ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಟಿವಿ9 ನೆಟ್ವರ್ಕ್ನ (TV9 Network) 6 ಭಾಷೆಗಳ ಸಂಪಾದಕರ ಜೊತೆ ದುಂಡುಮೇಜಿನ ಸಂದರ್ಶನ ನಡೆಸಿದ್ದಾರೆ. ಆ ಸಂದರ್ಶನದಲ್ಲಿ ಟಿವಿ9 ಕನ್ನಡದ (TV9 Kannada) ರಂಗನಾಥ್ ಭಾರದ್ವಾಜ್ ಕೂಡ ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳು ಮತ್ತು ನಿಲುವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. 25 ವರ್ಷಗಳ ಈ ರಾಜಕೀಯ ಜೀವನದಲ್ಲಿ ಸರ್ಕಾರದ ಮುಖ್ಯಸ್ಥನಾಗಿ ಎಲ್ಲರಿಗಿಂತ ಹೆಚ್ಚು ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ನನಗೆ ಕಪ್ಪು ಕಲೆ ಉಂಟುಮಾಡಲು ಅನೇಕರು ಪ್ರಯತ್ನಿಸಿದರು. ಆದರೆ, ಒಂದೂ ಕಪ್ಪು ಚುಕ್ಕಿ ನನಗೆ ಅಂಟಿಲ್ಲ. ಎಲ್ಲರಿಗಿಂತ ಹೆಚ್ಚು ಸಮಯದವರೆಗೂ ಜನರ ಸೇವೆ ಮಾಡಲು ಪುಣ್ಯ ನನಗೆ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ.
ಈ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ರಾಜಕೀಯದ ಬಗ್ಗೆಯೂ ಮಾತನಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಫಲಪ್ರದವಾಗುವುದಿಲ್ಲ. ದೇಶದ ಜನರು ತುಂಬಾ ತಿಳಿವಳಿಕೆ ಉಳ್ಳವರಾಗಿದ್ದಾರೆ. ಕಾಂಗ್ರೆಸ್ನವರ ಪ್ರತಿಯೊಂದು ಆಟವನ್ನೂ ಅವರು ಬಲ್ಲವರಾಗಿದ್ದಾರೆ. ಅವರು ಐದು ಗ್ಯಾರಂಟಿ ತರಲಿ, 25 ಗ್ಯಾರಂಟಿ ತರಲಿ, 75 ಗ್ಯಾರಂಟಿ ತರಲಿ ಜನರ ಮನಸಿನಲ್ಲಿ ಜಾಗ ಪಡೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆಯನ್ನು ನೋಡೋದಾದ್ರೆ ಪೂರ್ತಿ ದೇಶದಲ್ಲಿ ನೋಡ್ತಾ ಇದ್ದೀನಿ ನಾನು. ಲೋಕಸಭೆ ಚುನಾವಣೆ ರಾಜ್ಯಗಳ ರಾಜನೀತಿಗಿಂತ ಹೆಚ್ಚು ಮೇಲಸ್ತರಕ್ಕೆ ಹೋಗಿದೆ. ಇದು ಒಳ್ಳೆಯ ಲಕ್ಷಣ ಎಂದು ನಾನು ನಂಬುತ್ತೇನೆ. ಇದನ್ನ ನಾನು 2019ರಲ್ಲೂ ನೋಡಿದ್ದೇನೆ. 