ಗಲಭೆಪೀಡಿತ ಮಣಿಪುರಕ್ಕೆ 2 ವರ್ಷದ ಬಳಿಕ ಇಂದು ಮೋದಿ ಭೇಟಿ: ವ್ಯಂಗ್ಯವಾಡಿದ ರಾಹುಲ್​ ಗಾಂಧಿ

ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡುತ್ತಿರುವುದು ಸದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 2 ವರ್ಷದ ಬಳಿಕ ಗಲಭೆಪೀಡಿತ ಮಣಿಪುರಕ್ಕೆ ಭೇಟಿ ನೀಡುತ್ತಿರುವ ಮೋದಿ, 8,500 ಕೋಟಿ ರೂ ಯೋಜನೆ ಮತ್ತು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಗಲಭೆಪೀಡಿತ ಮಣಿಪುರಕ್ಕೆ 2 ವರ್ಷದ ಬಳಿಕ ಇಂದು ಮೋದಿ ಭೇಟಿ: ವ್ಯಂಗ್ಯವಾಡಿದ ರಾಹುಲ್​ ಗಾಂಧಿ
ಪ್ರಧಾನಿ ಮೋದಿ

Updated on: Sep 13, 2025 | 10:59 AM

ದೆಹಲಿ, ಸೆಪ್ಟೆಂಬರ್​ 13: ಮೇ 2023 ರಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಭುಗಿಲೆದ್ದ ಹಿಂಸಾಚಾರ ಇನ್ನೂ ನಡೆಯುತ್ತಲ್ಲೇ ಇದೆ. 260ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಜನಾಂಗೀಯ ಹಿಂಸಾಚರಕ್ಕೆ ಕಣಿವೆ ರಾಜ್ಯ ಮಣಿಪುರ ನಲುಗಿಹೋಗಿದೆ. ಇದರ ನಡುವೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಣಿಪುರಕ್ಕೆ (Manipur)  ಇಂದು ಭೇಟಿ ನೀಡುತ್ತಿದ್ದಾರೆ. ಆ ಮೂಲಕ ಮಣಿಪುರಕ್ಕೆ ಪ್ರಧಾನಿ ಮೋದಿ ಏಕೆ ಹೋಗುತ್ತಿಲ್ಲ ಎಂಬ ವಿಪಕ್ಷಗಳ ನಿರಂತರ ಆರೋಪಗಳ ನಡುವೆ ಭೇಟಿ ನೀಡುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ.

ಮಣಿಪುರದಲ್ಲಿ ಮೋದಿ ಅಭಿವೃದ್ಧಿ ಜಪ: ನಿರಾಶ್ರಿತರ ಭೇಟಿ!

ಕುಕಿ ಸಮುದಾಯ ಹೆಚ್ಚಿರುವ ಮಣಿಪುರದ ಚುರಚಂದ್​ಪುರಕ್ಕೆ ಮೊದಲು ಭೇಟಿ ನೀಡಲಿರುವ ಮೋದಿ ನಿರಾಶ್ರಿತರನ್ನು ಭೇಟಿಯಾಗಲಿದ್ದಾರೆ. ಬಳಿಕ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಇದಾದ ನಂತರ ಮೈತೀಸ್ ಬಹುಸಂಖ್ಯಾತರಾಗಿರುವ ಇಂಫಾಲಕ್ಕೂ ತೆರಳಿ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲೂ ಒಟ್ಟು 8,500 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಮೋದಿ ಮಣಿಪುರ ಭೇಟಿಗೆ ರಾಹುಲ್ ಗಾಂಧಿ ವ್ಯಂಗ್ಯ

ಇನ್ನು ಮೋದಿಯವರು ಮಣಿಪುರ ಭೇಟಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಮಣಿಪುರದಲ್ಲಿ ಬಹಳ ದಿನಗಳಿಂದ ಸಮಸ್ಯೆ ಇದೆ. ಅವರು ಈಗ ಅಲ್ಲಿಗೆ ಹೋಗುತ್ತಿರುವುದು ಒಳ್ಳೆಯದು. ಆದರೆ ದೇಶದ ಪ್ರಮುಖ ಸಮಸ್ಯೆ ‘ವೋಟ್ ಚೋರಿ’. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ನಾವು ಕರ್ನಾಟಕದ ಬಗ್ಗೆ ಸಾಕ್ಷ್ಯ ನೀಡಿದ್ದೇವೆ. ಎಲ್ಲ ಕಡೆ ಜನ ‘ವೋಟ್ ಚೋರ್’ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಮಣಿಪುರಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ; 8,500 ಕೋಟಿ ರೂ. ಯೋಜನೆಗಳಿಗೆ ಚಾಲನೆ

ಮೋದಿ ಸ್ವಾಗತಕ್ಕೆ ಮಣಿಪುರದಲ್ಲಿ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಇದಕ್ಕೆ ಕುಕಿ-ಝೋ ಸಮುದಾಯದ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಣ್ಣಲ್ಲಿ ನೀರು ತುಂಬಿಕೊಂಡು ನೃತ್ಯ ಮಾಡಲು ಸಾಧ್ಯವಿಲ್ಲ ಎಂದಿವೆ. ಮೋದಿ ಭೇಟಿ ಹಿನ್ನೆಲೆ ಮಣಿಪುರದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮಣಿಪುರ ಮುಖ್ಯಮಂತ್ರಿಯಾಗಿದ್ದ ಎನ್ ಬಿರೇನ್ ಸಿಂಗ್ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಹೇರಿದೆ. 2027 ರವರೆಗೆ ಅಧಿಕಾರಾವಧಿ ಹೊಂದಿದ್ದ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಲಾಗಿದೆ. ಈ ಮಧ್ಯೆ ಮೋದಿ ಭೇಟಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.