PM Modi Ramanuja statue Inauguration Updates: ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ

| Updated By: ganapathi bhat

Updated on: Feb 05, 2022 | 9:37 PM

Statue of Equality Inauguration Updates: ಪ್ರತಿಮೆಯು ಕುಳಿತ ಭಂಗಿಯಲ್ಲಿ ಇರುವ ಪ್ರಪಂಚದ ಅತೀ ಎತ್ತರದ ಮೂರ್ತಿಗಳಲ್ಲಿ ಒಂದಾಗಿದೆ. ಸಮಾನತೆಯ ಪ್ರತಿಮೆಯು ಶನಿವಾರ (ಫೆಬ್ರವರಿ 5) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ.

PM Modi Ramanuja statue Inauguration Updates: ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿಯಿಂದ ಸಮಾನತೆಯ ಪ್ರತಿಮೆ ಅನಾವರಣ

ಹೈದರಾಬಾದ್: ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ (Ramanujacharya Sahasrabdi) ಕಾರ್ಯಕ್ರಮವು ಹೈದರಾಬಾದ್​ನ ಹೊರವಲಯದಲ್ಲಿ ಇರುವ ಮುಂಚಿತ್ತಾಲ್ ಎಂಬಲ್ಲಿ ನಡೆಯುತ್ತಿದೆ. 11ನೇ ಶತಮಾನದ ಸಂತ ಶ್ರೀರಾಮಾನುಜರ 1,000ನೇ ಜನ್ಮೋತ್ಸವ ಸಂಭ್ರಮದ ಈ ಸಂದರ್ಭದಲ್ಲಿ ರಾಮಾನುಜಾಚಾರ್ಯರ ಪಂಚಲೋಹದ ಬೃಹತ್ ಪ್ರತಿಮೆ ಅನಾವರಣಗೊಂಡಿದೆ. ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ (Chinna Jeeyar Swamy) ಆಶ್ರಮದ ಸಮೀಪದಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಂಚು ಹಾಗೂ ಜಿಂಕ್​ನಿಂದ ನಿರ್ಮಾಣಗೊಂಡಿರುವ ಈ ಪ್ರತಿಮೆಯು ಕುಳಿತ ಭಂಗಿಯಲ್ಲಿ ಇರುವ ಪ್ರಪಂಚದ ಅತೀ ಎತ್ತರದ ಮೂರ್ತಿಗಳಲ್ಲಿ ಒಂದಾಗಿದೆ. ಸಮಾನತೆಯ ಪ್ರತಿಮೆಯು (Statue of Equality) ಶನಿವಾರ (ಫೆಬ್ರವರಿ 5) ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಂದ ಉದ್ಘಾಟನೆಗೊಂಡಿದೆ. ಈ ಸಮಾರಂಭದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಓದುಗರು ಪಡೆದುಕೊಳ್ಳಬಹುದು.

LIVE NEWS & UPDATES

The liveblog has ended.
  • 05 Feb 2022 07:53 PM (IST)

    ರಾಮೇಶ್ವರ್ ರಾವ್ ಸೇವೆ ಕೊಂಡಾಡಿದ ಚಿನ್ನಜೀಯರ್ ಶ್ರೀ

    ಡಾ.ಜೆ. ರಾಮೇಶ್ವರ್‌ ರಾವ್‌ ಅವರು ಕೇವಲ ಉದ್ಯಮಿ ಅಲ್ಲ. ಡಾ.ರಾಮೇಶ್ವರ್‌ ರಾವ್‌ ಧರ್ಮಪಾಲನೆ ಮಾಡುವ ಸದ್ಗುಣಿ. ಈ ಕಾರ್ಯಕ್ರಮದ ಮೂಲ ಶಕ್ತಿ ಡಾ. ರಾಮೇಶ್ವರ್‌ ರಾವ್. ಧರ್ಮಪಾಲನೆ ಜತೆ ವೈದಿಕ ಪ್ರೇಮಿಯಾಗಿರುವ ಡಾ.ರಾವ್ ಸತ್ಯ ಮಾರ್ಗ ಸ್ವೀಕರಿಸುವವರು ಎಂದು ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಚಿನ್ನಜೀಯರ್ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮೈ ಹೋಮ್ ಗ್ರೂಪ್ ಚೇರ್ಮನ್‌ ಡಾ. ರಾಮೇಶ್ವರ್ ರಾವ್ ಬಗ್ಗೆ ಚಿನ್ನಜೀಯರ್ ಶ್ರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಮೇಶ್ವರ್ ರಾವ್ ಸೇವೆಯನ್ನು ಚಿನ್ನಜೀಯರ್ ಶ್ರೀ ಕೊಂಡಾಡಿದ್ದಾರೆ.

  • 05 Feb 2022 07:51 PM (IST)

    ಪ್ರತಿಮೆ ನಿರ್ಮಾಣಕ್ಕೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ: ಡಾ.ರಾಮೇಶ್ವರ್ ರಾವ್

    ಶ್ರೀ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ. ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ. ರಾಜ್ಯ, ಕೇಂದ್ರ ಸರ್ಕಾರ ಸೇರಿದಂತೆ ಎಲ್ಲರಿಗೂ ಧನ್ಯವಾದ ಎಂದು ಕಾರ್ಯಕ್ರಮದಲ್ಲಿ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ರಾಮೇಶ್ವರ್ ರಾವ್ ಮಾತನಾಡಿದ್ದಾರೆ.

