ದೆಹಲಿ: ಗ್ರಾಮೀಣ ಭಾರತದ ಬದಲಾವಣೆಗೆ ಪ್ರಧಾನಿ ಮೋದಿ ಇಂದು ಐತಿಹಾಸಿಕ ಯೋಜನೆ ಜಾರಿಗೆ ತರುತ್ತಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಜಾರಿಗೆ ತರುತ್ತಿರುವ ಈ ಯೋಜನೆಯಲ್ಲಿ ಏನಿದೆ? ಹಳ್ಳಿಯವ್ರಿಗೆ ಏನ್ ಲಾಭ ಅನ್ನೋದನ್ನು ಇಲ್ಲಿ ಓದಿ..
ಪ್ರಧಾನಿ ನರೇಂದ್ರ ಮೋದಿ ಗ್ರಾಮೀಣ ಭಾರತವನ್ನು ಗಮನದಲ್ಲಿಟ್ಟುಕೊಂಡು ಇಂದು ಮಹತ್ವದ ಯೋಜನೆಯೊಂದನ್ನು ಜಾರಿಗೆ ತರುತ್ತಿದ್ದಾರೆ. ಗ್ರಾಮೀಣ ಭಾರತವನ್ನು ಪರಿವರ್ತಿಸುವ ಲಕ್ಷಾಂತರ ಹಳ್ಳಿಗರ ಸಬಲೀಕರಣಕ್ಕೆ ಈ ಯೋಜನೆ ಮಹತ್ವದ್ದಾಗಿದೆ.
ಗ್ರಾಮೀಣ ಭಾರತಕ್ಕೆ ಪ್ರಧಾನಿ ಮೋದಿ ‘ಸ್ವಾಮಿತ್ವ’ ಯೋಜನೆ
ಮೋದಿ ಇಂದು ಜಾರಿಗೆ ತರುತ್ತಿರುವ ಸ್ವಾಮಿತ್ವ ಯೋಜನೆ ಆಸ್ತಿ ಕಾರ್ಡ್ ಅಥವಾ ಪ್ರಾಪರ್ಟಿ ಕಾರ್ಡ್ಗೆ ಸಂಬಂಧಿಸಿದ್ದಾಗಿದೆ. ಈ ಯೋಜನೆಯ ಚಾಲನೆಯಿಂದಾಗಿ ಸುಮಾರು ಒಂದು ಲಕ್ಷ ಆಸ್ತಿ ಮಾಲೀಕರು ತಮ್ಮ ಮೊಬೈಲ್‌ನ SMS ಲಿಂಕ್ ಮೂಲಕವೇ ಆಸ್ತಿ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಸಾಲ ಪಡೆಯಲು ಹಾಗೂ ಇತರೆ ಆರ್ಥಿಕ ನೆರವುಗಳನ್ನು ಪಡೆಯಲು ಗ್ರಾಮೀಣ ಜನರು ಈ ಕಾರ್ಡ್‌ಗಳನ್ನು ಬಳಕೆ ಮಾಡಬಹುದಾಗಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಗ್ರಾಮೀಣ ಜನರು, ಅವರ ಮೊಬೈಲ್ ಫೋನ್‌ಗೆ ಕಳುಹಿಸಲಾದ ಲಿಂಕ್ ಬಳಸಿ ಆಸ್ತಿ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ತದ ನಂತರ ಆಯಾ ರಾಜ್ಯ ಸರ್ಕಾರಗಳು ಪ್ರಾಪರ್ಟಿ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳಲಿವೆ.
ಯೋಜನೆ ಉದ್ದೇಶ ಏನು?
SMS ಲಿಂಕ್ ಮೂಲಕ ಈ ಆಸ್ತಿ ಕಾರ್ಡ್ ಪಡೆಯಬಹುದು. ಈ ಯೋಜನೆಯಿಂದ ಸಾಲ ಪಡೆಯಲು ಸಹಾಯಕವಾಗಲಿದೆ. ಸಂಪೂರ್ಣ್ ಡಿಜಿಟಲ್ ಟಚ್ ನೀಡಲಾಗಿದ್ದು ತಂತ್ರಜ್ಞಾನ ಬಳಕೆ ಮಾಡಲಾಗಿದೆ. ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ದೇಶದಾದ್ಯಂತ ಯೋಜನೆ ಜಾರಿ ಮಾಡಲು ನಿರ್ಧರಿಸಿದ್ದು, ಯೋಜನೆಯಿಂದ ಒಟ್ಟು 6.62 ಲಕ್ಷ ಗ್ರಾಮಗಳನ್ನು ಮುಟ್ಟುವ ಉದ್ದೇಶ ಹೊಂದಲಾಗಿದೆ. ಇಂದು ಪ್ರಧಾನಿ ಮೋದಿ ಜಾರಿ ಮಾಡಲಿರುವ ಯೋಜನೆಯಲ್ಲಿ ಆರು ರಾಜ್ಯಗಳ 763 ಗ್ರಾಮಗಳಿಂದ ಫಲಾನುಭವಿಗಳನ್ನು ಗುರುತಿಸಲಾಗಿದೆ. ಕರ್ನಾಟಕದ ಇಬ್ಬರು, ಉತ್ತರ ಪ್ರದೇಶದ 346, ಹರಿಯಾಣದ 221 , ಮಹಾರಾಷ್ಟ್ರದ 100 , ಮಧ್ಯಪ್ರದೇಶದ 44, ಉತ್ತರಾಖಂಡದ 50 ಮಂದಿ ‘ಸ್ವಾಮಿತ್ವ’ ಕಾರ್ಡ್ ಸ್ವೀಕರಿಸಲಿದ್ದಾರೆ.
ಸ್ವಾಮಿತ್ವ ಯೋಜನೆ ಎಂಬುದು ಪಂಚಾಯತ್ ರಾಜ್ ಸಚಿವಾಲಯದ ಯೋಜನೆಯಾಗಿದ್ದು, ರಾಷ್ಟ್ರೀಯ ಪಂಚಾಯತ್ ದಿನವಾದ ಏ. 24ರಂದು ಘೋಷಿಸಲಾಗಿತ್ತು. ಈ ಯೋಜನೆ ಇಂದು ಚಾಲನೆ ನೀಡಲಿರುವ ಮೋದಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.