
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪಿಎಂ-ಸ್ವನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಫಲಾನುಭವಿಗಳೊಂದಿಗೆ ಸಂವಾದದಲ್ಲಿ ಪ್ರಧಾನ ಮಂತ್ರಿ ಅವರು, ಡಿಜಿಟಲ್ ಪಾವತಿ ಪ್ರಯೋಜನಗಳು ಮತ್ತು ಹೇಗೆ ಕ್ಯಾಶ್ ಬ್ಯಾಕ್ ಲಾಭ ಪಡೆಯಬಹುದು ಎಂಬ ಸಲಹೆಗಳನ್ನು ನೀಡಿದರು. ಹಣವನ್ನು ಹೇಗೆ ಸೂಕ್ತ ಶಿಕ್ಷಣ ಮತ್ತು ವೃತ್ತಿಯನ್ನು ಉತ್ತಮಗೊಳಿಸಿಕೊಳ್ಳಲು ಬಳಕೆ ಮಾಡಿಕೊಳ್ಳಬಹುದು ಎಂದು ಪ್ರಧಾನಿ ಹೇಳಿದರು.
ಈ ಮೊದಲು ವೇತನ ಪಡೆಯುವವರು ಸಹ ಬ್ಯಾಂಕ್ ಗಳಿಗೆ ಹೋಗಿ ಸಾಲ ಪಡೆಯುವುದು ಕಷ್ಟಕರವಾಗಿತ್ತು ಮತ್ತು ಬಡವರು ಹಾಗೂ ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳಿಗೆ ಸಾಲಕ್ಕಾಗಿ ಎಡತಾಕುವಂತಹ ಚಿಂತನೆಯನ್ನೂ ಸಹ ಮಾಡುವಂತಿರಲಿಲ್ಲ. ಆದರೆ ಈಗ ಬ್ಯಾಂಕುಗಳೇ ಜನರ ಮನೆ ಬಾಗಿಲಿಗೆ ಬರುತ್ತಿವೆ ಮತ್ತು ತಮ್ಮ ಉದ್ಯೋಗಗಳನ್ನು ಆರಂಭಿಸಲು ಸಾಲದ ಸಹಾಯ ನೀಡುತ್ತಿವೆ ಎಂದು ಪ್ರಧಾನ ಮಂತ್ರಿ ಹೇಳಿದರು.
ಸಾಂಕ್ರಾಮಿಕದ ಸಮಯದಲ್ಲಿ ಬಡವರ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಒಂದು ಲಕ್ಷದ 70 ಸಾವಿರ ಕೋಟಿ ರೂ.ಗಳ ಗರೀಬ್ ಕಲ್ಯಾಣ ಯೋಜನೆ ಪ್ಯಾಕೇಜ್ ಜಾರಿಗೊಳಿಸಿ, ಬಡವರಿಗೆ ಸುಮಾರು 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಸಂಕಷ್ಟ ಪರಿಹಾರವನ್ನು ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸುತ್ತಿರುವುದು, ಮತ್ತೆ ಅವರು ಸ್ವಾವಲಂಬಿಗಳಾಗುತ್ತಿರುವುದಕ್ಕೆ ಪ್ರಧಾನ ಮಂತ್ರಿ ಸಂತಸ ವ್ಯಕ್ತಪಡಿಸಿದರು.
ದೇಶಾದ್ಯಂತ ಈ ಯೋಜನೆ ಅತ್ಯಂತ ಕ್ಷಿಪ್ರಗತಿಯಲ್ಲಿ ಅನುಷ್ಠಾನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ. ಸ್ವನಿಧಿ ಯೋಜನೆ ಅಡಿ ಸಾಲ ಪಡೆಯಲು ಯಾವುದೇ ಖಾತ್ರಿದಾರರ ಅಗತ್ಯವಿಲ್ಲ, ಸಾಲ ಪಡೆಯುವುದು ಕೂಡ ಅತ್ಯಂತ ಸುಲಭವಾಗಿದ್ದು, ಯಾವುದೇ ಅಡೆತಡೆಗಳಿಲ್ಲ ಎಂದು ಹೇಳಿದರು. ಬೀದಿ ಬದಿ ವ್ಯಾಪಾರಿ ಯಾವುದೇ ಸಾಮಾನ್ಯ ಸೇವಾ ಕೇಂದ್ರ ಅಥವಾ ಮುನ್ಸಿಪಲ್ ಕಚೇರಿ ಅಥವಾ ಬ್ಯಾಂಕುಗಳಿಗೆ ಹೋಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಅಪ್ ಲೋಡ್ ಮಾಡಬಹುದು ಎಂದರು.
ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಖಾತ್ರಿ ಇಲ್ಲದೆ ಕೈಗೆಟಕುವಂತೆ ಸಾಲವನ್ನು ವಿತರಿಸಲಾಗುತ್ತಿದೆ, ಗರಿಷ್ಠ ಸಂಖ್ಯೆಯ ಬೀದಿ ಬದಿ ವ್ಯಾಪಾರಿಗಳು ಉತ್ತರ ಪ್ರದೇಶದಿಂದ ಸಾಲಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸ್ವನಿಧಿ ಯೋಜನೆ ಅಡಿ ದೇಶಾದ್ಯಂತ 25 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ ಉತ್ತರ ಪ್ರದೇಶ ರಾಜ್ಯ ಒಂದರಿಂದಲೇ 6.5 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಉತ್ತರ ಪ್ರದೇಶದಿಂದ ಸ್ವೀಕರಿಸಿರುವ 6.5 ಲಕ್ಷ ಅರ್ಜಿಗಳ ಪೈಕಿ 4.25 ಲಕ್ಷ ಅರ್ಜಿಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಸ್ವನಿಧಿ ಯೋಜನೆಯ ಸಾಲ ಒಪ್ಪಂದಕ್ಕೆ ಮುದ್ರಾಂಕ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು.
ಸಾಂಕ್ರಾಮಿಕದ ಸಮಯದಲ್ಲಿ ಸುಮಾರು 6 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 1000 ರೂ. ಆರ್ಥಿಕ ಸಹಾಯ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸ್ವನಿಧಿ ಯೋಜನೆ ಅಡಿ ಈವರೆಗೆ ಸಾಲ ಪಡೆದಿರುವ ಬಹುತೇಕ ಬೀದಿ ಬದಿ ವ್ಯಾಪಾರಿಗಳು ಸಕಾಲದಲ್ಲಿ ತಮ್ಮ ಹಣವನ್ನು ಹಿಂತಿರುಗಿಸುತ್ತಿದ್ದಾರೆ. ಇದು ಸಣ್ಣ ಪ್ರಮಾಣದ ಸಾಲಗಾರರು ತಮ್ಮ ಪ್ರಾಮಾಣಿಕತೆ ಮತ್ತು ದಕ್ಷತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಈ ಯೋಜನೆಯ ಬಗ್ಗೆ ಸಾಧ್ಯವಾದಷ್ಟು ಇನ್ನು ಹೆಚ್ಚು ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಯೋಜನೆ ಅಡಿ ಸಾಲ ಪಡೆದವರಿಗೆ ಸಕಾಲದಲ್ಲಿ ಮರುಪಾವತಿ ಮಾಡಿದರೆ ಶೇ.7ರಷ್ಟು ಬಡ್ಡಿ ವಿನಾಯಿತಿ ದೊರಕಲಿದೆ ಮತ್ತು ಡಿಜಿಟಲ್ ಪಾವತಿಗಳನ್ನು ಮಾಡಿದರೆ ಪ್ರತಿ ತಿಂಗಳು 100 ರೂ. ಕ್ಯಾಶ್ ಬ್ಯಾಕ್ ಸಿಗುತ್ತದೆ ಎಂದರು.
ಜನ-ಧನ್ ಖಾತೆಗಳನ್ನು ಆರಂಭಿಸುವಾಗ ಕೆಲವು ವ್ಯಕ್ತಿಗಳು, ಅದರ ಉಪಯೋಗಗಳ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ್ದರು ಎಂದು ಪ್ರಧಾನಮಂತ್ರಿ ಟೀಕಿಸಿದರು. ಆದರೆ ಇಂದು ಸಂಕಷ್ಟದ ಸಮಯದಲ್ಲಿ ಅದೇ ಖಾತೆಗಳು ಬಡವರಿಗೆ ಸಹಕಾರಿಯಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಬಡವರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಕೈಗೊಂಡಿರುವ ಹಲವು ಯೋಜನೆಗಳನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು.
ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು, ರೈತರು ಜೀವನ ಸುಗಮಗೊಳಿಸಲು ಹಾಗೂ ಅವರು ವ್ಯಾಪಾರ, ವಹಿವಾಟು, ಚಟುವಟಿಕೆಗಳ ಉತ್ತೇಜನಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು, ಯಾವುದೇ ಕಾರಣಕ್ಕೂ ಅವರನ್ನು ಕೈಬಿಡುವುದಿಲ್ಲ ಎಂದು ಪ್ರಧಾನ ಮಂತ್ರಿ ಅವರು ಇದೇ ವೇಳೆ ಭರವಸೆ ನೀಡಿದರು.