2014 ಮತ್ತು 2019ರ ಚುನಾವಣೆಯಲ್ಲಿ ಕೆಲ ರಾಜ್ಯಗಳಲ್ಲಿ ಸ್ಥಿತಿ ಕಡಿಮೆ ಇತ್ತು. 2024ರಲ್ಲಿ ದೇಶದ ಜನರ ಮನಸು ದೇಶಕ್ಕಾಗಿ ಚುನಾವಣೆ, ದೇಶದ ಭವಿಷ್ಯಕ್ಕಾಗಿ ಚುನಾವಣೆ, ಲೋಕಸಭೆಗಾಗಿ ಚುನಾವಣೆ, ಪ್ರಧಾನ ಮಂತ್ರಿ ಯಾರು ಆಗ್ತಾರೆ ಅದಕ್ಕಾಗಿ ಚುನಾವಣೆ ಎಂಬುದರ ಬಗ್ಗೆ ಕೇಂದ್ರಿಕೃತವಾಗಿದೆ. ಇದರಿಂದ ಕಾಂಗ್ರೆಸ್ ಮೈತ್ರಿಕೂಟಕ್ಕೆ ಸಮಸ್ಯೆ ಆಗಿದೆ. ಅವರಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯ ಹೆಸರನ್ನೇ ಹೇಳಲು ಆಗುತ್ತಿಲ್ಲ. ಇದರಿಂದ ಜನರು ಯಾರ ಮುಖ ನೋಡಿ ಮತ ಹಾಕುತ್ತಾರೆ? ಒಂದೊಂದು ವರ್ಷ ಒಬ್ಬೊಬ್ಬರು ಪ್ರಧಾನಿ ಆಗುತ್ತಾರೆ ಎಂದು ಹೊಸ ಆಟವಾಡುತ್ತಿದ್ದಾರೆ. ಇದರಿಂದ ದೇಶದ ಅಭಿವೃದ್ಧಿ ಹೇಗೆ ಆಗುತ್ತದೆ? ಇವರು ದೇಶದ ಇಷ್ಟೊಂದು ಮಹತ್ವಪೂರ್ಣ ಚುನಾವಣೆಯಲ್ಲಿ, ಇಷ್ಟೊಂದು ದೊಡ್ಡ ಚುನಾವಣೆಯಲ್ಲಿ ಭಾಷಣ ಮಾಡೋದಕ್ಕೆ, ಸುಳ್ಳು ಹೇಳೋ ಆಟ ಮಾಡಿಕೊಂಡಿದ್ದಾರೆ.
ಪಿಕ್ಚರ್ ಇನ್ನೂ ಬಾಕಿಯಿದೆ!:
ಈ 10 ವರ್ಷಗಳ ಕಾಲ ಮಾಡಿದ್ದು ಕೇವಲ ಟ್ರೇಲರ್, ಇನ್ನೂ ಪಿಕ್ಚರ್ ಬಾಕಿ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಬಗ್ಗೆ ಟಿವಿ9 ಕನ್ನಡದ ರಂಗನಾಥ್ ಭಾರಧ್ವಾಜ್ ಪ್ರಧಾನಿ ಮೋದಿಯವರನ್ನು ಪ್ರಶ್ನೆ ಮಾಡಿದ್ದು, ಆ ಪಿಕ್ಚರ್ನಲ್ಲಿ ಏನೇನಿದೆ? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಮೋದಿ, ನಾನು ನಿದ್ರೆಯನ್ನೂ ಬಿಟ್ಟು ಈ ದೇಶದ ಅಭಿವೃದ್ಧಿಗೆ ದುಡಿಯುತ್ತೇನೆ. ನಾನು ಇದಕ್ಕಿಂತ ಮೇಲೆ ಈ ದೇಶವನ್ನು ಕೊಂಡೊಯ್ಯುತ್ತೇನೆ. ಮತ್ತಷ್ಟು ಹೊಸ ಹೊಸ ಯೋಜನೆಗಳನ್ನು ಮಾಡುತ್ತೇನೆ. ನನಗೆ ಜಗತ್ತಿನಲ್ಲಿ ಹಿಂದೂಸ್ಥಾನದ ಪರ ಜೈಕಾರ ಹಾಕಬೇಕು ಎಂಬುದೊಂದೇ ಆಸೆಯಿದೆ ಎಂದಿದ್ದಾರೆ.
