ಜೈಪುರ: ಅಜ್ಮೀರ್-ದೆಹಲಿ ಕಂಟೋನ್ಮೆಂಟ್ ಮಾರ್ಗದಲ್ಲಿ ಸಂಚರಿಸಲಿರುವ ರಾಜಸ್ಥಾನದ (Rajasthan) ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ (Vande Bharat Express) ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಬುಧವಾರ) ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಮಾರ್ಗದಲ್ಲಿ ಓಡುತ್ತಿರುವ ಪ್ರಸ್ತುತ ವೇಗದ ರೈಲಿಗಿಂತ ಒಂದು ಗಂಟೆ ಮುಂಚಿತವಾಗಿ ರೈಲು ಪ್ರಯಾಣವನ್ನು ಪೂರ್ಣಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಧಾನಿ ಮೋದಿ ಅವರು ಬುಧವಾರ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಉದ್ಘಾಟನೆಯಾದ ರೈಲು ಜೈಪುರ ಮತ್ತು ದೆಹಲಿ ಕಂಟೋನ್ಮೆಂಟ್ ನಡುವೆ ಓಡಾಟ ನಡೆಸಲಿದೆ. ನಿಯಮಿತ ಸೇವೆಗಳು ಗುರುವಾರದಿಂದ ಪ್ರಾರಂಭವಾಗಲಿವೆ. ಆ ರೈಲುಗಳು ಜೈಪುರ, ಅಲ್ವಾರ್ ಮತ್ತು ಗುರುಗ್ರಾಮ್‌ನಲ್ಲಿ ನಿಲುಗಡೆಯೊಂದಿಗೆ ಅಜ್ಮೀರ್ ಮತ್ತು ದೆಹಲಿ ಕಂಟೋನ್ಮೆಂಟ್ ನಡುವೆ ಕಾರ್ಯನಿರ್ವಹಿಸುತ್ತವೆ.
ರೈಲು ದೆಹಲಿ ಕಂಟೋನ್ಮೆಂಟ್ ಮತ್ತು ಅಜ್ಮೀರ್ ನಡುವಿನ ದೂರವನ್ನು 5 ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ. ಶತಾಬ್ದಿ ಎಕ್ಸ್‌ಪ್ರೆಸ್, ಪ್ರಸ್ತುತ ಈ ಮಾರ್ಗದಲ್ಲಿ ಅತ್ಯಂತ ವೇಗದ ರೈಲು ಆಗಿದ್ದು, ಇದು ಇದೇ ದೂರವನ್ನು 6 ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಅಜ್ಮೀರ್-ದೆಹಲಿ ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ಎತ್ತರದ ಓವರ್‌ಹೆಡ್ ಎಲೆಕ್ಟ್ರಿಕ್ ಪ್ರದೇಶದಲ್ಲಿ ವಿಶ್ವದ ಮೊದಲ ಸೆಮಿ-ಹೈ ಸ್ಪೀಡ್ ಪ್ಯಾಸೆಂಜರ್ ರೈಲು ಆಗಿರುತ್ತದೆ.
ಈ ರೈಲು ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳಾದ ಪುಷ್ಕರ್ ಮತ್ತು ಅಜ್ಮೀರ್ ದರ್ಗಾಗಳ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಅದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 8 ರಂದು ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಚೆನ್ನೈನಲ್ಲಿ ಫ್ಲ್ಯಾಗ್ ಆಫ್ ಮಾಡಿದರು. ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಹೊರಡುವ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ನಂತರ ಚಾಲನೆ ಸಿಕ್ಕಿದ ಸೆಮಿ-ಹೈ-ಸ್ಪೀಡ್ ವರ್ಗದ ಎರಡನೇ ರೈಲು ಇದಾಗಿದೆ.
ಇದಕ್ಕೂ ಮುನ್ನ ಜನವರಿಯಲ್ಲಿ ಪ್ರಧಾನಿ ಮೋದಿ ಅವರು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಭಾರತದ ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದರು. ಪ್ರಧಾನಿ ಮೋದಿಯವರು ಭೋಪಾಲ್-ನವದೆಹಲಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಚಾಲನೆ ನೀಡಿದ ಒಂದು ವಾರದ ನಂತರ ಈ ರೈಲಿಗೆ ಚಾಲನೆ ನೀಡಲಾಗಿತ್ತು.
ಇದನ್ನೂ ಓದಿ: ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿದಿದೆ; ಅಮಿತ್ ಶಾ ಭೇಟಿಗೆ ತಕರಾರು ತೆಗೆದ ಚೀನಾಕ್ಕೆ ಭಾರತ ಖಡಕ್ ಉತ್ತರ
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ನಲ್ಗೊಂಡ, ಗುಂಟೂರು, ಓಂಗೋಲ್ ಮತ್ತು ನೆಲ್ಲೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದ್ದು, ನಗರಗಳ ನಡುವಿನ 660 ಕಿಮೀ ಪ್ರಯಾಣವನ್ನು ಇದು ಒಳಗೊಂಡಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಥಳೀಯವಾಗಿ ತಯಾರಿಸಿದ, ಸೆಮಿ-ಹೈ ಸ್ಪೀಡ್ ಮತ್ತು ಸ್ವಯಂ ಚಾಲಿತ ರೈಲು ಆಗಿದೆ. ರೈಲು ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ವೇಗವಾದ, ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ಒದಗಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