ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್​ಗೆ ಸಚಿವ ಮುಖ್ತರ್​ ಅಬ್ಬಾಸ್ ನಖ್ವಿ ಮೂಲಕ ಚಾದರ್​ ಕಳಿಸಿಕೊಟ್ಟ ಪ್ರಧಾನಿ ಮೋದಿ

| Updated By: Lakshmi Hegde

Updated on: Feb 03, 2022 | 8:52 AM

ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್​​ನಂದು, ದರ್ಗಾಕ್ಕೆ  ಸಾಮಾನ್ಯವಾಗಿ ಹಿಂದು ಮತ್ತು ಮುಸ್ಲಿಂ ಎರಡೂ ಸಮುದಾಯದವರು ಚಾದರ್ ಸಮರ್ಪಿಸುತ್ತಾರೆ. ದೇಶಾದ್ಯಂತ ಇರುವ ಅನೇಕರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.

ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್​ಗೆ ಸಚಿವ ಮುಖ್ತರ್​ ಅಬ್ಬಾಸ್ ನಖ್ವಿ ಮೂಲಕ ಚಾದರ್​ ಕಳಿಸಿಕೊಟ್ಟ ಪ್ರಧಾನಿ ಮೋದಿ
ಚಾದರ್​ ನೀಡಿದ ಪ್ರಧಾನಿ ಮೋದಿ
Follow us on

ಖ್ವಾಜಾ ಮೊಯಿನುದ್ದೀನ್ ಚಿಸ್ತಿ 810ನೇ ಉರುಸ್ ಹಿನ್ನೆಲೆಯಲ್ಲಿ ಅಜ್ಮೀರ್​ ಶರಿಫ್​ ದರ್ಗಾಕ್ಕೆ ಅರ್ಪಿಸಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾದರ್​​ವೊಂದನ್ನು, ಅಲ್ಪಸಂಖ್ಯಾತ ಇಲಾಖೆ ಸಚಿವ ಮುಖ್ತರ್​ ಅಬ್ಬಾಸ್ ನಖ್ವಿಯವರಿಗೆ ನೀಡಿದ್ದಾರೆ. ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ತಾವು ನಖ್ವಿಯವರಿಗೆ ಚಾದರ್​ ನೀಡುತ್ತಿರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಚಾದರ್​​ ಅಜ್ಮೇರ್​ ದರ್ಗಾಕ್ಕೆ ಅರ್ಪಿತವಾಗಲಿದೆ ಎಂದು ಹೇಳಿದ್ದಾರೆ. ಈ ಬಾರಿ ಅಜ್ಮೇರ್​ ದರ್ಗಾದಲ್ಲಿ ಸೂಫಿ ಸಂತ​ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯವರ 810ನೇ ಉರುಸ್ ಅಂದರೆ ಪುಣ್ಯತಿಥಿ​ ನಡೆಯುತ್ತಿದೆ.  ಅಂದಹಾಗೆ, ಪ್ರಧಾನಿ ಮೋದಿಯವರು ಇದೇ ಮೊದಲ ಬಾರಿಯಲ್ಲ. ಹಿಂದೆ ಕೂಡ ಮುಖ್ತರ್​ ಅಬ್ಬಾಸ್ ನಖ್ವಿಯವರ ಮೂಲಕವೇ ದರ್ಗಾಕ್ಕೆ ಚಾದರ್​ ನೀಡಿದ್ದಾರೆ.  

ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್​​ನಂದು, ದರ್ಗಾಕ್ಕೆ  ಸಾಮಾನ್ಯವಾಗಿ ಹಿಂದು ಮತ್ತು ಮುಸ್ಲಿಂ ಎರಡೂ ಸಮುದಾಯದವರು ಚಾದರ್ ಸಮರ್ಪಿಸುತ್ತಾರೆ. ದೇಶಾದ್ಯಂತ ಇರುವ ಅನೇಕರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಮುಸ್ಲಿಂ ಸಮುದಾಯದ ಜನಸಾಮಾನ್ಯರು, ನಟರು, ರಾಜಕಾರಣಿಗಳು ಉರುಸ್​ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಕೂಡ ಮಂಗಳವಾರ ದರ್ಗಾಕ್ಕೆ ಚಾದರ್​ ಕಳಿಸಿಕೊಟ್ಟಿದ್ದಾರೆ. ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್​​ಗಾಗಿ ರಾಹುಲ್​ ಗಾಂಧಿಯವರು ಚಾದರ್​ ಕೊಟ್ಟಿದ್ದನ್ನು ಕಾಂಗ್ರೆಸ್​​ನ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಇಮ್ರಾನ್​ ಪ್ರತಾಪ್​ಗಢಿ ದೃಢಪಡಿಸಿದ್ದಾರೆ.

ಖ್ವಾಜಾ ಗರೀಬ್ ನವಾಜ್ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸೂಫಿ ಸಂತರಾಗಿದ್ದರು. ಇವರು ಪ್ರವಾದಿ ಮುಹಮ್ಮದ್ ಅವರ ನೇರ ವಂಶಸ್ಥರು ಎಂದೂ ಹೇಳಲಾಗಿದೆ. ಇವರು ಹುಟ್ಟಿದ್ದು ಸಿಸ್ತಾನ್​​ನಲ್ಲಿ.  ಇಂದಿನ ಪೂರ್ವ ಇರಾನ್ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಪ್ರದೇಶದಲ್ಲ ಈ ಸಿಸ್ತಾನ್​ ಇದೆ. ಸಿಸ್ತಾನ್​​ನಿಂದ ಲಾಹೋರ್​ಗೆ ಬಂದು, ಅಲ್ಲಿಂದ ದೆಹಲಿಗೆ ತಲುಪಿದ್ದರು. ಕೊನೆಗೆ ರಾಜಸ್ಥಾನದ ಅಜ್ಮೇರ್​​ನಲ್ಲಿ ಶಾಶ್ವತವಾಗಿ ನೆಲೆಸಿದರು. ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅಜ್ಮೇರ್​​ನಲ್ಲಿಯೇ ಇದೆ. ಅವರು ನಿಧನರಾದ ದಿನವನ್ನು ಉರುಸ್​ ಎಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಶೇರ್ ಮಾಡಿ, ಡಿಲೀಟ್ ಮಾಡಿದ ಕಂಗನಾ; ಅದರಲ್ಲಿತ್ತು ಹೊಸ ಸಮಾಚಾರ!

Published On - 8:23 am, Thu, 3 February 22