ಲಕ್ನೋ: ಉತ್ತರ ಪ್ರದೇಶದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ಮುಂದಿನ ತಿಂಗಳು ಕೇಂದ್ರ ಚುನಾವಣಾ ಆಯೋಗ ಘೋಷಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಉತ್ತರ ಪ್ರದೇಶದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿ ಉದ್ಘಾಟನೆ ನೆರವೇರಿಸಲು ಪ್ರಧಾನಿ ಮೋದಿ ಉತ್ಸುಕವಾಗಿದ್ದಾರೆ. ನೀತಿಸಂಹಿತೆ ಜಾರಿಯಾದ ಬಳಿಕ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸುವಂತಿಲ್ಲ. ಹೀಗಾಗಿ, ಈ ಡಿಸೆಂಬರ್ ತಿಂಗಳಲ್ಲಿ ಇನ್ನುಳಿದ 15 ದಿನಗಳಲ್ಲೇ ನಾಲ್ಕು ಬಾರಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ನಾಲ್ಕು ದಿನಗಳ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಈಗಾಗಲೇ 6 ಬಾರಿ ಉತ್ತರ ಪ್ರದೇಶಕ್ಕೆ ಮೋದಿ ಭೇಟಿ ನೀಡಿದ್ದಾರೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಅಧಿಕೃತ ಕಾರ್ಯಕ್ರಮಗಳಿಗಾಗಿ ಈ ತಿಂಗಳು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶಕ್ಕೆ ಇನ್ನೂ ನಾಲ್ಕು ಬಾರಿ ಭೇಟಿ ನೀಡಲಿದ್ದಾರೆ. ಮೀರತ್‌ನಿಂದ ಪ್ರಯಾಗ್‌ರಾಜ್‌ವರೆಗಿನ 594 ಕಿಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕು ಸ್ಥಾಪನೆ ಮಾಡಲು ಪ್ರಧಾನಿ ಡಿಸೆಂಬರ್ 18ರಂದು ಶಹಜಹಾನ್‌ಪುರಕ್ಕೆ ಭೇಟಿ ನೀಡುವರು. ಬಳಿಕ, ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 21ರಂದು ಪ್ರಯಾಗ್‌ರಾಜ್‌ನಲ್ಲಿ ಸುಮಾರು ಎರಡು ಲಕ್ಷ ಮಹಿಳಾ ಉದ್ಯೋಗಿಗಳನ್ನು ಉದ್ದೇಶಿಸಿ ದೊಡ್ಡ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಪ್ರಧಾನಿಯವರು ಡಿಸೆಂಬರ್ 23ರಂದು ಮತ್ತೆ ತಮ್ಮ ಕ್ಷೇತ್ರ ವಾರಣಾಸಿಯಲ್ಲಿ ಕೃಷಿ ಕ್ಷೇತ್ರದ ಬಗ್ಗೆ ರೈತರೊಂದಿಗೆ ವಿಚಾರ ಸಂಕಿರಣವನ್ನು ನಡೆಸಲಿದ್ದಾರೆ. ನಂತರ ಪ್ರಧಾನಿ ಮೋದಿ ಅವರು ಡಿಸೆಂಬರ್ 28ರಂದು ಕಾನ್ಪುರದಲ್ಲಿ ಕಾನ್ಪುರ ಮೆಟ್ರೋ ಯೋಜನೆ ಮತ್ತು ಐಐಟಿ ಕಾನ್ಪುರ ಘಟಿಕೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಮಂತ್ರಿಯವರು ಕಳೆದ ಒಂದು ತಿಂಗಳಲ್ಲಿ ಉತ್ತರ ಪ್ರದೇಶಕ್ಕೆ ಆರು ಬಾರಿ ಭೇಟಿ ನೀಡಿದ್ದಾರೆ. ಗೋರಖ್‌ಪುರ, ಸುಲ್ತಾನ್‌ಪುರ, ವಾರಣಾಸಿ, ಝಾನ್ಸಿ, ಗ್ರೇಟರ್ ನೋಯ್ಡಾ ಮತ್ತು ಬಲರಾಂಪುರ ಜಿಲ್ಲೆಗಳಿಗೆ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲು ಹಾಗೂ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿಗಳು) ಸಮ್ಮೇಳನಕ್ಕಾಗಿ ಲಕ್ನೋಗೆ ಭೇಟಿ ನೀಡಿದ್ದರು.
