ರಮೇಶ್ ಕುಮಾರ್ ವಿರುದ್ಧ ಗರಂ ಆದ ಕಾಂಗ್ರೆಸ್ ಹೈಕಮಾಂಡ್: ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ ಎಂದ ಕೈ ನಾಯಕರು
ರಮೇಶ್‌ಕುಮಾರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ. ರಮೇಶ್ ಕುಮಾರ್ ಮಾತುಗಳಿಗೆ ಕಾಂಗ್ರೆಸ್ ನಾಯಕತ್ವ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಮಹಿಳೆಯರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ಇದೀಗ ದೊಡ್ಡ ಬಿರುಗಾಳಿಯನ್ನೇ ಬೀಸಿದೆ. ರಮೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ. ರಮೇಶ್ ಕುಮಾರ್ ಮಾತುಗಳಿಗೆ ಕಾಂಗ್ರೆಸ್ ನಾಯಕತ್ವ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಮಾತುಗಳಿಂದ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ ಇವುಗಳು ಸಮರ್ಥನೆಗೆ ಮೀರಿದ್ದಾಗಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಪಕ್ಷದ ಚುನಾವಣಾ ಕಾರ್ಯತಂತ್ರದ ಮೇಲೂ ಪರಿಣಾಮ ಬೀರಲಿದೆ. ಉತ್ತರ ಪ್ರದೇಶದಲ್ಲಿ ಲಡಕಿ ಹೂಂ ಲಡ್ ಸಕ್ತಾ ಹೂ ಎನ್ನುವ ಘೋಷವಾಖ್ಯದೊಂದಿಗೆ ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ಮಹಿಳೆಯರನ್ನೇ ಆದ್ಯತೆಯಾಗಿ ಚುನಾವಣಾ ಪ್ರಚಾರ ಮಾಡಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಮಹಿಳಾ ವಿರೋಧಿ ಹೇಳಿಕೆ ನೀಡಿದರೆ ಚುನಾವಣೆ ಮೇಲೂ ಫಲಿತಾಂಶ ಬೀರಲಿದೆ ಎಂದು ಹೈಕಮಾಂಡ್ ನಾಯಕರು ಕಿಡಿಕಾರಿದ್ದಾರೆ. ರಮೇಶ್‌ಕುಮಾರ್ ಅವರಿಂದ ಪಕ್ಷಕ್ಕೆ ಆದ ಡ್ಯಾಮೇಜ್ ಕಂಟ್ರೋಲ್ ಗೆ ರಣದೀಪ್ ಸುರ್ಜೇವಾಲಗೆ ಕೈ ಹೈಕಮಾಂಡ್ ಹೊಣೆ ನೀಡಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಣದೀಪ್ ಅವರು ಪತ್ರಿಕಾ ಗೋಷ್ಠಿ ನಡೆಸುವ ಸಾಧ್ಯತೆಯಿದ್ದು, ರಮೇಶ್ ಕುಮಾರ್ ವಿರುದ್ದವೂ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಶಾಸಕ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ ಯಾರಾದರೂ ಆಗಲಿ ಹೇಗೆ ಇಂತಹ ಪದಗಳನ್ನು ಹೇಳುತ್ತಾರೆ. ಅತ್ಯಾಚಾರ ಅತ್ಯಂತ ಹೇಯ ಕೃತ್ಯ ಅದರ ಕುರಿತು ಇಂತಹ ಹೇಳಿಕೆ ಸಮರ್ಥನೀಯವಲ್ಲ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಆದರೆ ರಮೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಮೇಶ್ ಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು
ಈ ನಡುವೆಮಹಿಳೆಯರ ವಿರುದ್ಧ ಅವಹೇಳಕಾರಿ ಹೇಳಿಕೆ ವಿಚಾರವಾಗಿ ರಮೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆ ಸೊಸೈಟಿ ಫಾರ್ ಸೆಕುರಿಂಗ್ ಜುಸ್ಟಿಸ್ ಸಂಘಟನೆಯಿಂದ ದೂರು ನೀಡಲಾಗಿದೆ. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಲಾಗಿದ್ದು, ರಮೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ದೂರು ನೀಡಲಾಗಿದೆ.
ಶಾಸಕ ರಮೇಶ್ ಕುಮಾರ್ ನಿನ್ನೆ ಸದನದಲ್ಲಿ ರೇಪ್ ಆಗುವುದನ್ನು ತಡೆಯಲು ಸಾಧ್ಯವಾಗದೇ ಇದ್ದರೆ ಅದನ್ನು ಅನುಭವಿಸಬೇಕು ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಇಂದು ಕ್ಷಮೆಯನ್ನೂ ಯಾಚಿಸಿದ್ದರು. ಆದರೂ ಕಾಂಗ್ರೆಸ್ ಹೈಕಮಾಂಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Published On - 7:19 pm, Fri, 17 December 21