Vande Bharat Express: ರಾಜಸ್ಥಾನದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ಮೋದಿ ಏ. 12ಕ್ಕೆ ಚಾಲನೆ

ರಾಜಸ್ಥಾನದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 12ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

Vande Bharat Express: ರಾಜಸ್ಥಾನದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ಮೋದಿ ಏ. 12ಕ್ಕೆ ಚಾಲನೆ
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಪ್ರಧಾನಿ ಮೋದಿ ಚಾಲನೆ (ಸಂಗ್ರಹ ಚಿತ್ರ)

Updated on: Apr 10, 2023 | 9:02 PM

ನವದೆಹಲಿ: ರಾಜಸ್ಥಾನದ ಮೊದಲ ವಂದೇ ಭಾರತ್ ರೈಲಿಗೆ (Vande Bharat Express) ಪ್ರಧಾನಿ ನರೇಂದ್ರ ಮೋದಿ (Narendra Modi) ಏಪ್ರಿಲ್ 12ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ರೈಲು ಜೈಪುರ ಮತ್ತು ದೆಹಲಿ ಕಂಟೋನ್ಮೆಂಟ್ ನಡುವೆ ಚಲಿಸಲಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ವಂದೇ ಭಾರತ್ ರೈಲು ಸೇವೆ ಏಪ್ರಿಲ್ 13ರಿಂದ ಪೂರ್ಣಪ್ರಮಾಣದಲ್ಲಿ ಆರಂಭವಾಗಲಿದ್ದು, ಅಜ್ಮೇರ್ ಹಾಗೂ ದೆಹಲಿ ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಲಭ್ಯವಿರಲಿದೆ. ಜೈಪುರ, ಅಲ್ವಾರ್ ಹಾಗೂ ಗುರುಗ್ರಾಮಗಳಲ್ಲಿ ನಿಲುಗಡೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ನೂತನ ವಂದೇ ಭಾರತ್ ರೈಲು ಅಜ್ಮೇರ್ ಹಾಗೂ ದೆಹಲಿ ಕಂಟೋನ್ಮೆಂಟ್ ಮಧ್ಯೆ 5 ಗಂಟೆ 15 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿದೆ. ಈ ನಿಲ್ದಾಣಗಳ ನಡುವೆ ಪ್ರಸ್ತುತ ಅತಿವೇಗದಲ್ಲಿ ಚಲಿಸುವ ಶತಾಬ್ಧಿ ಎಕ್ಸ್​​ಪ್ರೆಸ್ 6 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತಿದೆ. ಇದಕ್ಕಿಂತಲೂ ವಂದೇ ಭಾರತ್ ರೈಲು ಒಂದು ಗಂಟೆ ಕಡಿಮೆ ಅವಧಿಯಲ್ಲಿ ಗಮ್ಯ ತಲುಪಲಿದೆ.

ಅಜ್ಮೇರ್ ಹಾಗೂ ದೆಹಲಿ ಕಂಟೋನ್ಮೆಂಟ್ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಓವರ್​ಹೆಡ್ ಎಲೆಕ್ಟ್ರಿಕ್ (OHE) ತಂತ್ರಜ್ಞಾನ (ನೂತನ ತಂತ್ರಜ್ಞಾನ) ಹೊಂದಿರುವ ವಿಶ್ವದ ಮೊದಲ ಸೆಮಿ ಹೈಸ್ಪೀಡ್ ಪ್ಯಾಸೆಂಜರ್ ರೈಲು ಆಗಿರಲಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಇದನ್ನೂ ಓದಿ: Vande Bharat Express: ಸಿಕಂದರಾಬಾದ್ – ತಿರುಪತಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಈ ರೈಲು ಪುಷ್ಕರ್, ಅಜ್ಮೀರ್ ಶರೀಫ್ ದರ್ಗಾ ಸೇರಿದಂತೆ ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳ ಸಂಪರ್ಕವನ್ನು ಸುಗಮಗೊಳಿಸಲಿದೆ. ಪರಿಣಾಮವಾಗಿ ಈ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಪಿಎಂಒ ಹೇಳಿದೆ.

ಈ ರೈಲನ್ನು ಶೇ 100ರಷ್ಟು ಸ್ವದೇಶಿ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಈ ರೈಲು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್ ವ್ಯವಸ್ಥೆ, ವೈಫೈ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ.

ಶನಿವಾರವಷ್ಟೇ ಮೋದಿ ಅವರು ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಚಾಲನೆ ನೀಡಿದ್ದರು. ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ನಲ್ಗೊಂಡ, ಗುಂಟೂರು, ಓಂಗೋಲ್ ಮತ್ತು ನೆಲ್ಲೂರು ನಿಲ್ದಾಣಗಳಲ್ಲಿ ನಿಲುಗಡೆ ಇದೆ. ಈ ರೈಲು 10 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