
ನವದೆಹಲಿ, ಏಪ್ರಿಲ್ 16: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ತುರ್ತಾಗಿ ಮರುಸ್ಥಾಪಿಸಲು ಕರೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮಧ್ಯ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.
“ನನ್ನ ಆತ್ಮೀಯ ಸ್ನೇಹಿತರಾದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಫೋನ್ ಕರೆ ಸ್ವೀಕರಿಸಿದೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ನಾವು ಚರ್ಚಿಸಿದ್ದೇವೆ. ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ತುರ್ತಾಗಿ ಪುನಃಸ್ಥಾಪಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗದು; ಪ್ರಧಾನಿ ಮೋದಿ ಭರವಸೆ
ಏಪ್ರಿಲ್ 14ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ. ಈ ವರ್ಷ ಇಬ್ಬರು ನಾಯಕರ ನಡುವಿನ ಮೂರನೇ ಕರೆ ಇದಾಗಿತ್ತು. 40 ನಿಮಿಷಗಳಿಗೂ ಹೆಚ್ಚು ಕಾಲ ಇಬ್ಬರೂ ದೂರವಾಣಿಯಲ್ಲಿ ಮಾತನಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