ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಮತ್ತೆ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಶಹಜಾನ್ಪುರದಲ್ಲಿ 36,230 ಕೋಟಿ ರೂಪಾಯಿ ವೆಚ್ಚದ ಗಂಗಾ ಎಕ್ಸ್ಪ್ರೆಸ್ ವೇ (Ganga Expressway) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಉತ್ತರಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗವನ್ನು ಸಂಪರ್ಕಿಸಲಿದ್ದು, ದೆಹಲಿ, ಹರ್ಯಾಣ ಮತ್ತು ಬಿಹಾರಕ್ಕೆ ಉತ್ತರಪ್ರದೇಶವನ್ನು ಇನ್ನಷ್ಟು ಸಮೀಪ ಮಾಡಲಿದೆ. ಈ ಗಂಗಾ ಎಕ್ಸ್ಪ್ರೆಸ್ ವೇ 594 ಕಿಮೀ ಉದ್ದ ಇರಲಿದ್ದು, 2020ರ ನವೆಂಬರ್ 26ರಂದು ಯೋಗಿ ಆದಿತ್ಯನಾಥ್ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು.
ಇದೀಗ ನಿರ್ಮಾಣವಾಗಲಿರುವ ಎಕ್ಸ್ಪ್ರೆಸ್ ವೇ ಮೀರತ್ನಿಂದ ಪ್ರಾರಂಭವಾಗಲಿದ್ದು, ಹಾಪುರ, ಬುಲಂದ್ಶಹರ್, ಅಮ್ರೋಹಾ, ಸಂಭಲ್, ಬಾದೌನ್, ಶಹಜಹಾನ್‌ಪುರ, ಹರ್ದೋಯಿ, ಉನ್ನಾವೋ, ರಾಯ್ ಬರೇಲಿ ಮತ್ತು ಪ್ರತಾಪ್‌ಗಢಗಳ ಮೂಲಕ ಹಾದುಹೋಗಲಿದೆ. ರಾಜ್ಯದಲ್ಲಿರುವ ಉಳಿದ ಎಕ್ಸ್ಪ್ರೆಸ್ವೇಗಳಂತೆ ಈ ಎಕ್ಸ್ಪ್ರೆಸ್ ವೇ ಕೂಡ ಏರ್ಸ್ಟ್ರಿಪ್ ಹೊಂದಿರಲಿದ್ದು, ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅವಕಾಶ ಇರಲಿದೆ. ಈ ಏರ್ಸ್ಟ್ರಿಲ್ ಶಹಜಾನ್ಪುರದಲ್ಲಿ 3.5ಕಿಮೀಗಳಷ್ಟು ಉದ್ದ ಇರಲಿದೆ.
ಯೋಜನೆಯ ವಿನ್ಯಾಸದ ಪ್ರಕಾರ ಎಕ್ಸ್ಪ್ರೇಸ್ ವೇಗೆ ಘರ್ಮುಕ್ತೇಶ್ವರ್ನಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದು ಹಾಪುರ ಮತ್ತು ಬುಲಂದ್ಶಹರ್ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅದರ ಹೊರತಾಗಿ ಗಂಗಾ ಎಕ್ಸ್ಪ್ರೆಸ್ ವೇ ಮಧ್ಯೆ, 9 ಸಾರ್ವಜನಿಕ ಅನುಕೂಲ ಕೇಂದ್ರಗಳು, 7 ರೈಲ್ವೆ ಮೇಲ್ಸೇತುವೆಗಳು, 14 ದೊಡ್ಡ ಸೇತುವೆಗಳು, 126 ಚಿಕ್ಕ ಸೇತುವೆಗಳು, 381 ಅಂಡರ್ಪಾಸ್ಗಳು ನಿರ್ಮಾಣವಾಗಲಿವೆ.
ರೈತರಿಂದ ಭೂಮಿ ಖರೀದಿ
ಗಂಗಾ ಎಕ್ಸ್ಪ್ರೆಸ್ ವೇ ನಿರ್ಮಣಕ್ಕಾಗಿ ಶೇ.94ರಷ್ಟು ಭೂಮಿಯನ್ನು ರೈತರಿಂದ ಖರೀದಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಒಟ್ಟಾರೆ 7386 ಹೆಕ್ಟೇರ್ ಭೂಮಿ ಬೇಕಾಗಿತ್ತು. ಅದನ್ನು ಒಟ್ಟು 82,750 ರೈತರಿಂದ ಖರೀದಿ ಮಾಡಲಾಗಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಪೂರ್ವಾಂಚಲ ಎಕ್ಸ್ಪ್ರೆಸ್ ವೇ ಉದ್ಘಾಟನೆ ಮಾಡಿದ್ದರು. ಅದು ಉತ್ತರಪ್ರದೇಶದ ಪೂರ್ವ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಲು ಸಾಲು ಭೇಟಿ; ಮುಂದಿನ 15 ದಿನದಲ್ಲಿ 4 ಬಾರಿ ಪ್ರವಾಸ