  • 05 Feb 2022 07:34 PM (IST)

    ರಾಮಾನುಜಚಾರ್ಯರ ಪ್ರತಿಮೆ ಅನಾವರಣವನ್ನು ದೊಡ್ಡ ಪರದೆಯಲ್ಲಿ ನೋಡಿದ ಮೈಸೂರು ಮಂದಿ

    ಮೈಸೂರು: ರಾಮಾನುಜಚಾರ್ಯರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ದೊಡ್ಡ ಪರದೆಯಲ್ಲಿ ಮೈಸೂರಿನ ಜನರು ವೀಕ್ಷಣೆ ಮಾಡಿದ್ದಾರೆ. ಇಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಬ್ರಾಹ್ಮಣ ಸಂಘದಿಂದ ವ್ಯವಸ್ಥೆ ಮಾಡಲಾಗಿತ್ತು. ಸರಸ್ವತಿಪುರಂನ ಶ್ರೀ ವೈಷ್ಣವ ಭವನದಲ್ಲಿ ವ್ಯವಸ್ಥೆ ಮಾಡಿದ್ದು ಟಿವಿ9 ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. ಪ್ರತಿಮೆ ಉದ್ಘಾಟನೆ, ಮೋದಿ ಭಾಷಣ ಸೇರಿ ಎಲ್ಲವನ್ನೂ ಟಿವಿ9 ಮೂಲಕ ವೀಕ್ಷಣೆ ಮಾಡಲಾಗಿದೆ.

  • 05 Feb 2022 07:32 PM (IST)

    ಹೈದಾರಾಬಾದ್​​ನ್ನು ಭಾಗ್ಯನಗರ ಎಂದು ಕರೆದ ನರೇಂದ್ರ ಮೋದಿ

    ಹೈದಾರಾಬಾದ್ ಅನ್ನು ಭಾಗ್ಯನಗರ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ. ಇಲ್ಲಿ ತೆಲುಗು ಸಂಸ್ಕೃತಿಯನ್ನು ಸಮೃದ್ಧಿಗೊಳಿಸಲಾಗಿದೆ. ರಾಮಾನುಜಾಚಾರ್ಯರ ಬೋಧನೆಗಳು ಸಮಾಜಕ್ಕೆ ದಾರಿದೀಪ ಎಂದು ಹೇಳಿದ್ದಾರೆ. ಈ ವೇಳೆ, ತೆಲುಗು ಚಿತ್ರರಂಗ ಇಡೀ ವಿಶ್ವಕ್ಕೇ ವ್ಯಾಪಿಸಿದೆ ಎಂದೂ ಹೇಳಿಕೆ ನೀಡಿದ್ದಾರೆ.

    ರಾಮಾನುಜರ ಚಿನ್ನದ ಪ್ರತಿಮೆಗೆ ಆರತಿ ಬೆಳಗಿದ ಮೋದಿ:

  • 05 Feb 2022 07:30 PM (IST)

    ಡಾ.ಬಿ.ಆರ್. ಅಂಬೇಡ್ಕರ್ ಕೂಡ ರಾಮಾನುಜರನ್ನು ಪ್ರಶಂಸಿಸುತ್ತಿದ್ದರು: ಮೋದಿ

    ಡಾ.ಬಿ.ಆರ್.ಅಂಬೇಡ್ಕರ್ ಕೂಡ ರಾಮಾನುಜರನ್ನು ಪ್ರಶಂಸಿಸುತ್ತಿದ್ದರು. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದ್ದರು. ಕನಕದಾಸರು ಕನ್ನಡದಲ್ಲಿ ರಾಮಾನುಜರನ್ನು ಪ್ರಶಂಸಿಸಿದ್ದಾರೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟ ಅಧಿಕಾರಕ್ಕಾಗಿ ನಡೆದದ್ದಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾನವತೆ, ಆಧ್ಯಾತ್ಮಿಕತೆ ಇತ್ತು ಎಂದು ಮೋದಿ ಸ್ಮರಿಸಿಕೊಂಡಿದ್ದಾರೆ.

  • 05 Feb 2022 07:28 PM (IST)

    ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತರು ರಾಮಾನುಜಾಚಾರ್ಯ: ನರೇಂದ್ರ ಮೋದಿ

    ವಿಶೇಷ ಯಾಗದ ಪೂರ್ಣಾಹುತಿ ಕಾರ್ಯದಲ್ಲಿರುವುದೇ ಪುಣ್ಯ. 130 ಕೋಟಿ ಜನತೆ ಕನಸು ನನಸಾಗಿಸಲು ಈ ಪುಣ್ಯ ಅರ್ಪಣೆ ಮಾಡುತ್ತೇನೆ. ಈ ಸದವಕಾಶ ಕಲ್ಪಿಸಿದ ಚಿನ್ನ ಜೀಯರ್ ಸ್ವಾಮೀಜಿಗೆ ಆಭಾರಿ ಎಂದು ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಮೋದಿ ಹೇಳಿಕೆ ನೀಡಿದ್ದಾರೆ. ರಾಮಾನುಜಾಚಾರ್ಯರ ಭಕ್ತಿ ಮಾರ್ಗ ಸ್ಮರಿಸಿ ಮೋದಿ ಭಾಷಣ ಮಾಡಿದ್ದಾರೆ.

