ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ಗೆ ಫೋನ್ ಮಾಡಿ, ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿಯವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಾಯಿಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಾಂತ್ವನ ಹೇಳಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಗಣ್ಯರು ಯೋಗಿ ಆದಿತ್ಯನಾಥ್ ಅವರ ತಾಯಿಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ಗೆ ಫೋನ್ ಮಾಡಿ, ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಯೋಗಿ ಆದಿತ್ಯನಾಥ್​- ಪ್ರಧಾನಿ ಮೋದಿ
Image Credit source: PTI

Updated on: Nov 20, 2026 | 6:26 PM

ನವದೆಹಲಿ, ನವೆಂಬರ್ 20: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ನಿಧನರಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಯೋಗಿ ಆದಿತ್ಯನಾಥ್ ಅವರೊಂದಿಗೆ ಫೋನ್​ ಮಾಡಿ ಮಾತನಾಡಿ ತೀವ್ರ ಸಂತಾಪ ಸೂಚಿಸಿದ್ದಾರೆ. 91 ವರ್ಷದ ಸಾವಿತ್ರಿ ದೇವಿ ಅವರು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿರುವ ತಮ್ಮ ಪೂರ್ವಿಕರ ಗ್ರಾಮವಾದ ಪಂಚೂರ್‌ನಲ್ಲಿ ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ನಿಧನರಾದರು.

ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಪ್ರಧಾನಿ ಮೋದಿ, ಅವರ ತಾಯಿಯ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ದುಃಖದ ಸಂದರ್ಭದಲ್ಲಿ ಇಡೀ ದೇಶ ಮತ್ತು ಪಕ್ಷದ ಕಾರ್ಯಕರ್ತರು ಅವರ ಕುಟುಂಬದೊಂದಿಗೆ ನಿಂತಿದ್ದಾರೆ ಎಂದು ಪ್ರಧಾನಿಗಳು ಧೈರ್ಯ ತುಂಬಿದ್ದಾರೆ.

Loading...


ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ಗಣ್ಯರು ಕೂಡ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್ ತಾಯಿ ಸಾವಿತ್ರಿ ದೇವಿ ವಿಧಿವಶ, ನೋವಿನಲ್ಲೂ ಭಾಷಣ ಮುಂದುವರೆಸಿದ ಸಿಎಂ

ಹರಿದ್ವಾರದಲ್ಲಿ ಅಂತ್ಯಕ್ರಿಯೆ:

ಪೌರಿ ಗರ್ವಾಲ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸರ್ವೇಶ್ ಪನ್ವಾರ್ ಸಿಎಂ ಯೋಗಿ ಆದಿತ್ಯನಾಥ್​ ಅವರ ತಾಯಿ ಸಾವಿತ್ರಿ ದೇವಿಯ ನಿಧನವನ್ನು ಖಚಿತಪಡಿಸಿದ್ದಾರೆ. ಪೊಲೀಸರು ಮತ್ತು ಜಿಲ್ಲಾಡಳಿತವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಶನಿವಾರ ಹರಿದ್ವಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

ಇಂದು ಗೋರಖ್‌ಪುರದಲ್ಲಿ ನಡೆದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್ ತಮ್ಮ ತಾಯಿಯ ನಿಧನದ ಸುದ್ದಿ ತಿಳಿದ ನಂತರವೂ ನಿಗದಿತ ಕಾರ್ಯಕ್ರಮವನ್ನು ಮುಂದುವರಿಸಿದರು. ಸುದ್ದಿ ಬಂದಾಗ ಕಾರ್ಯಕ್ರಮವು ಈಗಾಗಲೇ ಪ್ರಾರಂಭವಾಗಿತ್ತು. ಹೀಗಾಗಿ, ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆ ಕಾರ್ಯಕ್ರಮ ಮುಗಿಸಿ ಅವರು ತಮ್ಮ ತಾಯಿಯ ಅಂತಿಮ ದರ್ಶನಕ್ಕೆ ಧಾವಿಸಿದ್ದಾರೆ. ಆ ಕಾರ್ಯಕ್ರಮದ ಆಯೋಜಕರು ಸಾಂಪ್ರದಾಯಿಕ ಸ್ವಾಗತವನ್ನು ಕೈಬಿಟ್ಟು, ಸಾವಿತ್ರಿ ದೇವಿ ಅವರಿಗೆ ಸಂಕ್ಷಿಪ್ತವಾಗಿ ಶ್ರದ್ಧಾಂಜಲಿ ಸಲ್ಲಿಸಿದರು.