ಡಿಸೆಂಬರ್ 18ರಂದು, 2025ರ ವೇಳೆಗೆ ಪೂರ್ಣಗೊಳ್ಳಲಿರುವ ಉತ್ತರ ಪ್ರದೇಶದ ಅತಿ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ಶಹಜಹಾನ್‌ಪುರಕ್ಕೆ ಭೇಟಿ ನೀಡುವರು. ರಸ್ತೆಯು ಪಶ್ಚಿಮದಿಂದ ಪೂರ್ವ ಯುಪಿಗೆ 12 ಜಿಲ್ಲೆಗಳನ್ನು ದಾಟಲಿದೆ. ಹೆದ್ದಾರಿ ಯೋಜನೆಗೆ 94% ರಷ್ಟು ಭೂಮಿ ಸ್ವಾಧೀನಪಡಿಸಿಕೊಂಡಿದೆ. ಯೋಜನೆಗೆ 7,386 ಹೆಕ್ಟೇರ್ ಭೂಮಿ ಅಗತ್ಯವಿದೆ. ಈ ಯೋಜನೆಗೆ 36,230 ಕೋಟಿ ರೂ. ವೆಚ್ಚವಾಗಲಿದ್ದು, ಬಿಡ್‌ಗಳನ್ನು ಅಂತಿಮಗೊಳಿಸಲಾಗಿದೆ.
ಡಿಸೆಂಬರ್ 21ರಂದು, ಪ್ರಯಾಗ್‌ರಾಜ್‌ನಲ್ಲಿ ಉತ್ತರ ಪ್ರದೇಶ ಸರ್ಕಾರದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರ ಬೃಹತ್ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ರಾಜ್ಯಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಸಭೆಯಲ್ಲಿ ಭಾಗಿಯಾಗುವರು. ಆಶಾ ಕಾರ್ಯಕರ್ತೆಯರು, ಸಹಾಯಕ ನರ್ಸ್ ಮಿಡ್‌ವೈಫ್ (ಎಎನ್‌ಎಂ) ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕ್ ಉದ್ಯೋಗಿಗಳನ್ನು ಆಹ್ವಾನಿಸಲಾಗಿದೆ. ಈ ಮಹಿಳಾ ಉದ್ಯೋಗಿಗಳ ಸೇವೆಗಾಗಿ ಪ್ರಧಾನಿ ಪ್ರಶಂಸಿಸಿ ಧನ್ಯವಾದ ಹೇಳುವ ಸಾಧ್ಯತೆ ಇದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಮಹಿಳಾ ಸಬಲೀಕರಣಕ್ಕಾಗಿ ಪ್ರಾರಂಭಿಸಲಾದ ಪ್ರಯೋಜನ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಬಗ್ಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಡಿಸೆಂಬರ್ 23ರಂದು, ಪ್ರಧಾನಮಂತ್ರಿಯವರು ಮತ್ತೆ ವಾರಣಾಸಿಯಲ್ಲಿ ಕೃಷಿ ಕ್ಷೇತ್ರ ಮತ್ತು ರೈತರಿಗಾಗಿ ತಮ್ಮ ದೂರದೃಷ್ಟಿಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಕೂಡ ವೀಡಿಯೋ ಕಾನ್ಫರೆನ್ಸ್ ಮೂಲಕ ರೈತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಇದಾದ ಬಳಿಕ ಇದು ಮೋದಿ ಅವರು ರೈತರನ್ನು ಉದ್ದೇಶಿಸಿ ಮಾಡುವ ಎರಡನೇ ಭಾಷಣವಾಗಿದೆ. ವಾರಣಾಸಿ ವಿಚಾರ ಸಂಕಿರಣವು ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಉದ್ದೇಶಿಸಿದೆ. ಅಲ್ಲಿ ದೇಶದಾದ್ಯಂತದ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು ಮತ್ತು ಕೃಷಿ ತಜ್ಞರು ಭಾಗವಹಿಸುತ್ತಾರೆ. ಡಿಸೆಂಬರ್ 23ರಂದು ದೇಶದಾದ್ಯಂತ ಎಲ್ಲಾ ಮಂಡಲಗಳಲ್ಲಿ ಬಿಜೆಪಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಅಲ್ಲಿ ಮೋದಿ ಸರ್ಕಾರವು ಜಾರಿಗೊಳಿಸುತ್ತಿರುವ ವಿವಿಧ “ರೈತ ಪರ ನೀತಿಗಳು ಮತ್ತು ಕಾರ್ಯಕ್ರಮಗಳ” ಬಗ್ಗೆ ರೈತರಿಗೆ ತಿಳಿಸಲಾಗುವುದು. ಮಂಡಲ ಮಟ್ಟದ ಬಿಜೆಪಿ ಪದಾಧಿಕಾರಿಗಳು ಎಲ್ಲವನ್ನೂ ಟಿಪ್ಪಣಿ ಮಾಡುತ್ತಾರೆ. ರೈತರು ಎದುರಿಸುತ್ತಿರುವ ಸಲಹೆಗಳು ಮತ್ತು ಸಮಸ್ಯೆಗಳನ್ನು ಉನ್ನತ ಅಧಿಕಾರಿಗಳಿಗೆ ಕಳುಹಿಸಿ, ಅಂದು ವಾರಣಾಸಿಯಲ್ಲಿ ಸುರಕ್ಷಿತ ಸಿಟಿ, ಸಿಸಿಟಿವಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಮತ್ತು ಡೈರಿ ಪ್ಲಾಂಟ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಡಿಸೆಂಬರ್ 28ರಂದು, ಕಾನ್ಪುರ್ ಮೆಟ್ರೋ ಯೋಜನೆಯ 9-ಕಿಮೀ ಉದ್ದದ ಮೊದಲ ಹಂತವನ್ನ ಉದ್ಘಾಟಿಸಲು ಮತ್ತು ಐಐಟಿ ಕಾನ್ಪುರದ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಲು ಪ್ರಧಾನಿ ಕಾನ್ಪುರಕ್ಕೆ ಪ್ರಯಾಣಿಸಲಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಕಳೆದ ತಿಂಗಳು ಮೆಟ್ರೋ ರೈಲಿನ ಪ್ರಾಯೋಗಿಕ ಚಾಲನೆಗೆ ಚಾಲನೆ ನೀಡಿದ್ದರು ಮತ್ತು ಡಿಸೆಂಬರ್ 28ರಂದು ಪ್ರಧಾನಿ ಉದ್ಘಾಟಿಸಿದ ನಂತರ ಮೆಟ್ರೋ ಟ್ರೈನ್ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇದು ನೋಯ್ಡಾ, ಘಾಜಿಯಾಬಾದ್ ಮತ್ತು ಲಕ್ನೋ ನಂತರ ಯುಪಿಯಲ್ಲಿನ ನಾಲ್ಕನೇ ಮೆಟ್ರೋ ಯೋಜನೆಯಾಗಿದೆ. ಆದಾಗ್ಯೂ, ಸಮಾಜವಾದಿ ಪಕ್ಷವು ಕಾನ್ಪುರ ಮೆಟ್ರೋ ಯೋಜನೆಗೆ ತನ್ನ ಅಧಿಕಾರಾವಧಿಯಲ್ಲಿ ಅಡಿಪಾಯ ಹಾಕಲಾಗಿದೆ ಎಂದು ಹೇಳಲು ಸಜ್ಜಾಗಿದೆ.
ಇದನ್ನೂ ಓದಿ: Pre-Vibrant Gujarat Summit 2021: ನೈಸರ್ಗಿಕ ಕೃಷಿ ಬಗ್ಗೆ ಇಂದು ದೇಶದ ರೈತರನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ಮೋದಿ
Rain Updates: ಪಂಜಾಬ್, ಉತ್ತರ ಪ್ರದೇಶ ಸೇರಿ ಈ ರಾಜ್ಯಗಳಲ್ಲಿ ನಾಳೆಯಿಂದ ಭಾರೀ ಮಳೆ ಶುರು