    ರಾಮಾನುಜಾಚಾರ್ಯರು ಸಂಸ್ಕೃತ ಗ್ರಂಥ ರಚನೆಯ ಜತೆಯಲ್ಲಿ ತಮಿಳು ಭಾಷೆಗೆ ಮಹತ್ವ ನೀಡಿದ್ದರು. ಸಾಮಾಜ ಸುಧಾರಣಾಕಾರರ ಬಗ್ಗೆ ಸಮಾಜದಲ್ಲಿ ಚರ್ಚೆ ಆಗುತ್ತೆ. ಪ್ರಾಚೀನತೆ, ಪ್ರಗತಿಶೀಲರು ಯಾರೆಂದು ಸಂತರಲ್ಲಿ ಗೊತ್ತಾಗುತ್ತೆ. ಪ್ರಗತಿಶೀಲತೆಯಿಂದ ಹೆಸರಾದವರೇ ಶ್ರೀರಾಮಾನುಜಾಚಾರ್ಯ. ಸಮಾಜದ ಸುಧಾರಣೆಗೆ ಶ್ರಮಿಸಿದವರು ರಾಮಾನುಜಾಚಾರ್ಯ. ದಲಿತರ ಉದ್ಧಾರಕ್ಕಾಗಿ ರಾಮಾನುಜಾಚಾರ್ಯರ ಪರಿಶ್ರಮ ಇದೆ. ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತರು ರಾಮಾನುಜಾಚಾರ್ಯ ಎಂದು ಮೋದಿ ಮಾತನಾಡಿದ್ದಾರೆ.

  • 05 Feb 2022 07:13 PM (IST)

    ಜಾತಿಯಿಂದ ಅಲ್ಲ, ಗುಣದಿಂದ ಕಲ್ಯಾಣವಾಗುತ್ತೆ: ಮೋದಿ ಹೇಳಿಕೆ

    ರಾಮಾನುಜಾಚಾರ್ಯರು ತಮ್ಮ ಇಡೀ ಜೀವನವನ್ನು ಕರ್ಮಕ್ಕಾಗಿ ಸಮರ್ಪಿಸಿದರು. ರಾಮಾನುಜರ ಮಂದಿರಗಳಲ್ಲಿ ತಿರುಪ್ಪಾವೈ ಇಲ್ಲದೆ ಏನೂ ನಡೆಯಲ್ಲ. ಪ್ರಗತಿಶೀಲತೆ, ಪ್ರಾಚೀನತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ರಾಮಾನುಜರು ದಲಿತರು, ಹಿಂದುಳಿದವರನ್ನು ಆಲಿಂಗನ ಮಾಡಿದರು. ಜಾತಿಯಿಂದಲ್ಲ ಗುಣದಿಂದ ಕಲ್ಯಾಣವಾಗುತ್ತೆ. ರಾಮ ತನ್ನ ಕೈಯಿಂದ ಜಟಾಯು ಅಂತ್ಯಸಂಸ್ಕಾರ ಮಾಡಿದ. ಹೀಗಾಗಿ ಭೇದಭಾವ ಏಕೆ ಎಂದು ಹೇಳಿದರು. ಸಮಾಜದ ಅನಿಷ್ಟಗಳ ವಿರುದ್ಧ ತಮ್ಮ ಪೂರ್ತಿ ಶಕ್ತಿ ವಿನಿಯೋಗಿಸಿ ಹೋರಾಟ ಮಾಡಿದರು ಎಂದು ರಾಮಾನುಜಾಚಾರ್ಯರ ಬಗ್ಗೆ ಮಾತನಾಡಿದ್ದಾರೆ.

  • 05 Feb 2022 07:10 PM (IST)

    ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ: ಮೋದಿ ಮಾತು

    ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ. ಯುಗಯುಗಗಳವರೆಗೆ ನಾವು ಮಾನವತ್ವಕ್ಕೆ ದಿಕ್ಕನ್ನು ತೋರಿಸಿದ್ದೇವೆ. ಮಾನವೀಯತೆ ಶಕ್ತಿಗೆ ಮೂರ್ತ ರೂಪ ನೀಡಲಾಗಿದೆ. ಪ್ರತಿಮೆ ಮುಂದಿನ ಪೀಳಿಗೆಗೆ ಮಾತ್ರ ಪ್ರೇರಣೆ ನೀಡಲ್ಲ. ಭಾರತದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ರಾಮಾನುಜಾಚಾರ್ಯರ ಅನುಯಾಯಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿ 108 ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ. ಒಂದೇ ಸ್ಥಳದಲ್ಲಿ 108 ಮಂದಿರಗಳ ದರ್ಶನ ಸಿಗುತ್ತಿದೆ. ಚಿನ್ನಜೀಯರ್ ಶ್ರೀಗಳ ಸ್ನೇಹದಿಂದ ಪೂರ್ಣಾಹುತಿಯಲ್ಲಿ ಭಾಗಿ ಆಗಿದ್ದೇನೆ. ಇದನ್ನು ದೇಶದ ಜನರ ಕನಸು ನನಸಾಗಿಸಲು ಸಮರ್ಪಿಸುವೆ. ಭಾರತದಲ್ಲಿ ಜ್ಞಾನವನ್ನು ಖಂಡನೆ, ಮಂಡನೆ, ಸ್ವೀಕೃತಿ ಮಾಡಲಾಗುತ್ತೆ. ನಮ್ಮಲ್ಲಿ ದ್ವೈತ, ಅದ್ವೈತ ಎರಡೂ ಇವೆ. ರಾಮಾನುಜರ ವಿಶಿಷ್ಟ ಅದ್ವೈತ ಸಿದ್ಧಾಂತ ನಮಗೆ ಪ್ರೇರಣೆ. ರಾಮಾನುಜರ ಭಾಷ್ಯಗಳಲ್ಲಿ ಜ್ಞಾನದ ಪರಾಕಾಷ್ಠೆ ಇದೆ ಎಂದು ಮೋದಿ ಹೇಳಿದ್ದಾರೆ.

  • 05 Feb 2022 07:08 PM (IST)

    ಭವ್ಯವಾದ ವಿಶಾಲ ಮೂರ್ತಿಯು ಮಾನವ ಸಂಕುಲಕ್ಕೇ ಪ್ರೇರಣೆ

    ವಸಂತಪಂಚಮಿ ದಿನ ಪ್ರತಿಮೆ ಅನಾವರಣಗೊಳಿಸಿದ್ದಕ್ಕೆ ಸಂತೋಷವಾಗಿದೆ. ಶಾರದಾ ಮಾತೆ ಕೃಪೆಯಲ್ಲಿ ರಾಮಾನುಜರ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಜಗದ್ಗುರು ಶ್ರೀ ರಾಮಾನುಜಾಚಾರ್ಯರು ವಿಶ್ವಕ್ಕೇ ಜ್ಞಾನ ಪಥ. ಗುರು ಮಾಧ್ಯಮ ಮೂಲಕವೇ ನಮಗೆಲ್ಲಾ ಜ್ಞಾನ ಪ್ರಸರಣ ಆಗುತ್ತದೆ. ಭವ್ಯವಾದ ವಿಶಾಲ ಮೂರ್ತಿಯು ಮಾನವ ಸಂಕುಲಕ್ಕೇ ಪ್ರೇರಣೆ ಎಂದು ಪ್ರತಿಮೆ ಲೋಕಾರ್ಪಣೆಗೊಳಿಸಿದ ಬಳಿಕ ಪ್ರಧಾನಿ ಮೋದಿ ತಿಳಿಸಿದ್ದಾರೆ.

  • 05 Feb 2022 06:52 PM (IST)

    ರಾಮಾನುಜರು ಮಾನವ ಸೇವೆ ಮಾಧವ ಸೇವೆ ಎಂದಿದ್ದರು: ಕಿಶನ್ ರೆಡ್ಡಿ

    ‘ಸಬ್​ ಕಾ ಸಾಥ್ ಸಬ್​ ಕಾ ವಿಕಾಸ್’ ಎಂದು ಪ್ರಧಾನಿ ಮೋದಿ ದೇಶ ಮುನ್ನಡೆಸುತ್ತಿದ್ದಾರೆ. ಇಡೀ ದೇಶವೇ ಒಂದು ಕುಟುಂಬ ಎಂದು ಭಾವಿಸಿದ್ದಾರೆ. ಭಾರತ ಮಾತೆಯನ್ನು ವಿಶ್ವದಲ್ಲಿ ತಾಯಿಯಂತೆ ನೋಡಲು ಶ್ರಮ ವಹಿಸಿದ್ದಾರೆ. ಪ್ರತಿಮೆ ಅನಾವರಣ ಮಾಡಿದ್ದಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಚಿನ್ನ ಜೀಯರ್ ಸ್ವಾಮೀಜಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಮಾನವ ಸೇವೆ ಮಾಧವ ಸೇವೆ ಎಂದು ಶ್ರೀ ರಾಮಾನುಜರು ತಿಳಿಸಿದ್ದರು ಎಂದು ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಕೇಂದ್ರ ಸಚಿವ ಕಿಷನ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

  • 05 Feb 2022 06:44 PM (IST)

    ಸ್ವಾಗತ ಭಾಷಣ ಮಾಡಿದ ತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿ

    ಶ್ರೀ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಲೋಕಾರ್ಪಣೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮೋದಿ ಭಾಗಿ ಆಗಿದ್ದಾರೆ. ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ರಾಮೇಶ್ವರ್ ರಾವ್, ಕೇಂದ್ರ ಸಚಿವ ಕಿಷನ್​ ರೆಡ್ಡಿ, ತೆಲಂಗಾಣ ರಾಜ್ಯಪಾಲರು ಭಾಗಿ ಆಗಿದ್ದಾರೆ. ತ್ರಿದಂಡಿ ಶ್ರೀ ಚಿನ್ನಜೀಯರ್​ ಸ್ವಾಮೀಜಿಯಿಂದ ಸ್ವಾಗತ ಭಾಷಣ ಮಾಡಿದ್ದಾರೆ. ಪ್ರಧಾನಿ ಮೋದಿ ಅಮೆರಿಕಕ್ಕೆ ಹೋದಾಗ ಉಪವಾಸದಲ್ಲಿದ್ದರು. ನವರಾತ್ರಿ ಅಂಗವಾಗಿ ಉಪವಾಸ ವ್ರತಾಚರಣೆಯಲ್ಲಿದ್ದರು. ವೈದಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ಇದು ಪ್ರಧಾನಿ ಮೋದಿಯವರ ವ್ರತನಿಷ್ಠೆ ತೋರಿಸುತ್ತದೆ ಎಂದು ಚಿನ್ನ ಜೀಯರ್ ಸ್ವಾಮಿ ಹೇಳಿದ್ದಾರೆ.

