ದೆಹಲಿಯ ತೀನ್ ಮೂರ್ತಿ ಭವನ್ನಲ್ಲಿ ಇಂದು 271 ಕೋಟಿ ರೂ.ವೆಚ್ಚದ ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯ (ಪ್ರಧಾನಮಂತ್ರಿ ಸಂಗ್ರಹಾಲಯ)ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಸ್ವಾತಂತ್ರ್ಯಾನಂತರ ಭಾರತದಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ ಒಟ್ಟು 14 ಗಣ್ಯರಿಗೆ (ಜವಾಹರ್ಲಾಲ್ ನೆಹರೂರಿಂದ ಪ್ರಧಾನಿ ಮೋದಿಯವರೆಗೆ) ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸ್ಥಾಪಿತವಾದ ಮ್ಯೂಸಿಯಂ ಇದಾಗಿದ್ದು, ಅಂಬೇಡ್ಕರ್ ಜಯಂತಿಯಾದ ಇಂದೇ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಹೀಗೆ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೂಡಲೇ ಮ್ಯೂಸಿಯಂನ್ನು ಪ್ರವೇಶ ಮಾಡದೆ, ಟಿಕೆಟ್ ಪಡೆದು ಒಳಗೆ ಹೋಗಿ ಮಾದರಿಯಾದರು. ಇದರಲ್ಲಿರುವ ಎಲ್ಲ 43 ಗ್ಯಾಲರಿಗಳನ್ನೂ ಅವರು ವೀಕ್ಷಣೆ ಮಾಡಿದ್ದಾರೆ.
ಕಾರ್ಯಕ್ರಮದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಬಂದ ಬಳಿಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು, ಅಲ್ಲಿಂದ ಇಲ್ಲಿಯವರೆಗೆ ಆಡಳಿತ ನಡೆಸಿದ ಪ್ರತಿಯೊಂದು ಸರ್ಕಾರಗಳೂ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಪ್ರತಿಯೊಬ್ಬ ಪ್ರಧಾನಮಂತ್ರಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಅವರೆಲ್ಲರ ಸ್ಮರಣಾರ್ಥ, ಅವರ ಆಡಳಿತ, ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಪಟ್ಟ ವಿಭಿನ್ನ ವಿಷಯಗಳು, ಸ್ಮರಣಿಕೆಗಳು, ಎಲ್ಲರೂ ಎದುರಿಸಿದ ಸವಾಲಿನ ಕತೆಯನ್ನು ಹೇಳುವ ಸಂಗತಿಗಳನ್ನು ಈ ಸಂಗ್ರಹಾಲಯದಲ್ಲಿ ಭದ್ರ ಮಾಡಲಾಗಿದೆ ಎಂದು ಹೇಳಿದರು.
#WATCH | Delhi: Prime Minister Narendra Modi buys the first ticket at ‘Pradhanmantri Sangrahalaya’ as he visits the museum dedicated to the country’s Prime Ministers since Independence
(Source: PMO) pic.twitter.com/yhPeJGR8md
— ANI (@ANI) April 14, 2022
ಈ ಹಿಂದಿದ್ದ ನೆಹರೂ ಮ್ಯೂಸಿಯಂನ್ನೂ ಕೂಡ ಪ್ರಸಕ್ತ ಸಂಗ್ರಹಾಲಯದ ಜತೆ ಸಂಯೋಜಿಸಲಾಗಿದೆ. ಅದನ್ನು ಬ್ಲಾಕ್ 1 ಎಂದು ಪರಿಗಣಿಸಲಾಗಿದ್ದು, ಅದರಲ್ಲಿ ಜವಾಹರ್ಲಾಲ್ ನೆಹರೂ ಅವರ ಜೀವನ, ಕೊಡುಗೆಗಳ ಬಗ್ಗೆ ಹೇಳುವ ಅಪಾರ ವಿಷಯಗಳಿವೆ. ಹಾಗೇ, ಪ್ರಪಂಚದ ಹಲವು ನಾಯಕರಿಂದ ನೆಹರೂ ಅವರು ಸ್ವೀಕರಿಸಿದ ಮತ್ತು ಇದುವರೆಗೆ ಎಂದಿಗೂ ಸಾರ್ವಜನಿಕ ಪ್ರದರ್ಶನಕ್ಕೆ ತೆರೆದುಕೊಳ್ಳದ ಉಡುಗೊರೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇನ್ನುಳಿದ ಪ್ರಧಾನಿಗಳಿಗೆ ಸಂಬಂಧಪಟ್ಟ ವಸ್ತುಗಳೂ ಇದರಲ್ಲಿವೆ. ಸಂಗ್ರಹಾಲಯದ ಪ್ರದರ್ಶನವು, ವರ್ಚ್ಯುವಲ್, ಹೊಲೊಗ್ರಾಮ್ಸ್, ಮಲ್ಟಿ ಟಚ್, ಮಲ್ಟಿ ಮೀಡಿಯಾ, ಇಂಟರಾಕ್ಟಿವ್ ಕಿಯೋಸ್ಕಸ್, ಸ್ಮಾರ್ಟ್ಫೋನ್ ಆ್ಯಪ್ಗಳು, ಗಣಕೀಕೃತ ಚಲನ ಶಿಲ್ಪಗಳು, ಸಂವಾದಾತ್ಮಕ ಪರದೆಗಳಂಥ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಈ ಸಂಗ್ರಹಾಲಯದ ವಿನ್ಯಾಸ ತುಂಬ ಸುಸ್ಥಿರವಾಗಿದೆ. ನಿರ್ಮಾಣ ಹಂತದಲ್ಲಿ ಶಕ್ತಿ ವ್ಯಯವನ್ನು ತಪ್ಪಿಸಲಾಗಿದೆ. ಹಾಗೇ. ಇದನ್ನು ಕಟ್ಟುವ ಸಲುವಾಗಿ ಯಾವುದೇ ಒಂದು ಮರವನ್ನೂ ಕಡಿದಿಲ್ಲ, ಅಥವಾ ಸಸಿಗಳನ್ನು ಸ್ಥಳಾಂತರ ಮಾಡಿಲ್ಲ. ಈ ಪ್ರಧಾನಮಂತ್ರಿಗಳ ಮ್ಯೂಸಿಯಂನ ಲೋಗೋ ಧರ್ಮ ಚಕ್ರವಾಗಿದೆ. ದೇಶದ ಜನರು ಧರ್ಮ ಚಕ್ರವನ್ನು ಎತ್ತಿ ಹಿಡಿದಂತೆ ವಿನ್ಯಾಸಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಈ ರಾಷ್ಟ್ರದ ಸಂಕೇತ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: ‘ಧರಮ್ ಸಂಸದ್’ನಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ವ್ಯಕ್ತಪಡಿಸಲಾಗಿಲ್ಲ: ಸುಪ್ರೀಂಕೋರ್ಟ್ನಲ್ಲಿ ದೆಹಲಿ ಪೊಲೀಸ್