ಇದನ್ನೂ ಓದಿ: ಅಯೋಧ್ಯೆಗೆ ಅಖಿಲೇಶ್ ಯಾದವ್ ಭೇಟಿ: ರಾಮಭಕ್ತರಲ್ಲಿ ಮೊದಲು ಕ್ಷಮೆ ಕೇಳಿ ಎಂದ ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ಅವರು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿ ಅತ್ಯಂತ ಸರಳ ಮತ್ತು ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಈ ವರ್ಷದ ಮೇ ತಿಂಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಪಂಚೂರ್‌ನಲ್ಲಿರುವ ತಮ್ಮ ತಾಯಿಯನ್ನು ಭೇಟಿಯಾಗಿದ್ದರು. ಆ ಭೇಟಿಯ ಸಮಯದಲ್ಲಿ, “ನನ್ನನ್ನು ಗುರುತಿಸುತ್ತೀಯಾ?” ಎಂದು ಅವರು ತಾಯಿಯನ್ನು ಕೇಳಿದ್ದರು. ಸಾವಿತ್ರಿ ದೇವಿ ಅವರ ನೆನಪಿನ ಶಕ್ತಿ ಕ್ಷೀಣಿಸಿದ್ದು, ತಮ್ಮ ಕುಟುಂಬದ ಸದಸ್ಯರನ್ನು ಗುರುತಿಸಲು ಅವರಿಗೆ ಕಷ್ಟವಾಗುತ್ತಿತ್ತು.

ಇಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಸಾವಿತ್ರಿ ದೇವಿ ಅವರ ನಿಧನವು ಕುಟುಂಬಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ. ತಾಯಿಯ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದಗಳು ಜೀವನದ ಅತ್ಯಂತ ಅಮೂಲ್ಯ ಕೊಡುಗೆಗಳಾಗಿವೆ ಎಂದು ಅವರು ಬರೆದಿದ್ದಾರೆ. ಸಾವಿತ್ರಿ ದೇವಿ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಯೋಗಿ ಆದಿತ್ಯನಾಥ್ ಮತ್ತು ಅವರ ಕುಟುಂಬಕ್ಕೆ ಬಾಬಾ ಕೇದಾರನಾಥನು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ರಾಜನಾಥ್ ಸಿಂಗ್, ಓಂ ಬಿರ್ಲಾ ಸಂತಾಪ:

ಜೀವನದ ಯಾವುದೇ ಹಂತದಲ್ಲಿ ತಾಯಿಯನ್ನು ಕಳೆದುಕೊಳ್ಳುವುದು ಅತ್ಯಂತ ನೋವಿನ ಆಘಾತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಯೋಗಿ ಆದಿತ್ಯನಾಥ್ ಮತ್ತು ಕುಟುಂಬದ ಇತರ ಸದಸ್ಯರಿಗೆ ತಮ್ಮ ಸಾಂತ್ವನ ತಿಳಿಸಿದ್ದಾರೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೂ ಸಹ ಸಂತಾಪ ಸೂಚಿಸಿದ್ದು, ಈ ನಷ್ಟವನ್ನು ಭರಿಸುವ ಶಕ್ತಿ ಕುಟುಂಬಕ್ಕೆ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಸಂತಾಪ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us