  • 05 Feb 2022 06:42 PM (IST)

    ಸಮಾನತೆಯ ಪ್ರತಿಮೆ ಲೋಕಾರ್ಪಣೆಗೊಂಡ ಬಳಿಕ ಕಂಗೊಳಿಸಿದ್ದು ಹೀಗೆ

  • 05 Feb 2022 06:40 PM (IST)

    ಶ್ರೀ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆ ಲೋಕಾರ್ಪಣೆ

    ಶ್ರೀ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ, ಪದ್ಮಾಸನದ ಭಂಗಿಯಲ್ಲಿನ 216 ಅಡಿ ಪ್ರತಿಮೆ ಅನಾವರಣಗೊಂಡಿದೆ. ಸಾಮಾಜಿಕ ಸಂತ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ ‘ದಿವ್ಯ ಸಾಕೇತಂ’ ಆಶ್ರಮದಲ್ಲಿ ತಲೆ ಎತ್ತಿದೆ. ಪ್ರತಿಮೆ ಲೋಕಾರ್ಪಣೆ ಬಳಿಕ ಇದೀಗ ಪ್ರಧಾನಿ ಮೋದಿ ಸಭಾಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

  • 05 Feb 2022 06:35 PM (IST)

    ರಾಮಾನುಜಾಚಾರ್ಯರ ಚಿನ್ನದ ಪ್ರತಿಮೆಗೆ ಪೂಜೆ ಸಲ್ಲಿಸಿದ ಮೋದಿ

    ಶ್ರೀರಾಮಾನುಜಾಚಾರ್ಯರ ಚಿನ್ನದ ಪ್ರತಿಮೆಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಶ್ರೀರಾಮಾನುಜಾಚಾರ್ಯ ಪ್ರತಿಮೆ ಅನಾವರಣಗೊಳಿಸಲಾಗಿದೆ. ಪದ್ಮಾಸನದ ಭಂಗಿಯಲ್ಲಿನ 216 ಅಡಿ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಮುಚ್ಚಿಂತಲ್‌ ಬಳಿ ಶ್ರೀರಾಮಾನುಜಾಚಾರ್ಯ ವಿಶೇಷ ಆಶ್ರಮದಲ್ಲಿ ಬರೋಬ್ಬರಿ 45 ಎಕರೆ ವಿಶಾಲ ಪ್ರದೇಶದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಹೈದರಾಬಾದ್‌ ಬಳಿ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಮುಚ್ಚಿಂತಲ್​ನಲ್ಲಿ ಪ್ರತಿಮೆ ಅನಾವರಣಗೊಂಡಿದೆ.

  • 05 Feb 2022 06:28 PM (IST)

    ಶ್ರೀರಾಮಾನುಜರ ಚಿನ್ನದ ಪ್ರತಿಮೆ ವೀಕ್ಷಣೆ ಮಾಡಿದ ಮೋದಿ

    ಹೈದರಾಬಾದ್‌ ಬಳಿ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಮುಚ್ಚಿಂತಲ್ ಬಳಿ ಶ್ರೀರಾಮಾನುಜಾಚಾರ್ಯ ವಿಶೇಷ ಆಶ್ರಮ ಇದೆ. 200 ಎಕರೆ ಆಶ್ರಮದ ಸ್ಥಳಕ್ಕೆ ಶ್ರೀರಾಮನಗರ ಎಂದು ಹೆಸರು ಇದೆ. ಇಲ್ಲಿ ರಾಮಾನುಜಾಚಾರ್ಯರ ಬೃಹತ್ ಸಮಾನತೆಯ ಪ್ರತಿಮೆ ಇಂದು ಲೋಕಾರ್ಪಣೆಗೊಳ್ಳಲಿದೆ. ಜೊತೆಗೆ, ಇಲ್ಲಿ 54 ಇಂಚು ಎತ್ತರದ, 120 ಕೆ.ಜಿ. ಚಿನ್ನದಿಂದ ತಯಾರಿಸಿರುವ ಮೂರ್ತಿ ನಿರ್ಮಾಣ ಮಾಡಲಾಗಿದೆ. ಚಿನ್ನದ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಣೆ ಮಾಡಿದ್ದಾರೆ. ಬಲಿಪೀಠದಲ್ಲಿ ಶ್ರೀರಾಮಾನುಜರ ಚಿನ್ನದ ಪ್ರತಿಮೆ ವೀಕ್ಷಿಸಿದ್ದಾರೆ.

  • 05 Feb 2022 06:16 PM (IST)

    ಶ್ರೀರಾಮಾನುಜಾಚಾರ್ಯರ ಪ್ರತಿಮೆ ಸುತ್ತವರಿದಿರುವ ದೇಗುಲಗಳು

    ಪ್ರಧಾನಿ ನರೇಂದ್ರ ಮೋದಿ 108 ದೇಗುಲಗಳ ವೀಕ್ಷಣೆ ಮಾಡುತ್ತಿದ್ದಾರೆ. ದಿವ್ಯ ದೇಶ 108 ದೇಗುಲಗಳ ವೀಕ್ಷಿಸುತ್ತಿದ್ದಾರೆ. ಶ್ರೀರಾಮಾನುಜಾಚಾರ್ಯರ ಪ್ರತಿಮೆ ಸುತ್ತವರಿದಿರುವ ದೇಗುಲಗಳು ಬದ್ರಿನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಮತ್ತು ಇತರ ದೇವಾಲಯ ಮಾದರಿಗಳು ಆಗಿವೆ. ಅಸ್ತಿತ್ವದಲ್ಲಿರುವ ದೇವಾಲಯಗಳ ದೇವತೆಗಳ ಮತ್ತು ರಚನೆಗಳ ವಿಗ್ರಹಗಳನ್ನು ಅದೇ ಆಕಾರದಲ್ಲಿ ಇಲ್ಲಿ ನಿರ್ಮಿಸಲಾಗಿದೆ.