ಇದನ್ನೂ ಓದಿ: PM Modi Interview: ಪ್ರಧಾನಿ ಮತ್ತು 5 ಎಡಿಟರ್ಸ್, ಮೋದಿ ದುಂಡು ಮೇಜಿನ ಸಂದರ್ಶನದ ನೇರ ಪ್ರಸಾರ
ಒಂದು ವೇಳೆ ಬಿಜೆಪಿ ಈ ಚುನಾವಣೆಯಲ್ಲಿ 400 ಸೀಟು ಗೆದ್ದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ಇದಕ್ಕೇನಂತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಇಂದೂ ಸಹ ಎನ್ಡಿಎ ಬಳಿ ಹತ್ರ ಹತ್ರ 360 ಸೀಟು ಇವೆ. ಬಿಜೆಡಿ ರೀತಿ ಅದು ಎನ್ಡಿಎದಲ್ಲಿ ಇಲ್ಲ, ಅವರೆಲ್ಲರನ್ನು ಸೇರಿಸಿದರೆ ಸಂಸತ್ತಿನಲ್ಲಿ ನಾವು ಹತ್ರ ಹತ್ರ 400 ಸೀಟಗಳನ್ನೇ ಪಡೆದು ಕೂತಿದ್ದೇವೆ. ಒಂದು ವೇಳೆ ಯಾರಿಗಾದ್ರೂ ಸಂವಿಧಾನ ಬದಲಾವಣೆ ಮಾಡಬೇಕು ಅಂತಿದ್ರೆ ಈಗಾಗಲೇ ಮಾಡುತ್ತಿದ್ದೆವು. ಇದು ತರ್ಕಬದ್ಧವಾಗಿಯೂ ಇಲ್ಲ, ಸತ್ಯವೂ ಅಲ್ಲ. SC,ST,OBC ಅವರಿಗೆ ಸಂವಿಧಾನದ ಮೂಲಕ ಮೀಸಲಾತಿ ಸಿಕ್ಕಿದೆ. ಇದನ್ನ ಕಸಿದುಕೊಳ್ಳಲು ಮಾರ್ಗವನ್ನು ಹುಡುಕಲಾಗ್ತಿದೆ. ಕಾಂಗ್ರೆಸ್ನವರು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಮುಂದಾಗಿದ್ದಾರೆ. ಯಾವಾಗ ಸಂವಿಧಾನ ರಚನೆ ಆಯ್ತೋ, ತಿಂಗಳು ಗಟ್ಟಲೇ ಚರ್ಚೆ ನಡೀತು. ದೇಶದ ತಜ್ಞರು, ಪಂಡಿತರು ಚರ್ಚೆ ಮಾಡಿದ್ರು. ಏನಂದ್ರೆ, ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಬಹುದಾ ಎಂದು? ಎಲ್ಲರೂ ಸಹಮತದಿಂದ ಮಾಡಿದ್ರು. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಬಾರದೆಂದು ಹೇಳಿದರು. ಆದರೆ, ಇವರು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಯಾಕೆ ಓಡಾಡ್ತಿದ್ದಾರೆ ಅಂದ್ರೆ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ. ಕರ್ನಾಟಕದಲ್ಲಿ ಹೊಸ ಪ್ರಯೋಗ ಮಾಡಿದ್ರು. ಕರ್ನಾಟಕದಲ್ಲಿ ರಾತ್ರೋ ರಾತ್ರಿ ಎಲ್ಲ ಮುಸ್ಲಿಂ ಧರ್ಮದವರಿಗೆ ಪತ್ವಾ ಹೊರಡಿಸಿ OBC ಮಾಡಿದರು. ಕಾಂಗ್ರೆಸ್ನವರ ಅರ್ಥದಲ್ಲಿ ಸಂವಿಧಾನ ಒಂದು ಆಟವಾಗಿದೆ. ಈ ದೇಶದಲ್ಲಿ 75 ವರ್ಷದಿಂದ ಸಂವಿಧಾನ ಜಾರಿಯಾಗಿತ್ತಾ? 