ಕೊರೊನಾ ಲಸಿಕೆ ಪ್ರಗತಿ ಪರಿಶೀಲನೆ: ಲಸಿಕೆ ತಯಾರಿಕಾ ತಂಡಗಳ ಪರಿಶ್ರಮಕ್ಕೆ ಪ್ರಧಾನಿ ಶ್ಲಾಘನೆ

| Updated By: KUSHAL V

Updated on: Nov 28, 2020 | 8:13 PM

ದೇಶದ ಮೂರು ನಗರಗಳಲ್ಲಿರುವ ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಲಸಿಕೆ ತಯಾರಿ ಮತ್ತು ವಿತರಣೆ ಕುರಿತು ತಜ್ಞರ ಬಳಿ ಪ್ರಧಾನಿ ಮಾಹಿತಿ ಪಡೆದರು.

ಕೊರೊನಾ ಲಸಿಕೆ ಪ್ರಗತಿ ಪರಿಶೀಲನೆ: ಲಸಿಕೆ ತಯಾರಿಕಾ ತಂಡಗಳ ಪರಿಶ್ರಮಕ್ಕೆ ಪ್ರಧಾನಿ ಶ್ಲಾಘನೆ
ಪುಣೆಯ ಸೆರಂ ಇನ್ಸ್​ಟಿಟ್ಯೂಟ್​ ಆಫ್ ಇಂಡಿಯಾಗೆ ಬೇಟಿ ನೀಡಿದ ಪ್ರಧಾನಿ ಮೋದಿ ಕೊರೊನಾ ಲಸಿಕೆ ತಯಾರಿಯ ಪ್ರಗತಿ ಪರಿಶೀಲಿಸಿದರು.
Follow us on

ಅಹಮದಾಬಾದ್/ ಹೈದರಾಬಾದ್/ಪುಣೆ: ದೇಶದ ಮೂರು ನಗರಗಳಲ್ಲಿರುವ ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಲಸಿಕೆ ತಯಾರಿ ಮತ್ತು ವಿತರಣೆ ಕುರಿತು ತಜ್ಞರ ಬಳಿ ಪ್ರಧಾನಿ ಮಾಹಿತಿ ಪಡೆದರು.

ಅಹಮದಾಬಾದ್​ನ ಝೈಕೋವಿಡ್ ಲಸಿಕೆಗೆ ಪ್ರಧಾನಿ ಶ್ಲಾಘನೆ

ಮೊದಲು ಅಹಮದಾಬಾದ್​ನಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್​ಗೆ ತೆರಳಿದ ಪ್ರಧಾನಿ ಮೋದಿ, ಝೈಕೋವಿಡ್ ಲಸಿಕೆ ಕುರಿತು ಸಂಸ್ಥೆಯ ತಜ್ಞರೊಂದಿಗೆ ಸಮಾಲೋಚಿಸಿದರು. ಎರಡನೇ ಹಂತದ ಪ್ರಯೋಗದ ತಯಾರಿಯಲ್ಲಿರುವ ಝೈಡಸ್ ಬಯೋಪಾರ್ಕ್ ಸಂಸ್ಥೆಯ ಲಸಿಕೆ ಕುರಿತು ತಜ್ಞರು ಪ್ರಧಾನಿ ಬಳಿ ವಿಶ್ವಾಸ ವ್ಯಕ್ತಪಡಿಸಿದರು. ನಂತರ ಟ್ವೀಟ್ ಮೂಲಕ, ಝೈಡಸ್​ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ DNA ಆಧಾರಿತ ಕರೊನಾ ಲಸಿಕೆ ಬಗ್ಗೆ ವಿವರಗಳನ್ನು ತಿಳಿದುಕೊಂಡೆ. ಲಸಿಕೆ ತಯಾರಿಕೆ ಹಿಂದೆ ಶ್ರಮಿಸುತ್ತಿರುವ ತಂಡವನ್ನು ಶ್ಲಾಘಿಸುತ್ತೇನೆ. ಭಾರತ ಸರ್ಕಾರ ಈ ತಂಡಕ್ಕೆ ಅಗತ್ಯ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಹೈದರಾಬಾದ್​ನಲ್ಲೇನಾಯ್ತು?
ಮಧ್ಯಾಹ್ನ 1.30ಕ್ಕೆ ಹೈದರಾಬಾದ್ ಸಮೀಪದ ಭಾರತ್ ಬಯೋಟೆಕ್​ ಲಸಿಕೆ ಉತ್ಪಾದನಾ ಕಂಪನಿಗೆ ತಲುಪಿದ ಪ್ರಧಾನಿ ಮೋದಿ ಸಂಸ್ಥೆಯ ತಜ್ಞರ ಜೊತೆ ಚರ್ಚೆ ನಡೆಸಿದರು. ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆ ಮತ್ತು ICMR ಸಹಯೋಗದಲ್ಲಿ ಉತ್ಪಾದನೆಯಾಗಿ ಮೂರನೇ ಹಂತದ ಪ್ರಯೋಗದಲ್ಲಿರುವ ಕೋವ್ಯಾಕ್ಸಿನ್ ಲಸಿಕೆಯ ಪ್ರಗತಿ ಕುರಿತು ಹರ್ಷ ವ್ಯಕ್ತಪಡಿಸಿದರು.

ಆಕ್ಸ್​ಫರ್ಡ್ ವಿವಿ ಲಸಿಕೆ ಪರಿಶೀಲನೆ
ಪುಣೆಯಿಂದ 17 ಕಿ.ಮೀ ದೂರದಲ್ಲಿರುವ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಪ್ರಧಾನಿ ಮೋದಿ, ಆಸ್ಟ್ರಾಜೆನೆಕಾ ಮತ್ತು ಆಕ್ಸ್​ಫರ್ಡ್​ ವಿವಿ ಸಹಯೋಗದಲ್ಲಿ ರೂಪಿಸಲಾದ ಲಸಿಕೆ ಲಭ್ಯತೆಯ ಕುರಿತು ಸಮಾಲೋಚನೆ ನಡೆಸಿದರು. ನಂತರ, ಸಂಜೆ 6 ಗಂಟೆಗೆ ದೆಹಲಿಯತ್ತ ಮುಖಮಾಡಿದರು. ಲಸಿಕೆಯ ತಯಾರಿ, ಬಿಡುಗಡೆ ಮತ್ತು ಹಂಚಿಕೆಯ ಕುರಿತು ಯೋಜನೆ ರೂಪಿಸಲು ಪ್ರಧಾನಿ ಮೋದಿಗೆ ಇಂದಿನ  ಭೇಟಿ ನೆರವಾಗಲಿದೆ ಎಂಬ ಮಾಹಿತಿ ದೊರೆತಿದೆ.

ಮೋದಿ ‘ಲಸಿಕೆ ಪ್ರವಾಸ’ಕ್ಕೆ ಕಾಂಗ್ರೆಸ್​ ಟೀಕೆ
ಪ್ರಧಾನಿ ಕೈಗೊಂಡ ಇಂದಿನ ಭೇಟಿಯನ್ನು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟೀಕಿಸಿದ್ದಾರೆ. ಈ ಭೇಟಿ ಪ್ರಧಾನಿಯ ಇವೆಂಟ್ ಮ್ಯಾನೇಜ್​ಮೆಂಟ್​ನ ಭಾಗವೇ ಹೊರತು, ನೈಜ ಕಾಳಜಿ ಹೊಂದಿಲ್ಲ ಎಂದು ಟೀಕಿಸಿದ್ದಾರೆ.