  • 05 Feb 2022 06:10 PM (IST)

    ದಿವ್ಯ ದೇಶ 108 ದೇಗುಲಗಳಿಗೆ ಆಗಮಿಸಿದ ಪ್ರಧಾನಿ ಮೋದಿ

    ವಿಶ್ವಕ್ಸೇನ ಯಾಗದ ಪೂರ್ಣಾಹುತಿ ಬಳಿಕ ಪ್ರಧಾನಿ ನರೇಂದ್ರ ಮೋದಿ ದಿವ್ಯ ದೇಶ 108 ದೇಗುಲಗಳಿರುವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಆ ಬಳಿಕ, ರಾಮಾನುಜಾಚಾರ್ಯರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿ ಪ್ರಧಾನಿ ಮೋದಿಗೆ ಸಾಥ್ ನೀಡಿದ್ದಾರೆ.

    ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

  • 05 Feb 2022 05:53 PM (IST)

    ಯಾಗದ ಪೂರ್ಣಾಹುತಿಯಲ್ಲಿ ಪ್ರಧಾನಿ ಮೋದಿ ಭಾಗಿ

    ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ ಅನಾವರಣಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಸೇನ ಯಾಗದ ಪೂರ್ಣಾಹುತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಆ ಬಳಿಕ ರಾಮಾನುಜರ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದೆ.

  • 05 Feb 2022 05:48 PM (IST)

    ಹಳದಿ ಬಣ್ಣದ ಪಂಚೆ, ಶಲ್ಯ, ನಾಮ ಧರಿಸಿರುವ ಮೋದಿ

    ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಹಳದಿ ಬಣ್ಣದ ಪಂಚೆ, ಶಲ್ಯ ತೊಟ್ಟುಕೊಂಡಿದ್ದಾರೆ. ನಾಮ ಧಾರಣೆ ಮಾಡಿ ಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಹಾಗೂ ಮೈ ಹೋಮ್ ಗ್ರೂಪ್​ನ ರಾಮೇಶ್ವರ್ ರಾವ್ ಉಪಸ್ಥಿತರಿದ್ದಾರೆ.

  • 05 Feb 2022 05:46 PM (IST)

    ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಸಮಾರಂಭಕ್ಕೆ ಆಗಮನಿಸಿದ ಪ್ರಧಾನಿ ಮೋದಿ

    ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಚಿನ್ನಜೀಯರ್‌ ಸ್ವಾಮೀಜಿ, ಡಾ.ಜೆ.ರಾಮೇಶ್ವರ್ ರಾವ್ ಮೋದಿಗೆ ಸ್ವಾಗತ ಕೋರಿದ್ದಾರೆ. ಶ್ರೀರಾಮಾನುಜರ 216 ಅಡಿ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಮೋದಿ ಭಾಗವಹಿಸಿದ್ದಾರೆ. ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ.

  • 05 Feb 2022 05:20 PM (IST)

    ರಾಮಾನುಜಾಚಾರ್ಯರ ಪ್ರತಿಮೆಯ ವಿಶೇಷತೆಗಳೇನು?

    • ಪ್ರತಿಮೆಯ ಒಟ್ಟು ಎತ್ತರ 216 ಅಡಿ ಆಗಿದೆ
    • ರಾಮಾನುಜಾಚಾರ್ಯರ ಮೂರ್ತಿ 108 ಅಡಿ ಎತ್ತರವಾಗಿದೆ
    • ತ್ರಿದಂಡಮ್ 135 ಅಡಿ ಎತ್ತರವಾಗಿದೆ
    • ಪದ್ಮಪೀಠ 27 ಅಡಿ ಹಾಗೂ
    • ಭದ್ರಾ ವೇದಿಕೆ 54 ಅಡಿ ಎತ್ತರವಾಗಿದೆ
    • ಪ್ರತಿಮೆಯಲ್ಲಿ 18 ಶಂಖಗಳು ಮತ್ತು
    • 18 ಚಕ್ರಗಳು ಇವೆ
    • 54 ಕಮಲದ ದಳಗಳು ಹಾಗೂ
    • 34 ಆನೆಗಳು ಪ್ರತಿಮೆಯಲ್ಲಿ ಒಳಗೊಂಡಿದೆ
  • 05 Feb 2022 05:05 PM (IST)

    ಹೆಲಿಪ್ಯಾಡ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಸಮಾರಂಭದ ಪ್ರಯುಕ್ತ ನಡೆಯಲಿರುವ ಶ್ರೀರಾಮಾನುಜರ 216 ಅಡಿ ಪ್ರತಿಮೆ ಲೋಕಾರ್ಪಣೆಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಸಾಮಾಜಿಕ ಸಂತ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದೆ. ‘ದಿವ್ಯ ಸಾಕೇತಂ’ ಆಶ್ರಮದಲ್ಲಿ ಜಗತ್ತಿನ 2ನೇ ಅತಿ ಎತ್ತರದ ಪ್ರತಿಮೆ ಉದ್ಘಾಟನೆಗೊಳ್ಳಲಿದೆ.

