ಲಖನೌ: ಬಹು ಅಂಗಾಂಗ ವೈಫಲ್ಯದಿಂದ ನಿಧನರಾದ ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (Kalyan Singh) ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಲಖನೌಗೆ ಆಗಮಿಸಿದ್ದಾರೆ. ಏರ್ಪೋರ್ಟ್ಗೆ ಬಂದಿಳಿದ ಪ್ರಧಾನಿ ಮೋದಿಯವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರಮಾಡಿಕೊಂಡಿದ್ದಾರೆ. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಇದ್ದರು. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತಿತರ ಗಣ್ಯರೂ ಕೂಡ ಕಲ್ಯಾಣ್ ಸಿಂಗ್ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಕಲ್ಯಾಣ್ ಸಿಂಗ್ ಪಾರ್ಥಿವ ಶರೀರವನ್ನು ಇಟ್ಟಿರುವ ಲಖನೌದ ಅವರ ನಿವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಅಂತಿಮವಾಗಿ ಗೌರವ ಸಲ್ಲಿಸಿದರು. ಕಲ್ಯಾಣ್ ಸಿಂಗ್ ಅವರು ಜನಹಿತವನ್ನು ಮಂತ್ರವನ್ನಾಗಿಸಿಕೊಂಡಿದ್ದರು. ಉತ್ತರಪ್ರದೇಶ ಮತ್ತು ಇಡೀ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರು ಪ್ರಾಮಾಣಿಕತೆ ಮತ್ತು ಉತ್ತಮ ಆಡಳಿತಕ್ಕೆ ಇನ್ನೊಂದು ಹೆಸರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
PM Modi paid his last respects to former UP CM Kalyan Singh at the latter’s residence in Lucknow
“Kalyan Singh ji made Jan Kalyan his life mantra. He worked for the development of UP & the nation. He became synonymous with honesty & good administration,” tweets PM Narendra Modi pic.twitter.com/MTUrPcR1VY
— ANI (@ANI) August 22, 2021
ನಾಳೆ ಅಂತ್ಯಕ್ರಿಯೆ
ಕಲ್ಯಾಣ್ ಸಿಂಗ್ ಅನಾರೋಗ್ಯಕ್ಕೀಡಾಗಿ ಲಖನೌದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದ ಅವರು ನಿನ್ನೆ ಮೃತಪಟ್ಟಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಲ್ಯಾಣ್ ಸಿಂಗ್ ಅಂತ್ಯಕ್ರಿಯೆ ನಾಳೆ (ಸೋಮವಾರ) ನರೋರಾದಲ್ಲಿರುವ ಗಂಗಾ ನದಿಯ ದಡದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಕಲ್ಯಾಣ್ ಸಿಂಗ್ ಮೃತದೇಹವನ್ನು ಇಂದು ವಿಧಾನಸಭೆಗೆ ತೆಗೆದುಕೊಂಡು ಹೋಗಿ, ಅಲ್ಲೇ ಆವರಣದಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಲ್ಲಿಂದ ಬಿಜೆಪಿ ಕಚೇರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಂತಿಮ ದರ್ಶನ ಪಡೆಯಲು 2.30ರವರೆಗೆ ಅವಕಾಶ ಇದೆ ಎಂದು ಉತ್ತರ ಪ್ರದೇಶ ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಅವನೀಶ್ ಕೆ. ಅವಸ್ಥಿ ತಿಳಿಸಿದ್ದಾರೆ. ಅದಾದ ಮೇಲೆ ಪಾರ್ಥಿವ ಶರೀರವನ್ನು ಅಲಿಗಡ್ನ ಸ್ಟೇಡಿಯಂಗೆ ಒಯ್ಯಲಾಗುವುದು. ಅಲ್ಲಿ ಸಾಮಾನ್ಯ ಜನರು ತಮ್ಮ ಅಂತಿಮ ಗೌರವ ಸಲ್ಲಿಸಬಹುದು. ಅಲ್ಲಿಂದ ಪಾರ್ಥಿವ ಶರೀರವನ್ನು ಅಟ್ರೌಲಿಗೆ ಕೊಂಡೊಯ್ಯಲಾಗುತ್ತದೆ. ನಾಳೆ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರಿಂದ ಸಂತಾಪ
ನಿನ್ನೆ ಕಲ್ಯಾಣ್ ಸಿಂಗ್ ನಿಧನರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಲ್ಯಾಣ್ ಸಿಂಗ್ ಜೀ ನಿಧನದ ದುಃಖವನ್ನು ನನಗೆ ಶಬ್ದದಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಅವರೊಬ್ಬ ಸಮರ್ಥ ರಾಜನೀತಿಜ್ಞ, ಹಿರಿಯ ಆಡಳಿತಗಾರ, ತಳಮಟ್ಟದಿಂದ ಪಕ್ಷಸಂಘಟನೆಗೆ ದುಡಿದ ನಾಯಕ, ಮಹಾನ್ ವ್ಯಕ್ತಿ. ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ. ಕಲ್ಯಾಣ್ ಸಿಂಗ್ ಪುತ್ರ ರಾಜ್ವೀರ್ ಸಿಂಗ್ ಜತೆ ಮಾತುಕತೆ ನಡೆಸಿದ್ದೇನೆ ಎಂದು ಮೋದಿಯವರು ಟ್ವೀಟ್ ಮಾಡಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ, ಕಲ್ಯಾಣ್ ಸಿಂಗ್ ಅವರು ರಾಮ ಜನ್ಮಭೂಮಿ ಆಂದೋಲನದ ಹೀರೋ ಎಂದು ಬಣ್ಣಿಸಿದ್ದಾರೆ. ಕಲ್ಯಾಣ್ ಸಿಂಗ್ ನೀಡಿದ ಕೊಡುಗೆಗಾಗಿ ಅವರನ್ನು ಇಡೀ ದೇಶ ಸದಾ ಸ್ಮರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Kalyan Singh: ಉತ್ತರ ಪ್ರದೇಶದ ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ನಿಧನ
Haqqani Network: ಮನುಷ್ಯತ್ವದ ಮುಖ ನೋಡದ ಹಕ್ಕಾನಿಗಳು ಅಫ್ಘಾನಿಸ್ತಾನದಲ್ಲಿ ಓಡಾಡುತ್ತಿದ್ದಾರೆ; ಯಾರಿವರು?
Published On - 11:48 am, Sun, 22 August 21