ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಪಂಜಾಬ್, ಕರ್ನಾಟಕ, ಬಿಹಾರ್ ಮತ್ತು ಉತ್ತಾರಖಂಡ್ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ರಾಜ್ಯಗಳ ಕೊವಿಡ್ -19 ಸ್ಥಿತಿಗತಿಯನ್ನು ಚರ್ಚಿಸಿದರು.
ಕೊವಿಡ್ 2ನೇ ಅಲೆ ಉಲ್ಬಣ ಆಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿಯವರು ಪ್ರತಿದಿನ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಟ್ಟಿಗೆ ವರ್ಚ್ಯುವಲ್ ಆಗಿ ಸಮಾಲೋಚನೆ ನಡೆಸುತ್ತಿದ್ದಾರೆ. ಆಂಧ್ರಪ್ರದೇಶ, ಜಾರ್ಖಂಡ, ತೆಲಂಗಾಣ, ಒಡಿಶಾ ಮುಖ್ಯಮಂತ್ರಿಗಳೊಟ್ಟಿಗೆ ಈಗಾಗಲೇ ಮಾತನಾಡಿ, ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯಲ್ಲಿ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿ, ನಿಯಂತ್ರಣಕ್ಕೆ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ರಾಜ್ಯ ಸರ್ಕಾರಗಳು ಒಮ್ಮೆಲೇ ಲಾಕ್ಡೌನ್ ಹೇರಬಾರದು. ಲಾಕ್ಡೌನ್ ಹೇರದೆಯೇ ಕೊರೊನಾ ನಿಯಂತ್ರಿಸುವ ಪ್ರಯತ್ನ ಮಾಡಬೇಕು. ರಾಜ್ಯಸರ್ಕಾರಗಳು ಲಾಕ್ಡೌನ್ನ್ನು ಕೊನೇ ಅಸ್ತ್ರವನ್ನಾಗಿ ಪ್ರಯೋಗಿಸಬೇಕು ಎಂದು ಹೇಳಿದ್ದರು. ಆದರೆ ಕೆಲವು ರಾಜ್ಯಗಳಲ್ಲಿ ಲಾಕ್ಡೌನ್ ಅನಿವಾರ್ಯವಾಗಿದೆ. ಅಷ್ಟಾದರೂ ಸೋಂಕು ಪ್ರಸರಣದ ಚೈನ್ ಬ್ರೇಕ್ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಟ್ಟಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಆರ್ಡರ್ ಮಾಡಿದರೆ ಮನೆಬಾಗಿಲಿಗೆ ಬರುತ್ತದೆ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್; ಈ ಜಿಲ್ಲೆಯಲ್ಲಿ ವಿನೂತನ ಕ್ರಮ
ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಈಡೇರಿತು ರಘು ಗೌಡ ಆಸೆ