  • 05 Feb 2022 04:45 PM (IST)

    ಮಹಾಯಾಗಕ್ಕೆ 1.5 ಲಕ್ಷ ಕಿಲೋ ಗ್ರಾಂನಷ್ಟು ದೇಸಿ ಹಸುವಿನ ತುಪ್ಪ ಬಳಕೆ

    ಶ್ರೀಲಕ್ಷ್ಮೀ ನಾರಾಯಣ ಮಹಾಯಾಗಕ್ಕೆ ಹೋಮಿಸಿದ ವಸ್ತುಗಳ ಪೈಕಿ 1.5 ಲಕ್ಷ ಕಿಲೋ ಗ್ರಾಂನಷ್ಟು ದೇಸಿ ಹಸುವಿನ ಶುದ್ಧ ತುಪ್ಪ, ಸಮಿತ್ತು, ಯಜ್ಞ ವೃಕ್ಷದ ಕಟ್ಟಿಗೆ, ಕೆಂಪು ಮಣ್ಣು, ಗೋಮಯ ಬಳಸಲಾಗಿದೆ. ಯಾಗಕ್ಕೆ ಹಸುವಿನ ತುಪ್ಪ ತಯಾರಿ ಕಾರ್ಯವನ್ನು ಚಿನ್ನ ಜೀಯರ್ ಸ್ವಾಮೀಜಿ 6 ತಿಂಗಳ ಹಿಂದೆ ಆರಂಭಿಸಲಾಗಿರುವುದು ವಿಶೇಷವಾಗಿದೆ.

  • 05 Feb 2022 04:44 PM (IST)

    ಸ್ಥಳದಲ್ಲಿ ನಡೆಯುತ್ತಿದೆ ಶ್ರೀಲಕ್ಷ್ಮೀ ನಾರಾಯಣ ಮಹಾಯಜ್ಞ

    ಶ್ರೀರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು/ ಸಹಸ್ರಾಬ್ಧಿ ಸಮಾರೋಹಮ್​ನ್ನು ಇಲ್ಲಿನ ಮುಂಚಿತಾಲ್ ಶಮ್ಶಾಬಾದ್​ನಲ್ಲಿ ಆಚರಿಸಲಾಗುತ್ತಿದೆ. ಈ ವೇಳೆ, ಸಮಾನತೆಯ ಮೂರ್ತಿ (Statue of Equality) ಇರುವ 45 ಎಕರೆ ಪ್ರದೇಶದಲ್ಲಿ ಶ್ರೀಲಕ್ಷ್ಮೀ ನಾರಾಯಣ ಮಹಾಯಜ್ಞವನ್ನೂ ನಡೆಸಲಾಗುತ್ತಿದೆ. ಸುಮಾರು 5,000 ವೇದ ಪಂಡಿತರು, 1,035 ಯಾಗ ಕುಂಡದಲ್ಲಿ, 144 ಯಾಗಶಾಲೆಯಲ್ಲಿ ಈ ಮಹಾಯಾಗವನ್ನು ನಡೆಸಿಕೊಟ್ಟಿದ್ದಾರೆ. ಆಧುನಿಕ ಇತಿಹಾಸದಲ್ಲಿ ಇದು ಜಗತ್ತಿನ ಬೃಹತ್ ಯಾಗ ಎಂದು ಪರಿಗಣಿಸಬಹುದಾಗಿದೆ. ಈ ಮಹಾಯಜ್ಞವು ಮುಂದಿನ 14 ದಿನಗಳವರೆಗೆ ನಡೆಯಲಿದೆ.

  • 05 Feb 2022 04:19 PM (IST)

    ಕಾರ್ಯಕ್ರಮದ ನೇರಪ್ರಸಾರ ಇಲ್ಲಿ ವೀಕ್ಷಿಸಿ

    ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ (Ramanujacharya Sahasrabdi) ಕಾರ್ಯಕ್ರಮವು ಹೈದರಾಬಾದ್​ನ ಹೊರವಲಯದಲ್ಲಿ ಇರುವ ಮುಂಚಿತ್ತಾಲ್ ಎಂಬಲ್ಲಿ ನಡೆಯುತ್ತಿದೆ. 11ನೇ ಶತಮಾನದ ಸಂತ ಶ್ರೀರಾಮಾನುಜರ 1,000ನೇ ಜನ್ಮೋತ್ಸವ ಸಂಭ್ರಮದ ಈ ಸಂದರ್ಭದಲ್ಲಿ ರಾಮಾನುಜಾಚಾರ್ಯರ ಪಂಚಲೋಹದ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದೆ.

  • 05 Feb 2022 03:40 PM (IST)

    ಕರುಣೆ, ಆನಂದ ಮತ್ತು ಸಮಾನತೆಯ ಪ್ರತೀಕ ಈ ಪ್ರತಿಮೆ

    11ನೇ ಶತಮಾನದ ಭಕ್ತಿ ವೈಷ್ಣವ ಮತ್ತು ಕ್ರಾಂತಿಕಾರಿ ಸಮಾಜ ಸುಧಾರಕ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯು ಜಗತ್ತಿನಲ್ಲಿ ಕರುಣೆ, ಆನಂದ ಮತ್ತು ಸಮಾನತೆಯನ್ನು ಪ್ರತಿನಿಧಿಸುತ್ತದೆ. 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5ರಂದು ಅನಾವರಣಗೊಳಿಸಲಿದ್ದಾರೆ. ಫೆಬ್ರವರಿ 13ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಮಾನುಜಾಚಾರ್ಯರ 120 ಕೆಜಿ ಚಿನ್ನದ ದೇವರನ್ನು ಅನಾವರಣಗೊಳಿಸಲಿದ್ದಾರೆ. ಕೆ ಚಂದ್ರಶೇಖರ್ ರಾವ್ ಡೈನಾಮಿಕ್ ಫೌಂಟೇನ್ ಉದ್ಘಾಟಿಸಲಿದ್ದಾರೆ. ಅನೇಕ ರಾಜಕೀಯ ನಾಯಕರು, ಪ್ರಸಿದ್ಧ ವ್ಯಕ್ತಿಗಳು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ.

