ಪ್ರಧಾನಿ ಮಧ್ಯಸ್ಥಿಕೆಗೆ ಒಲಿದ ಫಲ, ಬಾಲ್ಯದ ಗೆಳೆಯನಿಗೆ ನೆರವಾದ ಮೋದಿ, 15 ವರ್ಷಗಳ ಭೂ ಹೋರಾಟಕ್ಕೆ ಸಿಕ್ತು ಮುಕ್ತಿ, ಬಿಲ್ಡರ್‌ಗಳಿಂದ ಜಾಗ ಹಸ್ತಾಂತರ

ಪ್ರಧಾನಿ ನರೇಂದ್ರ ಮೋದಿ ಅವರ ಬಾಲ್ಯದ ಸ್ನೇಹಿತ ಅಸ್ಗರ್ ಅಲಿ ವೋರಾ ಅವರ 15 ವರ್ಷಗಳ ಭೂ ವಿವಾದಕ್ಕೆ ಪರಿಹಾರ ಸಿಕ್ಕಿದೆ. ಮೋದಿ ಅವರ ಮಧ್ಯಸ್ಥಿಕೆಯ ನಂತರ, ಬಿಜೆಪಿಯ ಶಾಸಕರ ಕಂಪನಿಯು ಅಕ್ರಮವಾಗಿ ಕಬಳಿಸಿದ್ದ ಭೂಮಿಯನ್ನು ವಾಪಸ್ ನೀಡಿದೆ ಮತ್ತು ಪ್ರಕರಣಗಳನ್ನು ಹಿಂಪಡೆದಿದೆ. ಇದು ಪ್ರಧಾನಿಯ ನೈತಿಕ ಒತ್ತಡ ಮತ್ತು ಬಾಲ್ಯದ ಸ್ನೇಹದ ಕಾರಣದಿಂದ ಸಾಧ್ಯವಾಯಿತು. ಈ ತ್ವರಿತ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಧಾನಿ ಮಧ್ಯಸ್ಥಿಕೆಗೆ ಒಲಿದ ಫಲ, ಬಾಲ್ಯದ ಗೆಳೆಯನಿಗೆ ನೆರವಾದ ಮೋದಿ, 15 ವರ್ಷಗಳ ಭೂ ಹೋರಾಟಕ್ಕೆ ಸಿಕ್ತು ಮುಕ್ತಿ, ಬಿಲ್ಡರ್‌ಗಳಿಂದ ಜಾಗ ಹಸ್ತಾಂತರ
ನರೇಂದ್ರ ಮೋದಿ

Updated on: Sep 16, 2026 | 12:53 PM

ಮುಂಬೈ, ಸೆಪ್ಟೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಅವರ ಶಾಲಾ ಸಹಪಾಠಿಯಾಗಿದ್ದ ಅಸ್ಗರ್ ಅಲಿ ವೋರಾ ಅವರ ಬಹುದಿನಗಳ ಭೂ ವಿವಾದಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ. ತಮ್ಮ ಜಮೀನನ್ನು ಅತಿಕ್ರಮಿಸಲಾಗಿದೆ ಎಂದು ವೋರಾ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ದೂರು ನೀಡಿದ ಕೆಲವೇ ದಿನಗಳಲ್ಲಿ, ಮಹಾರಾಷ್ಟ್ರದ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರ ಕಂಪನಿ ಆ ಜಾಗದ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟು, ಹಳೆಯ ಪೊಲೀಸ್ ದೂರನ್ನು ಹಿಂಪಡೆದಿದೆ.

ಗುಜರಾತ್‌ನ ವಡ್ನಗರದ ಬಿ.ಎನ್. ಶಾಲೆಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಓದಿದ್ದ ಅಸ್ಗರ್ ಅಲಿ ವೋರಾ, ಸೆಪ್ಟೆಂಬರ್ 8 ರಂದು ಮೋದಿಯವರನ್ನು ಭೇಟಿಯಾಗಿ ತಮ್ಮ ಜಮೀನಿನ ಅಕ್ರಮ ಪರಭಾರೆ ಬಗ್ಗೆ ಸಿಬಿಐ (CBI) ತನಿಖೆ ನಡೆಸುವಂತೆ ಕೋರಿದ್ದರು.

ಏನಿದು ಭೂ ವಿವಾದ?: 1989ರಲ್ಲಿ ಭಯಂದರ್ ಪೂರ್ವದ ನವಘರ್‌ನಲ್ಲಿ ವೋರಾ ಅವರು 2810 ಚದರ ಮೀಟರ್ ಜಮೀನು ಖರೀದಿಸಿದ್ದರು. ಆದರೆ 2011ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸ್ವಯಂ ಬಿಲ್ಡರ್ಸ್ ಮತ್ತು ಶಾಸಕ ಮೆಹ್ತಾ ಒಡೆತನದ ಸೆವೆನ್ ಇಲೆವೆನ್ ಕನ್ಸ್ಟ್ರಕ್ಷನ್ಸ್ ಸಂಸ್ಥೆಗಳು ಈ ಜಾಗವನ್ನು ಅತಿಕ್ರಮಿಸಿವೆ ಎಂದು ವೋರಾ ಆರೋಪಿಸಿದ್ದರು.

ಮತ್ತಷ್ಟು ಓದಿ: ಭೂ ವಿವಾದ ಬಗೆಹರಿಸಿಕೊಡಿ: ಪ್ರಧಾನಿ ಮೋದಿ ಭೇಟಿ ಮಾಡಿ ಸಿಬಿಐ ತನಿಖೆಗೆ ಸ್ಕೂಲ್‌ಮೇಟ್ ಮನವಿ

ನಿರ್ಮಾಣ ಪರವಾನಗಿ ವಾಪಸ್: ಪ್ರಧಾನಿಯವರ ಮಧ್ಯಪ್ರವೇಶದ ಬೆನ್ನಲ್ಲೇ ಸೆವೆನ್ ಇಲೆವೆನ್ ಸಂಸ್ಥೆಯು ಮೀರಾ-ಭಯಂದರ್ ಮಹಾನಗರ ಪಾಲಿಕೆಯ (MBMC) ಪಟ್ಟಣ ಯೋಜನಾ ವಿಭಾಗಕ್ಕೆ ಪತ್ರ ಬರೆದಿದ್ದು, ಜಾಗದ ಮೇಲಿನ ‘ಪ್ರಾರಂಭ ಪ್ರಮಾಣಪತ್ರ’ವನ್ನು ರದ್ದುಪಡಿಸುವಂತೆ ಮತ್ತು ಠೇವಣಿ ಮೊತ್ತವನ್ನು ಹಿಂದಿರುಗಿಸುವಂತೆ ಕೋರಿದೆ.

ಕೇಸ್ ಹಿಂಪಡೆತ: 2015ರಲ್ಲಿ ವೋರಾ ಹಾಗೂ ಅವರ ಸಹವರ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಅತಿಕ್ರಮಣ ದೂರನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಉಭಯ ಬಣಗಳ ನಡುವೆ ಒಪ್ಪಂದ ಏರ್ಪಟ್ಟಿದೆ.

ಸಚಿವರ ಮಧ್ಯಸ್ಥಿಕೆ: ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಪ್ರಧಾನಿ ಮೋದಿ ಮತ್ತು ವೋರಾ ಅವರ ಭೇಟಿಯ ಫೋಟೋವನ್ನು ಹಂಚಿಕೊಂಡು, ಪ್ರಧಾನಿ ತಮ್ಮ ಗೆಳೆಯನಿಗೆ ಖಂಡಿತವಾಗಿಯೂ ನ್ಯಾಯ ಒದಗಿಸುತ್ತಾರೆ ಎಂದು ಬರೆದುಕೊಂಡಿದ್ದರು.

ಆಡಳಿತ ಮಂಡಳಿಯ ತಕ್ಷಣದ ಕ್ರಮ: ದಶಕಗಳಿಂದ ಕಂದಾಯ ಇಲಾಖೆ ಹಾಗೂ ಪೊಲೀಸರ ಮಟ್ಟದಲ್ಲಿ ನನೆಗುದಿಗೆ ಬಿದ್ದಿದ್ದ ಪ್ರಕರಣಕ್ಕೆ ಪ್ರಧಾನಿಯವರ ಕಚೇರಿಯಿಂದ ಬಂದ ಗಮನದ ನಂತರ ಮಹಾನಗರ ಪಾಲಿಕೆಯು ಸೆಪ್ಟೆಂಬರ್ 16 ರಂದು ತುರ್ತು ವಿಚಾರಣೆ ನಿಗದಿಪಡಿಸಿತ್ತು. ಆದರೆ ವಿಚಾರಣೆಗೆ ಮುನ್ನವೇ ಶಾಸಕರ ಕಂಪನಿ ಹಿಂದೆ ಸರಿದಿದೆ.

ಸ್ಥಳೀಯವಾಗಿ ತೀವ್ರ ಚರ್ಚೆ: ಅಧಿಕಾರದಲ್ಲಿದ್ದರೂ ಪ್ರಧಾನಿಯವರ ನೈತಿಕ ಒತ್ತಡ ಮತ್ತು ಬಾಲ್ಯದ ಸ್ನೇಹದ ಕಾರಣದಿಂದ ಬಿಜೆಪಿ ಶಾಸಕರೊಬ್ಬರು ತಕ್ಷಣವೇ ಹಿಂದೆ ಸರಿದು ಜಮೀನನ್ನು ಮೂಲ ಮಾಲೀಕರಿಗೆ ಬಿಟ್ಟುಕೊಟ್ಟಿರುವ ನಿರ್ಧಾರ ಮಹಾರಾಷ್ಟ್ರ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us