ದೆಹಲಿ ಗಲಭೆ: ಈ ವ್ಯಕ್ತಿಯಿಂದ ಜೆಎನ್ಯು ವಿದ್ಯಾರ್ಥಿಗೆ ಹೋಗಿತ್ತು ಒಂದು ಸೂಚನೆ..ಪೊಲೀಸರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ
ಗಲಭೆಯನ್ನು ಹೆಚ್ಚಿಸಲು ಈ ರಸ್ತೆ ತಡೆ ಪ್ರತಿಭಟನೆ ಒಂದು ಪೂರ್ವ ಯೋಜಿತ ಪಿತೂರಿಯಾಗಿತ್ತು. ಅದಕ್ಕಾಗಿ ಯಾದವ್, ಇಮಾಮ್ ಮತ್ತು ಜೆಎನ್ಯುದ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಮೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಈಶಾನ್ಯ ದೆಹಲಿಯಲ್ಲಿ ಫೆಬ್ರವರಿಯಲ್ಲಿ ಅದೆಷ್ಟು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು ಎಂಬುದು ಗೊತ್ತೇ ಇದೆ. ಇದಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಹೊಸ ವಿಚಾರವನ್ನು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಚಾರ್ಜ್ಶೀಟ್ನಲ್ಲಿ ಬಹಿರಂಗಪಡಿಸಿದ್ದಾರೆ.
ಅಂದು ನಡೆದ ರಸ್ತೆ ತಡೆಯ ಹಿಂದೆ ಸ್ವರಾಜ್ ಅಭಿಯಾನ ಮುಖಂಡ ಯೋಗೇಂದ್ರ ಯಾದವ್ ಕೈವಾಡವಿದೆ. ರೋಡ್ ಜಾಮ್ ಮಾಡಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲಿಘಡ್ ಮುಸ್ಲಿಂ ಯೂನಿವರ್ಸಿಟಿ ಮತ್ತು ದಹಲಿ ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಯೋಗೇಂದ್ರ ಯಾದವ್, ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ ಪಿಎಚ್ಡಿ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ಗೆ ಸೂಚನೆ ನೀಡಿದ್ದರು ಎಂದು ಪೊಲೀಸರು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಗೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಗಲಭೆಯನ್ನು ಹೆಚ್ಚಿಸಲು ಈ ರಸ್ತೆ ತಡೆ ಪ್ರತಿಭಟನೆ ಒಂದು ಪೂರ್ವ ಯೋಜಿತ ಪಿತೂರಿಯಾಗಿತ್ತು. ಅದಕ್ಕಾಗಿ ಯಾದವ್, ಇಮಾಮ್ ಮತ್ತು ಜೆಎನ್ಯುದ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಮೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರು. ಈ ರಸ್ತೆ ತಡೆ ಪ್ರತಿಭಟನೆ ಮುಂದೆ ಗಲಭೆ ಹಿಂಸಾತ್ಮಕ ರೂಪ ಪಡೆದುಕೊಳ್ಳಲು ಪ್ರಮುಖ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇಮಾಮ್ ಹಾಗೂ ಖಾಲಿದ್ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ದೆಹಲಿ ಗಲಭೆಗೆ ಸಂಬಂಧಪಟ್ಟ ಇನ್ನೂ ದೊಡ್ಡದೊಡ್ಡ ವ್ಯಕ್ತಿಗಳನ್ನು ಬೆಳಕಿಗೆ ತರಲಾಗುವುದು. ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.