PM Modi Video: ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಪ್ರಧಾನಿ ಮೋದಿ; ಮಾತು ಕೊಟ್ಟಂತೆ ನಡೆದಿದ್ದೇವೆಂದು ಸೆಲ್ಫೀ ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾತ್ರಿ ಸೆಲ್ಫಿ ವಿಡಿಯೋ ಮಾಡುವ ಮೂಲಕ ದೇಶದ ಜನರಿಗೆ ಸಂದೇಶ ರವಾನಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭಾ ಅಧಿವೇಶನದಲ್ಲಿ ‘ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕ’ ಅಂಗೀಕಾರಗೊಂಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದು, ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ದೃಢಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ದೇಶದಲ್ಲಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಗ್ಯಾಂಗ್‌ಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ.

PM Modi Video: ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಪ್ರಧಾನಿ ಮೋದಿ; ಮಾತು ಕೊಟ್ಟಂತೆ ನಡೆದಿದ್ದೇವೆಂದು ಸೆಲ್ಫೀ ವಿಡಿಯೋ
Pm Modi Video
Image Credit source: PTI

Updated on: Jul 30, 2026 | 11:45 PM

ನವದೆಹಲಿ, ಜುಲೈ 30: ಇತ್ತೀಚೆಗೆ ಒಂದಾದ ನಂತರ ಒಂದರಂತೆ ಮಧ್ಯರಾತ್ರಿ ಸೆಲ್ಫೀ ವಿಡಿಯೋ ಮಾಡುವ ಮೂಲಕ ಗಮನಸೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi Video) ಇನ್​ಸ್ಟಾಗ್ರಾಮ್ ಫಾಲೋವರ್​ಗಳ ಸಂಖ್ಯೆಯೂ ಭಾರೀ ಹೆಚ್ಚಳವಾಗಿದೆ. ಈ ಮೂಲಕ ಪ್ರಧಾನಿ ಮೋದಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ಇದೀಗ ಮತ್ತೊಮ್ಮೆ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಇಂದು ರಾತ್ರಿ ಪ್ರಧಾನಿ ಮೋದಿ ಮತ್ತೊಂದು ಹೊಸ ಸೆಲ್ಫೀ ವಿಡಿಯೋ ರಿಲೀಸ್ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಪ್ರಧಾನಿ ಮೋದಿ, ಪರೀಕ್ಷಾ ಅಕ್ರಮ ತಡೆ ವಿಧೇಯಕದ ಅಂಗೀಕಾರವು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾಗೆ ಕ್ಷಮೆಯೇ ಇಲ್ಲ ಎಂದಿದ್ದಾರೆ.

ಪರೀಕ್ಷಾ ವಂಚನೆ ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವವರಿಗೆ ಪ್ರಧಾನಮಂತ್ರಿ ಮೋದಿ ಕಠಿಣ ಎಚ್ಚರಿಕೆಯನ್ನು ನೀಡಿದರು. “ಯಾವುದೇ ಪೇಪರ್ ಮಾಫಿಯಾ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಯಾವುದೇ ಗ್ಯಾಂಗ್ ಮತ್ತು ದೇಶದ ಮಕ್ಕಳ ಭವಿಷ್ಯದ ಜೊತೆ ಆಟವಾಡುವ ಯಾವುದೇ ಪಡೆಯನ್ನು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

“ವಿಕಸಿತ ಭಾರತದ ಕನಸನ್ನು ನನಸು ಮಾಡಲು ಇಡೀ ದೇಶವೇ ಒಟ್ಟಾಗಿ ಮುನ್ನಡೆಯಬೇಕಿದೆ. ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮುಂಬರುವ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು. ದಶಕಗಳಿಂದಲೂ ಸತತವಾಗಿ ಬಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳನ್ನು ಎದುರಿಸುತ್ತಲೇ ಬಂದಿವೆ. ಹೀಗಾಗಿಯೇ ಪರೀಕ್ಷಾ ಸುಧಾರಣೆಗಳನ್ನು ತರುವುದು ಅತ್ಯಗತ್ಯವಾಗಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು

“ಇದನ್ನು ಎದುರಿಸಲು ನಮಗೆ ಕಠಿಣ ಕಾನೂನುಗಳ ಅಗತ್ಯವಿತ್ತು. ನಾವು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಿದೆವು, ಮತ್ತು ನಾನು ನಿಮಗೆ ವಾಗ್ದಾನ ನೀಡಿದಂತೆ, ಸಂಸತ್ತಿನ ಎರಡೂ ಮನೆಗಳಲ್ಲಿ ಅಪಾರ ಸಂಖ್ಯೆಯ ಸಂಸದರ ಭಾಗವಹಿಸುವಿಕೆಯೊಂದಿಗೆ ಈ ಕುರಿತು ಸುದೀರ್ಘ ಚರ್ಚೆಗಳು ನಡೆದಿವೆ” ಎಂದು ಪ್ರಧಾನಿಯವರು ತಮ್ಮ 2.26 ನಿಮಿಷಗಳ ವೀಡಿಯೊದಲ್ಲಿ ತಿಳಿಸಿದ್ದಾರೆ.


“ಒಂದು ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ನಾವು ಸತತವಾಗಿ ಒಂದರ ನಂತರ ಒಂದರಂತೆ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಫಾಸ್ಟ್-ಟ್ರ್ಯಾಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ವಿವಿಧ ಪಾಲುದಾರರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರವು ಸಾಂಸ್ಥಿಕ ಸುಧಾರಣೆಗಳು ಮತ್ತು ರಾಜ್ಯಗಳೊಂದಿಗೆ ಹೆಚ್ಚಿನ ಸಹಕಾರದೊಂದಿಗೆ ಕೆಲಸ ಮಾಡುತ್ತಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ

ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದ ನಡುವೆಯೂ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ವಿಧೇಯಕವು ಬುಧವಾರವಷ್ಟೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕಾಗಿ ಕಳುಹಿಸಲಾಗುತ್ತದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 pm, Thu, 30 July 26

Loading...
Unable to load recommendations.
Follow Us