60 ವರ್ಷಗಳ ಕಾಲ ಕಾಂಗ್ರೆಸ್ನವರು ಅಧಿಕಾರ ನಡೆಸಿದರು. ಕಾಶ್ಮೀರದಲ್ಲಿ ಭಾರತದ ಸಂವಿಧಾನ ಜಾರಿ ಆಗಿರಲಿಲ್ಲ. ಅವರಿಗೆ ಸಂವಿಧಾನ ಇಷ್ಟೊಂದು ಪವಿತ್ರ ಅಂತ ಅನಿಸಿದರೆ ಕಾಶ್ಮೀರದಲ್ಲಿ ಸಂವಿಧಾನ ಏಕೆ ಜಾರಿ ಆಗಲಿಲ್ಲ? 370ರ ಗೋಡೆ ಮಾಡಿ ಇಷ್ಟೊಂದು ದಿನ ಸಂವಿಧಾನ ಜಾರಿ ಆಗಲು ಅಡ್ಡಿ ಮಾಡಿದ್ದು ಏಕೆ? ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತೆ ಅಲ್ಲವೇ? ಜಮ್ಮು ಕಾಶ್ಮೀರದಲ್ಲಿ ನನ್ನ ದಲಿತ ಸೋದರ ಸೋದರಿಯರು ಇದ್ದಾರೆ. ಅವರಿಗೆ 75 ವರ್ಷದಿಂದ ಮೀಸಲಾತಿ ಅಧಿಕಾರ ಸಿಕ್ಕಿರಲಿಲ್ಲ. ಯಾವ ಅಧಿಕಾರವೂ ಸಿಕ್ಕಿರಲಿಲ್ಲ. ಅಲ್ಲಿ ನಮ್ಮ ಆದಿವಾಸಿ ಸೋದರ, ಸೋದರಿಯರು ಇದ್ದಾರೆ, ಅವರಿಗೂ ಯಾವುದೇ ಅಧಿಕಾರ ಸಿಕ್ಕಿಲ್ಲ. ಅಲ್ಲಿ ಸಂವಿಧಾನವೇ ಇರಲಿಲ್ಲ. ನಾನು 370ನೇ ವಿಧಿ ರದ್ದು ಮಾಡಿ ಎಲ್ಲರಿಗಿಂತ ಹೆಚ್ಚು ಸಂವಿಧಾನದ ಸೇವೆ ಮಾಡಿದ್ದೇನೆ. ಜಮ್ಮು ಕಾಶ್ಮೀರದಲ್ಲಿ ಭಾರತ ಸಂವಿಧಾನ ಜಾರಿ ಮಾಡಿದ್ದೇನೆ ಎಂದು ಮೋದಿ ಸ್ಪಷ್ಟನೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ವಿರೋಧ ಪಕ್ಷದವರು ಬಾರದಿರುವುದರ ಬಗ್ಗೆಯೂ ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೋದಿ, ಪ್ರಭು ಶ್ರೀರಾಮನ ಮೇಲೆ ನಾವು ಅಧಿಕಾರ ಚಲಾಯಿಸಲು ಸಾಧ್ಯವೇ? ಪ್ರಭು ರಾಮನದ್ದು ಎಷ್ಟೊಂದು ಮಹಾನ್ ವ್ಯಕ್ತಿತ್ವ. ಕಾಂಗ್ರೆಸ್ ಸುಮ್ಮನೆ ಏನೇನೋ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಆತ ಎಲ್ಲರ ರಾಮ. ರಾಮನ ಮೇಲೆ ಯಾರ ಮಾಲೀಕತ್ವವೂ ನಡೆಯೋದಿಲ್ಲ. ಕಾಂಗ್ರೆಸ್ನವರಿಗೆ ರಾಮ ಮಂದಿರ ಆದರೆ ಅವರ ವೋಟ್ ಬ್ಯಾಂಕ್ ಹೋಗುತ್ತದೆ ಎನಿಸಿದೆ. ಅದೇ ಭಯದಿಂದ ಅವರು ಮಾತನಾಡುತ್ತಿದ್ದಾರೆ. ಮೊದಲೆಲ್ಲ ರಾಜೀವ್ ಗಾಂಧಿಯಿಂದ ಹಿಡಿದು ಎಲ್ಲ ಕಾಂಗ್ರೆಸ್ ನಾಯಕರೂ ಚುನಾವಣೆ ವೇಳೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆದರೆ, ಈಗ ಕಾಂಗ್ರೆಸ್ನವರು ದೇವಸ್ಥಾನಕ್ಕೆ ಹೋಗುತ್ತಿಲ್ಲ. ಇದಕ್ಕೆ ಕಾರಣ ವೋಟ್ ಬ್ಯಾಂಕ್ ರಾಜಕಾರಣ. ಈ ಸಂದರ್ಶನ ನೋಡಿದ ಮೇಲೆ ಅವರು ನಾಟಕ ಮಾಡಿದ್ರೂ ಮಾಡಬಹುದು. ಅದು ಬೇರೆ ವಿಚಾರ. ಇವರ ಆಟ ವೋಟ್ ಬ್ಯಾಂಕ್ ಸುತ್ತಮುತ್ತವೇ ಇದೆ. ದೇಶ, ದೇಶದ ಜನರ ಭಾವನೆ, ಜನರ, ಕನಸು, ಸಂಕಲ್ಪಗಳೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರ:
ಮಹಾರಾಷ್ಟ್ರದ ರಾಜಕಾರಣದ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎನ್ಸಿಪಿ ನಮ್ಮ ಜೊತೆಗೆ ಇದೆ. ಹೀಗಾಗಿ, ಕುಟುಂಬ ರಾಜಕಾರಣದ ಬಗ್ಗೆ ಜನರಲ್ಲಿ ಗೊಂದಲ ಏಳುವುದು ಸಹಜ. ಬಾಳಾ ಸಾಹೇಬ್ ಅವರಂಥೂ ಶಿವಸೈನಿಕರಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟಿದ್ರು. ಮಹಾರಾಷ್ಟ್ರದ ಮತದಾರರು ಭಾವನಾತ್ಮಕವಾಗಿ ನಮ್ಮ ಜೊತೆಗೆ ಇದ್ದಾರೆ. ಇನ್ನು ಶರದ್ ಅವರ ವಿಚಾರ ತೆಗೆದುಕೊಳ್ಳೋದಾದ್ರೆ, ಇದು ರಾಜಕೀಯ ಸಮಸ್ಯೆ ಅಲ್ಲವೇ ಅಲ್ಲ. ಅವರು ಅದನ್ನ ಎಷ್ಟೇ ರಾಜಕೀಯ ಸಮಸ್ಯೆ ಅಂತಾ ಬಿಂಬಿಸಿದ್ರೂ ಇದು ಪರಿಪೂರ್ಣವಾಗಿ ಅವರ ಕುಟುಂಬದ ಸಮಸ್ಯೆ ಆಗಿದೆ. ಮನೆಯ ಜಗಳವಾಗಿದೆ. ಅದೇನಂದರೆ ಅಧಿಕಾರ ಕೆಲಸ ಮಾಡುವ ಅಳಿಯನಿಗೋ, ಅಥವಾ ಮಗಳಿದ್ರೆ ಮಗಳಿಗೆ ಕೊಡಬೇಕು ಅನ್ನೋದಾಗಿದೆ. ಜಗಳ ಅವರ ನಡುವೆ ಇದೆ. ಹೀಗಾಗಿ ಅನುಕಂಪದ ಬದಲಾಗಿ ಅಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಈ ವಯಸ್ಸಿನಲ್ಲಿ ಕುಟುಂಬವನ್ನ ನಿಭಾಯಿಸೋಕೆ ಆಗ್ತಿಲ್ಲ ಅವರಿಗೆ. ಔರಂಗಜೇಬನನ್ನು ಹೊಗಳುವರ ಜೊತೆಗೆ ಬಾಳಾ ಸಾಹೇಬ್ ಅವರ ಪುತ್ರ ಕೂತಿದ್ದಾನೆ. ಇದರ ಸಿಟ್ಟು ಮಹಾರಾಷ್ಟ್ರದಾದ್ಯಂತ ಹರಡಿದೆ. ಸಾವರ್ಕರ್ ಅವರನ್ನ ಅಪಮಾನ ಮಾಡೋರ ಜೊತೆಗೆ ಯಾರಾದ್ರೂ ಕೂತ್ರೆ ಜನರ ಮನಸ್ಸಿನಲ್ಲಿ ಸಹಜವಾಗೇ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ: PM Modi Interview: ಕಾಂಗ್ರೆಸ್ ಗ್ಯಾರಂಟಿ ಅಸಲಿಯತ್ತು ಜನರಿಗೆ ಗೊತ್ತಾಗ್ತಿದೆ-ನರೇಂದ್ರ ಮೋದಿ ವಾಗ್ದಾಳಿ
ತೆಲಂಗಾಣ:
ತೆಲಂಗಾಣ ರಾಜಕಾರಣದ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ, ತೆಲಂಗಾಣದಲ್ಲಿ ಭ್ರಷ್ಟಾಚಾರದ ಜಾಲ ಇದೆ. ಬಿಆರ್ಎಸ್ ಮತ್ತು ಕಾಂಗ್ರೆಸ್ ಜನರು ಇದ್ದಾರೆ. ಅಬಕಾರಿ ವಿಚಾರವಾಗಿ ಎಷ್ಟು ಹಗರಣ ಇದೆಯೋ ಅದರಲ್ಲಿ ಬಿಆರ್ಎಸ್ನವರ ಹೆಸರು ಕೇಳಿಬಂದಿದೆ. ದೆಹಲಿ ಸರ್ಕಾರ ಇದೇ ಕೇಸ್ನಲ್ಲಿ ಸಿಲುಕಿಕೊಂಡಿದೆ. ಈ ಪಂಜಾಬ್ ಸರ್ಕಾರದ ನೆತ್ತಿ ಮೇಲೂ ಕತ್ತಿ ಬೀಸುತ್ತಿದೆ. ಈ ಜನರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅದರರ್ಥ ಬಿಆರ್ಎಸ್ ಸಹ ಅವರ ಜೊತೆಗೆ ಇದ್ದಾರೆ. ರೇವಂತ್ ರೆಡ್ಡಿ ಅಲ್ಲಿ ಕಮಿಷನ್ ಸಿಗುವ ಯಾವ ಸಣ್ಣ ವಿಚಾರವನ್ನೂ ಬಿಡುತ್ತಿಲ್ಲ ಎಂದಿದ್ದಾರೆ.
ತೆಲಂಗಾಣ ಸಿಎಂ ರೆಡ್ಡಿ ಅವರು ನಿಮ್ಮನ್ನ ದೊಡ್ಡಣ್ಣ ಎಂದು ಹೇಳಿದ್ದಾರೆ. ಈ ಬಗ್ಗೆ ಏನಂತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ನರೇಂದ್ರ ಮೋದಿ, ಒಂದು ವೇಳೆ ಭ್ರಷ್ಟಾಚಾರದಲ್ಲಿ ಮೆಡಲ್ ಏನಾದ್ರೂ ಸಿಗ್ತಿದ್ರೆ, ಕಾಂಗ್ರೆಸ್ಗೆ ಬಂಗಾರದ ಪದಕ ಸಿಗುತ್ತೆ. ಬಿಆರ್ಎಸ್ಗೆ ಬೆಳ್ಳಿ ಪದಕ ಸಿಗುತ್ತದೆ. ಇನ್ನೊಂದೆಡೆ ಅವರು ನನಗೆ ದೊಡ್ಡಣ್ಣ ಎಂದು ಹೇಳಿದ್ದಾರೆ, ಅದಕ್ಕಾಗಿ ನಾನು ಆಭಾರಿಯಾಗಿರುತ್ತೇನೆ. ನಿಜವಾಗಿಯೂ ಅವರಲ್ಲಿ ದೊಡ್ಡವ ಮತ್ತು ಸಣ್ಣವ ಅನ್ನೋ ಭಾವ ಇದ್ರೆ ದೊಡ್ಡವರಿಂದ ಕೆಲವೊಂದಿಷ್ಟನ್ನು ಕಲಿಯಬೇಕು. ಪ್ರಾಮಾಣಿಕವಾಗಿ ಸರ್ಕಾರವನ್ನ ನಡೆಸಬೇಕು ಎಂದು ಚಾಟಿ ಬೀಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 pm, Thu, 2 May 24