಪಶುಸಂಗೋಪನೆಯಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಹೈನುಗಾರಿಕೆಯ ಆದಾಯ ಹೆಚ್ಚಳಕ್ಕೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಒತ್ತು ನೀಡಿದರು.

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಬಿಡುಗಡೆ. ದೇಶದ 9.34 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 18,690 ಕೋಟಿ ರೂ. ಅಧಿಕ ಹಣವನ್ನು ನೇರವಾಗಿ ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಈ ಹಣವನ್ನು ತಲಾ 2,000 ರೂ.ನಂತೆ ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಕಂಕರೆಜ್ ಗೋ ತಳಿಗೆ ವಿಶೇಷ ಸಂಶೋಧನಾ ಕೇಂದ್ರ ಬನಸ್ಕಾಂಠದ ಭಿಲ್ಡಿಯಲ್ಲಿ 127 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಭಾರತ್ ಬೋವೈನ್ ಬ್ರೀಡಿಂಗ್ ಆ್ಯಂಡ್ ರಿಸರ್ಚ್ ಸೆಂಟರ್‌ (BBBRC) ಅನ್ನು ದೇಶಕ್ಕೆ ಸಮರ್ಪಿಸಲಾಯಿತು. ಕಂಕರೆಜ್ ತಳಿಯ ಜಾನುವಾರುಗಳ ಅಭಿವೃದ್ಧಿಗಾಗಿ ಸ್ಥಾಪಿಸಿರುವ ದೇಶದ ಮೊದಲ ವಿಶೇಷ ಕೇಂದ್ರ ಇದಾಗಿದೆ. ಇಲ್ಲಿ ಜಾನುವಾರುಗಳ ತಳಿ ಸುಧಾರಣೆ, ಉತ್ತಮ ತಳಿಯ ಸಂತಾನೋತ್ಪತ್ತಿ ಮತ್ತು ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಒತ್ತು ನೀಡಲಾಗುತ್ತದೆ. ಇದರಿಂದ ತಳಿ ಸುಧಾರಣೆಯ ವೇಗವನ್ನು 10ರಿಂದ 20 ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಸಗಣಿಯಿಂದ ಬಯೋ-ಸಿಎನ್‌ಜಿ ಉತ್ಪಾದನೆ ಬನಾಸ್ ಡೈರಿಯ ವತಿಯಿಂದ ಥರಾಡ್ ಮತ್ತು ರಾಧನ್‌ಪುರದಲ್ಲಿ ಎರಡು ಬಯೋ-ಸಿಎನ್‌ಜಿ ಘಟಕಗಳ ನಿರ್ಮಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಈ ಘಟಕಗಳು ಪ್ರತಿದಿನ ಕ್ರಮವಾಗಿ 75 ಟನ್ ಮತ್ತು 100 ಟನ್ ಗೋಮಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿವೆ. ಜಾನುವಾರುಗಳ ತ್ಯಾಜ್ಯವನ್ನು ಇಂಧನವಾಗಿ ಬಳಸುವ ಮೂಲಕ ತ್ಯಾಜ್ಯ ನಿರ್ವಹಣೆಗೂ ನೆರವಾಗಲಿದೆ.

ರಸ್ತೆ ಮತ್ತು ಮೆಟ್ರೋ ಸಂಪರ್ಕಕ್ಕೆ ಬಲ ಅಹಮದಾಬಾದ್‌ನಿಂದ ಮೆಹಸಾಣವರೆಗಿನ ರಾಜ್ಯ ಹೆದ್ದಾರಿ-41 ಅನ್ನು ನಾಲ್ಕು ಪಥಗಳಿಂದ ಎಂಟು ಪಥಗಳಿಗೆ ವಿಸ್ತರಿಸುವ ಯೋಜನೆಗೆ ಶಂಕುಸ್ಥಾಪನೆ ಮಾಡಲಾಯಿತು. ಇದಕ್ಕೆ ಸುಮಾರು 2,600 ಕೋಟಿ ರೂ.. ವೆಚ್ಚವಾಗಲಿದೆ.

ಅಹಮದಾಬಾದ್ ಮೆಟ್ರೋ ಎರಡನೇ ಹಂತದ ವಿಸ್ತರಣೆಯಲ್ಲೂ ಎರಡು ಪ್ರಮುಖ ಯೋಜನೆಗಳಿವೆ. ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ 6 ಕಿ.ಮೀ.ಗೂ ಅಧಿಕ ಉದ್ದದ ಮಾರ್ಗದಲ್ಲಿ ಐದು ನಿಲ್ದಾಣಗಳು ಇರಲಿವೆ. ಮತ್ತೊಂದು 3.3 ಕಿ.ಮೀ.ಗೂ ಅಧಿಕ ಉದ್ದದ ಮಾರ್ಗವು GIFT ಸಿಟಿಯಿಂದ ಶಾಹ್‌ಪುರದವರೆಗೆ ಸಂಪರ್ಕ ಕಲ್ಪಿಸಲಿದೆ.

ಕೃಷಿ ಮೂಲಸೌಕರ್ಯಕ್ಕೆ 4,950 ಕೋಟಿ ರೂ. ಕೃಷಿ ಮೂಲಸೌಕರ್ಯ ನಿಧಿಯಡಿ ಪೂರ್ಣಗೊಂಡಿರುವ 521 ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಾಯಿತು. ಇವುಗಳಿಗೆ ಒಟ್ಟು ಸುಮಾರು ₹4,950 ಕೋಟಿ ವೆಚ್ಚವಾಗಿದೆ. ಶೀತಲ ಸಂಗ್ರಹಣಾ ಘಟಕಗಳು, ಗೋದಾಮುಗಳು, ಆಹಾರ ಸಂಸ್ಕರಣಾ ಘಟಕಗಳು, ಹಸಿರುಮನೆಗಳು ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಅಗತ್ಯವಾದ ಸೌಲಭ್ಯಗಳು ಈ ಯೋಜನೆಗಳಲ್ಲಿವೆ.

ಇದಲ್ಲದೆ, 12 ತೋಟಗಾರಿಕೆ ಕ್ಲಸ್ಟರ್‌ಗಳ ಕಾರ್ಯಚಟುವಟಿಕೆಗಳಿಗೂ ಚಾಲನೆ ನೀಡಲಾಯಿತು. ಸುಮಾರು 1.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆಗಳು ಜಾರಿಯಾಗಲಿದ್ದು, 1.3 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಉತ್ತರ ಗುಜರಾತ್‌ನ ಎರಡು ಕ್ಲಸ್ಟರ್‌ಗಳಲ್ಲಿ ಆಲೂಗಡ್ಡೆ ಬೆಳೆಗೆ ವಿಶೇಷ ಆದ್ಯತೆ ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More