ಆಂಧ್ರಪ್ರದೇಶಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ; 5,000 ಕೋಟಿ ವೆಚ್ಚದ ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ

ನಾಳೆ (ಆಗಸ್ಟ್ 1) ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಭೋಗಾಪುರಂನಲ್ಲಿ ನಿರ್ಮಿಸಲಾಗಿರುವ ‘ಅಲ್ಲುರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸುಮಾರು 5,000 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣವನ್ನು ಜಾಗತಿಕ ಮಟ್ಟದ ನಗರಗಳ ಸಾಲಿನಲ್ಲಿ ನಿಲ್ಲಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.

ಆಂಧ್ರಪ್ರದೇಶಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ; 5,000 ಕೋಟಿ ವೆಚ್ಚದ ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ
Pm Modi
Image Credit source: PTI

Updated on: Jul 31, 2026 | 3:25 PM

ನವದೆಹಲಿ, ಜುಲೈ 31: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಭೋಗಾಪುರಂನಲ್ಲಿ ಸುಮಾರು 5,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ಅಲ್ಲುರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ವನ್ನು (Alluri Sitarama Raju International airport) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಗಸ್ಟ್ 1ರಂದು ಉದ್ಘಾಟಿಸಲಿದ್ದಾರೆ. ಈ ಭೋಗಾಪುರಂ ವಿಮಾನ ನಿಲ್ದಾಣ ಇಡೀ ಉತ್ತರ ಆಂಧ್ರ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನೇ ಬದಲಾಯಿಸಲಿದೆ ಎನ್ನಲಾಗಿದೆ.

ನಾಳೆ ಬೆಳಗ್ಗೆ 10.45ಕ್ಕೆ ಪ್ರಧಾನಿ ಮೋದಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಂಧ್ರಕ್ಕೆ ತೆರಳಲಿದ್ದು, ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸಲಿದ್ದಾರೆ. ಬಳಿಕ ಮೋದಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿ, ಪ್ರಮುಖ ಗಣ್ಯರೊಂದಿಗೆ ವೀಕ್ಷಣೆ ನಡೆಸಲಿದ್ದಾರೆ. ನಂತರ ತೆರೆದ ವಾಹನದಲ್ಲಿ ಸಾರ್ವಜನಿಕ ಸಭೆಯ ಸ್ಥಳಕ್ಕೆ ಪ್ರಯಾಣಿಸಲಿದ್ದು, ಅಲ್ಲಿ 13,500ಕ್ಕೂ ಹೆಚ್ಚು ಗಿರಿಜನ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ‘ಧಿಂಸಾ’ ನೃತ್ಯದ ಮೂಲಕ ಮೋದಿಯನ್ನು ಸ್ವಾಗತಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು

ವಿಮಾನ ನಿಲ್ದಾಣದ ವಿಶೇಷತೆ:

ಮೊದಲ ಹಂತದಲ್ಲಿ ವರ್ಷಕ್ಕೆ 60 ಲಕ್ಷ ಪ್ರಯಾಣಿಕರ ಸಂಚಾರವನ್ನು ಕಾಯ್ದುಕೊಳ್ಳಲು ವಿನ್ಯಾಸಗೊಳಿಸಲಾಗಿದ್ದು, ಭವಿಷ್ಯದಲ್ಲಿ ಇದನ್ನು ವರ್ಷಕ್ಕೆ 4 ಕೋಟಿಗೆ ಹೆಚ್ಚಿಸುವ ಮಾಸ್ಟರ್ ಪ್ಲಾನ್ ಹೊಂದಲಾಗಿದೆ. ಜಿಎಮ್‌ಆರ್ ವಿಶಾಖಪಟ್ಟಣಂ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) 2,703.26 ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಿದೆ. ಇದರಲ್ಲಿ 2,203 ಎಕರೆಯಲ್ಲಿ ವಿಮಾನ ನಿಲ್ದಾಣ, 500 ಎಕರೆಯಲ್ಲಿ ‘ಏವಿಯೇಷನ್ ಹಬ್’ ಹಾಗೂ 136 ಎಕರೆಯಲ್ಲಿ ‘ಏವಿಯೇಷನ್ ಯುನಿವರ್ಸಿಟಿ ಮತ್ತು ಎಡುಸಿಟಿ’ ಸೇರಿವೆ.


ಈ ವಿಮಾನ ನಿಲ್ದಾಣದ ವಿನ್ಯಾಸವು ಬಂಗಾಳ ಕೊಲ್ಲಿ ಮತ್ತು ಉತ್ತರ ಆಂಧ್ರದ ಕಡಲ ಪರಂಪರೆಯನ್ನು ಬಿಂಬಿಸುವ ‘ಹಾರುವ ಮೀನಿನ’ ಆಕಾರದಿಂದ ಪ್ರೇರಿತವಾಗಿದೆ. ಮೇಲ್ಛಾವಣಿಯಲ್ಲಿ ಸಾಂಪ್ರದಾಯಿಕ ರಂಗೋಲಿ ಶೈಲಿಯನ್ನು ಬಳಸಲಾಗಿದೆ. ಶೇಕಡಾ 30ರಷ್ಟು ನೀರಿನ ಅಗತ್ಯವನ್ನು ಮರುಬಳಕೆಯ ನೀರಿನಿಂದ ಪೂರೈಸಿಕೊಳ್ಳಲಾಗುತ್ತಿದ್ದು, ಇದು LEED ಪ್ಲಾಟಿನಂ ಉನ್ನತ ಮಟ್ಟದ ಪರಿಸರ ಮಾನದಂಡಗಳನ್ನು ಹೊಂದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ

ಈ ಯೋಜನೆಗೆ ಆಂಧ್ರಪ್ರದೇಶ ಸರ್ಕಾರವು ಭೂಸ್ವಾಧೀನ, ನೀರು, ವಿದ್ಯುತ್ ಸಂಪರ್ಕ ಹಾಗೂ ರಸ್ತೆ ಮೂಲಸೌಕರ್ಯಗಳಿಗಾಗಿ 1,583 ಕೋಟಿ ರೂ. ಹೂಡಿಕೆ ಮಾಡಿದೆ. ಈ ವಿಮಾನ ನಿಲ್ದಾಣವು ಅರಕು, ಲಂಬಸಿಂಗಿ, ವಿಶಾಖಪಟ್ಟಣಂ, ವಿಜಯನಗರ ಮತ್ತು ಶ್ರೀಕಾಕುಲಂ ಸೇರಿದಂತೆ ಇಡೀ ಉತ್ತರ ಆಂಧ್ರ ಪ್ರದೇಶದ ಪ್ರವಾಸೋದ್ಯಮ, ಐಟಿ, ಔಷಧ, ಉತ್ಪಾದನೆ ಮತ್ತು ರಫ್ತು ಕ್ಷೇತ್ರಗಳಿಗೆ ಹೊಸ ಉತ್ತೇಜನ ನೀಡಲಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Fri, 31 July 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us