  • 05 Feb 2022 03:30 PM (IST)

    ಪ್ರಧಾನಿ ಮೋದಿ ಸ್ವಾಗತಿಸಿದ ರಾಜ್ಯಪಾಲೆ ತಮಿಳುಸಾಯಿ ಸೌಂದರ್ ರಾಜನ್

    ಹೈದರಾಬಾದ್​ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ನಗರದ ಪಟಂಚೇರುವ ICRISATಗೆ ಆಗಮಿಸಿದ್ದಾರೆ. ರಾಜ್ಯಪಾಲೆ ತಮಿಳುಸಾಯಿ ಸೌಂದರ್ ರಾಜನ್ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ್ದಾರೆ. ಸಚಿವ ತಲಸಾನಿಯಿಂದ ಪ್ರಧಾನಿ ಮೋದಿಗೆ ಸ್ವಾಗತ ಕೋರಲಾಗಿದೆ. ಪ್ರಧಾನಿ ಸ್ವಾಗತಕ್ಕೆ ಮುಖ್ಯಮಂತ್ರಿ ಕೆಸಿಆರ್ ತೆರಳುತ್ತಾರೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿತ್ತು. ಆದರೆ, ಇದೀಗ ಸಿಎಂ ಕೆಸಿಆರ್ ಪ್ರಧಾನಿ ಮೋದಿ ಸ್ವಾಗತಿಸಲು ಬಂದಿಲ್ಲ.

  • 05 Feb 2022 03:20 PM (IST)

    ‘ಮೈ ಹೋಮ್ ಗ್ರೂಪ್’ ಚೇರ್ಮನ್ ಜೆ. ರಾಮೇಶ್ವರ್ ರಾವ್ ಕಾರ್ಯಕ್ರಮದಲ್ಲಿ ಭಾಗಿ

    ಶ್ರೀ ಚಿನ್ನಜೀಯರ್ ಶ್ರೀಗಳ ಮಹತ್ವಾಕಾಂಕ್ಷೆಯ ಮಹೋತ್ಸವ, ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಫೆಬ್ರವರಿ 2 ರಿಂದ 14ರ ವರೆಗೆ ನಡೆಯಲಿದೆ. ದಿವ್ಯ ಸಾಕೇತಂ ಆಶ್ರಮದಲ್ಲಿ 108 ದೇವಾಲಯಗಳೂ ನಿರ್ಮಾಣವಾಗಿದೆ. ಇಂದು ಆಚಾರ್ಯರ 216 ಅಡಿ ಪ್ರತಿಮೆ ಮೋದಿಯಿಂದ ಲೋಕಾರ್ಪಣೆಗೊಳ್ಳಲಿದೆ. ಚಿನ್ನಜೀಯರ್‌ ಸ್ವಾಮೀಜಿ ಜತೆಗೆ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಜೆ.ರಾಮೇಶ್ವರ್ ರಾವ್, ದೇಶದ ಅತಿರಥ ಮಹಾರಥ ಗಣ್ಯರು ಸಹಸ್ರಮಾನೋತ್ಸವಕ್ಕೆ ಸಾಕ್ಷಿ ಆಗಲಿದ್ದಾರೆ.

  • 05 Feb 2022 03:18 PM (IST)

    ಕುಳಿತ ಭಂಗಿಯಲ್ಲಿ ಇರುವ ಜಗತ್ತಿನ 2ನೇ ಅತಿ ಎತ್ತರದ ಪ್ರತಿಮೆ

    ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಸಮಾರಂಭದ ಪ್ರಯುಕ್ತ ಇಂದು (ಫೆ.5) ಸಂಜೆ ಶ್ರೀರಾಮಾನುಜರ 216 ಅಡಿ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಸಾಮಾಜಿಕ ಸಂತ ರಾಮಾನುಜಾಚಾರ್ಯರ ‘ಸಮಾನತೆ ಪ್ರತಿಮೆ’ ಅನಾವರಣಗೊಳ್ಳಲಿದೆ. ತ್ರಿದಂಡಿ ಶ್ರೀ ಚಿನ್ನಜೀಯರ್ ಅವರ ಮಹಾಸಂಕಲ್ಪ ಸಾಕಾರ ಮಹೋತ್ಸವ ನೆರವೇರಲಿದೆ. ‘ದಿವ್ಯ ಸಾಕೇತಂ’ ಆಶ್ರಮದಲ್ಲಿ ಜಗತ್ತಿನ 2ನೇ ಅತಿ ಎತ್ತರದ ಪ್ರತಿಮೆ ಅನಾವರಣಗೊಳ್ಳಲಿದೆ. ಹೈದರಾಬಾದ್‌ ಬಳಿ ಮುಚ್ಚಿಂತಲ್ ಸಮೀಪ ‘ದಿವ್ಯ ಸಾಕೇತಂ’ 200 ಎಕರೆ ಪ್ರದೇಶದಲ್ಲಿರುವ ಆಶ್ರಮದಲ್ಲಿ ಪ್ರತಿಮೆ ಉದ್ಘಾಟನೆಗೊಳ್ಳಲಿದೆ.

Published On - 3:13 pm, Sat, 5 February 22

Follow us on